ಯುಪಿಸಿಎಲ್ ಯೋಜನೆಗಾಗಿ ತ್ಯಾಗ ಮಾಡಿದವರಿಗೆ ಸೂಕ್ತ ನ್ಯಾಯ ದೊರೆಯಬೇಕು-ಲಾಲಾಜಿ ಮೆಂಡನ್

ಪಡುಬಿದ್ರಿ: ಅದಾನಿ-ಯುಪಿಸಿಎಲ್ ಯೋಜನೆಗಾಗಿ ತ್ಯಾಗ ಮಾಡಿದವರಿಗೆ ಸರಿಯಾಗಿ ನ್ಯಾಯ ದೊರೆತಿಲ್ಲ. ಮೂರನೇ ಘಟಕದ ನಿರ್ಮಾಣ ವೇಳೆ ಸರ್ಕಾರಿ ನಿಯಮದಂತೆ ಶೇಕಡಾ 80ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಸಿಎಸ್‍ಆರ್ ಅನುದಾನವನ್ನು ಹೆಚ್ಚಿನ ಶಾಲೆಗಳಿಗೆ ನೀಡಬೇಕು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಅದಾನಿ ಫೌಂಡೇಶನ್ ಮತ್ತು ಯುಪಿಸಿಎಲ್ ಸಹಯೋಗದಲ್ಲಿ ಕಾಪು ಹಾಗೂ ಉಡುಪಿ ತಾಲೂಕಿನ ಶಿಕ್ಷಕರಿಗಾಗಿ ಗುರುವಾರ ಪಡುಬಿದ್ರಿಯ ಹೋಟೆಲ್ ನಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಚ್ಛಾಗ್ರಹ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮೆಂಡನ್ ಮಾತನಾಡಿದರು. ಸ್ವಚ್ಛತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಶಾಲೆಗಳಿಗೆ ಬಹುಮಾನ ನೀಡಬೇಕು ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಅದಾನಿ-ಯುಪಿಸಿಎಲ್ ಸಂಸ್ಥೆಗೆ ಸಲಹೆ ನೀಡಿದರು.

ಮಹಾತ್ಮ ಗಾಂಧೀಜಿ ನಂತರ ಪ್ರಧಾನಿಯವರು ಕಳೆದ ನಾಲ್ಕು ವರ್ಷಗಳ ಹಿಂದೆ ಸ್ವಚ್ಛತೆಯನ್ನು ಸಮರ್ಪಕವಾಗಿ ಅನುಷ್ಟಾನಿಸಲು ಪಣ ತೊಟ್ಟಿದ್ದಾರೆ. ಸ್ವಚ್ಛತೆ ಪ್ರತಿಯೊಬ್ಬರ ಮನದಲ್ಲಿಯೂ ಮೂಡಬೇಕು. ಕಾಪು ಕ್ಷೇತ್ರದ ಅಲೆವೂರಿನಲ್ಲಿ ನಿರ್ಮಿಸಿದ ಉಡುಪಿ ನಗರಸಭೆಯ ಘನತ್ಯಾಜ್ಯ ನಿರ್ವಹಣಾ ಘಟಕ ಅಸಮರ್ಪಕವಾಗಿರುವುದರಿಂದ ತೊಂದರೆಗಳಾಗುತ್ತಿವೆ. ಎಲ್ಲೂರು ಗ್ರಾಮದ ಅದಾನಿ-ಯುಪಿಸಿಎಲ್ ಸ್ಥಾವರದ ಬಳಿ ನಿರ್ಮಿಸಲುದ್ದೇಶಿಸಿರುವ ಕಾಪು ಪುರಸಭೆಯ ಘನತ್ಯಾಜ ನಿರ್ವಹಣ ಘಟಕದ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಕಾನೂನು ಹೋರಾಟವೂ ನಡೆಯುತ್ತಿದ್ದು, ಅನುಮಾನಗಳನ್ನು ಪರಿಹರಿಸಿ ಯೋಜನೆ ಅನುಷ್ಟಾನವಾಗುವ ಬಗ್ಗೆ ನಿರ್ಣಾಯಕ ಹಂತಕ್ಕೆ ಬರುವ ವಿಶ್ವಾಸವಿದೆ ಎಂದರು.

18 ರಾಜ್ಯಗಳ 72 ನಗರಗಳ 4,340 ಶಾಲೆಗಳಲ್ಲಿ ಸ್ವಚ್ಛಾಗ್ರಹ ಕಾರ್ಯಕ್ರಮ ಅನುಷ್ಟಾನಿಸಲಾಗಿದೆ. ಗಾಂಧೀಜಿಯವರ ಸತ್ಯಾಗ್ರಹ ಆಂದೋಲನ ಮಾದರಿಯಲ್ಲಿ ಸ್ವಚ್ಛಾಗ್ರಹ ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ಕಾಪು ತಾಲೂಕಿನ 156 ಶಾಲೆಗಳ ಶಿಕ್ಷಕರಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಅದಾನಿ-ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ವಿವರಿಸಿದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಜಿಪಂ ಸದಸ್ಯೆಯರಾದ ಗೀತಾಂಜಲಿ ಸುವರ್ಣ, ರೇಷ್ಮಾ ುದಯ ಶೆಟ್ಟಿ, ಡಿಡಿಪಿಐ ಶೇಷಶಯನ ಕಾರಿಂಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ.ಪಿ., ಜಿಗ್ನೇಶ್ ಪಿ.ಬಾಂಡ್ಲಿ, ಯುಪಿಸಿಎಲ್ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ ಉಪಸ್ಥಿತರಿದ್ದರು.

ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.