ಯಕ್ಷಗಾನ ಗುರು ಎರ್ಮಾಳು ವಾಸುದೇವರಾಯರಿಗೆ ಗುರು ವಂದನೆ

ಪಡುಬಿದ್ರಿ: ಬಡಗು ತಿಟ್ಟಿನ ಲಯಬದ್ಧ ಮದ್ದಲೆ ನುಡಿಸುವುದರಲ್ಲಿ ಛಾಪು ಹೊಂದಿದ್ದ ಎರ್ಮಾಳು ವಾಸುದೇವರಾಯರು ಹಿರಿಯ ತಲೆಮಾರಿನ ವ್ಯಕ್ತಿಗಳನ್ನು ಸೇರಿಸಿಕೊಂಡು ಅದಮಾರು ಪರಿಸರದಲ್ಲಿ ಯಕ್ಷಗಾನ ಕಲಾಸಂಘಟಕನಾಗಿ ಸಾಧನೆ ಮಾಡಿದ್ದಾರೆ ಎಂದು ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ಎಲ್.ರಾವ್ ಹೇಳಿದರು.

ಅದಮಾರು ಆದರ್ಶ ಸಂಘಗಳ ಒಕ್ಕೂಟ, ಆದರ್ಶ ಯುವಕ ಸಂಘ, ಮಹಿಳಾ ಮಂಡಳಿ, ಸರ್ವೋದಯ ಸಮುದಾಯ ಭವನ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಅದಮಾರಿನ ಸರ್ವೋದಯ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಯಕ್ಷಗಾನ ಗುರು ಎರ್ಮಾಳು ವಾಸುದೇವರಾಯರ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

ಯಕ್ಷಗಾನ ಆಸಕ್ತ ಯುವಕರಿಗೆ ನಾಟ್ಯ, ಮದ್ದಳೆ, ಚೆಂಡೆ, ಭಾಗವತಿಕೆ ಕಲಿಸಲು ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ್ದರು. 90ರ ಇಳಿ ವಯಸ್ಸಿನಲ್ಲಿಯೂ ಕಲಾಸೇವೆ ಮಾಡುತ್ತಿರುವ ವಾಸುದೇವರಾಯರು 190 ವರ್ಷಗಳ ಕಾಲ ಬಾಳಿ ಕಲಾಸೇವೆ ಮಾಡುವಂತಾಗಲಿ ಎಂದು ಅವರು ಶುಭ ಹಾರೈಸಿದರು.

ಅದಮಾರಿನ ಸರ್ವೋದಯ ಸಮುದಾಯ ಭವನ ಸಮಿತಿ ಅಧ್ಯಕ್ಷ ಎರ್ಮಾಳು ಉದಯ ಕೆ ಶೆಟ್ಟಿಯವರು ವಾಸುದೇವರಾವ್ ಅವರನ್ನು ಅಭಿನಂದಿಸಿದರು. ಗುರುರಾಜ ಮಂಜಿತ್ತಾಯ, ಆದರ್ಶ ಯುವಕ ಸಂW ಅಧ್ಯಕ್ಷ ಸಂತೋಷ್ ಜೆ. ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷೆ ಪಾರ್ವತಿ ಎಸ್., ಮಾಜಿ ಅಧ್ಯಕ್ಷೆ ಇಂದಿರಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ ಸುದರ್ಶನ ವೈ.ಎಸ್. ಸ್ವಾಗತಿಸಿದರು. ಗಣೇಶ್ ಅದಮಾರು ಕಾರ್ಯಕ್ರಮ ನಿರೂಪಿಸಿದರು. ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ವಂದಿಸಿದರು.

ಫೋಟೋ: ಯಕ್ಷಗಾನ ಗುರು ಎರ್ಮಾಳು ವಾಸುದೇವರಾಯರಿಗೆ ಗುರುವಂದನೆ ಸಲ್ಲಿಸಲಾಯಿತು.