ಯಕ್ಷಗಾನ ಕಲಾವಿದರ ಗುರುತಿಸುವಿಕೆ ಸ್ವಾಗತಾರ್ಹ-ಲಕ್ಷ್ಮೀನಾರಾಯಣ ಆಸ್ರಣ್ಣ

ಪಡುಬಿದ್ರಿ: ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಸ್ವಾಗತಾರ್ಹವಾದುದು. ಎರ್ಮಾಳು ಪೂಲ ಸತೀಶ್ ಶೆಟ್ಟಿ ಅವರಂತಹ ವ್ಯಕ್ತಿಗಳು ಯಾರಿಗೂ ತಿಳಿಯದಂತೆಯೇ ಇಂತಹ ಸಾಮಾಜಿಕ ಸಂತೃಪ್ತಿಯ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಿರುತ್ತಾರೆ. ಅವರು ಕಟೀಲು ದೇವಿಯ ಜಾಗವನ್ನು ಅವರಿಗೇ ಒಪ್ಪಿಸಿರುವ ಧೀಮಂತ ವ್ಯಕ್ತಿಯಾಗಿದ್ದಾರೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅನುವಂಶಿಕ ಅರ್ಚಕ ವೇದ ಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

ಅವರು ಶನಿವಾರ ರಾತ್ರಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಎರ್ಮಾಳು ಪೂಲ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳಿಂದ ನಡೆದಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಯಕ್ಷಗಾನ ಪ್ರದರ್ಶನ ಸೇವೆ ಆಟದ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶಿರ್ವಚನಗೈದರು.

ಸನ್ಮಾನ: ಕಟೀಲು ಮೇಳದಲ್ಲಿ ಹಿರಿಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಎಂಟಿಎಸ್ ಕುಲಾಲ್ ಹಾಗೂ 50ವರ್ಷಗಳ ತಿರುಗಾಟವನ್ನು ವಿವಿಧ ಮೇಳಗಳಲ್ಲಿ ನಡೆಸಿ ಮೇಳದ ಪ್ರಬಂಧಕರಾಗಿ, ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಮುಂಡಾಜೆ ಸದಾಶಿವ ಶೆಟ್ಟಿ ಅವರನ್ನು ಸಂಘಟಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಟೀಲು ಶ್ರೀ ದೇಗುಲದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಅನಂತ ಆಸ್ರಣ್ಣ, ವೇದಮೂರ್ತಿ ಕಮಲಾದೇವಿಪ್ರಸಾದ ಆಸ್ರಣ್ಣ, ವೇದಮೂರ್ತಿ ಹರಿನಾರಾಯಣದಾಸ ಆಸ್ರಣ್ಣ, ಎರ್ಮಾಳು ಉದಯ ಕೆ. ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ, ಎರ್ಮಾಳು ಪೂಲ ಸತೀಶ್ ಶೆಟ್ಟಿ, ಕಾರ್ಯಕ್ರಮ ಸಂಘಟಕ ನಟರಾಜ ರಾವ್ ಪಿ. ಎಸ್. ಉಪಸ್ಥಿತರಿದ್ದರು.
ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.