ಮೂಲ್ಕಿ ಹೆದ್ದಾರಿಯಲ್ಲಿ ತಾತ್ಕಾಲಿಕ ಸಂಚಾರ ಬದಲಾವಣೆ

ಮೂಲ್ಕಿ: ದಿನಂಪ್ರತಿ ಹೆದ್ದಾರಿ ಅಪಘಾತ ಸಂಭವಿಸಿವ ಮೂಲ್ಕಿ ಮುಖ್ಯ ಪೇಟೆಯಲ್ಲಿ ಸಂಚಾರಿ ಪೋಲೀಸರು ಹೆದ್ದಾರಿ ಇಲಾಖಾಧಿಕಾರಿಗಳು ಮತ್ತು ಮೂಲ್ಕಿ ರಸ್ತೆ ಸುರಕ್ಷತಾ ಸಮಿತಿಯ ಜತೆಗೂಡಿ ಹೆದ್ದಾರಿ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಬುಧವಾರದಿಂದ ಜಾರಿಗೆ ತಂದಿದ್ದಾರೆ.

ಸಂಚಾರಿ ಪೋಲೀಸ್ ಸಹಾಯಕ ಆಯುಕ್ತ ಎಮ್.ಮಂಜುನಾಥ್ ಶೆಟ್ಟಿ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಮೂಲ್ಕಿ ಆದಿಧನ್ ಹೋಟೆಲ್ ಮುಂಭಾಗದ ರಸ್ತೆ ವಿಭಾಜಕ ಬಳಿ ರಸ್ತೆಯ ಪೂರ್ವ ಬದಿಯಲ್ಲಿ ಹಳೆಯಂಗಡಿ ಮತ್ತು ಮುಕ್ಕ ಮಾದರಿಯಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಲಾಯಿತು.ಪಶ್ಚಿಮ ಬದಿಯ ಬಸ್ಸು ನಿಲ್ದಾನ ಮತ್ತು ಮೂಲ್ಕಿ ನರ್ಸಿಂಗ್ ಹೋಮ್ ಎದುರಿನಲ್ಲಿಯೂ ಬ್ಯಾರಿಕೇಡ್ ಅಳವಡಿಸಲಾಯಿತು.
ಪೂರ್ವ ಬದಿಯಿಂದ ಆದಿಧನ್ ಹೋಟೆಲ್ ಬಳಿಯಿಂದ ಪಶ್ಚಿಮ ಬದಿಯ ಹೆದ್ದಾರಿಗೆ ಸಂಚಾರ ನಿಷೇಧಿಸಿ ವಿಜಯಾ ಸನ್ನಿಧಿವರೆಗೆ ಚಲಿಸಿ ಅಲ್ಲಿ ತಿರುವು ಪಡೆಯಲು ನಿರ್ಧರಿಸಲಾಯಿತು.

ಆದಿಧನ್ ಎದುರಿನ ರಸ್ತೆ ವಿಭಾಜಕ ಮುಚ್ಚಲು ನಿರ್ಧರಿಸಲಾಗಿತ್ತಾದರೂ ಎನ್‍ಎಚ್‍ಎ ಅಧಿಕಾರಿಗಳು ಒಪ್ಪಿಗೆ ನೀಡಲಿಲ್ಲ.ಎನ್‍ಎಚ್‍ಎ ರೆಸಿಡೆಂಟ್ ಇಂಜಿನಿಯರ್ ರಾಮಚಂದ್ರನ್ ಈ ಬಗ್ಗೆ ತಾಂತ್ರಿಕ ತೊಂದರೆಗಳಿರುವುದನ್ನು ತಿಳಿಸಿದರು.

ಆದಿಧನ್ ಎದುರಿನ ವಿಭಾಜಕ ಮುಚ್ಚಿ,ಆರ್‍ಆರ್ ಟವರ್ ಬಳಿ ವಿಭಾಜಕ ನಿರ್ಮಿಸಲು ಉದ್ದೇಶಿಸಲಾಗಿತ್ತಾದರೂ ಅಲ್ಲಿಯೂ ಸಮಸ್ಯೆಯಿರುವುದನ್ನು ರಾಮಚಂದ್ರನ್ ತಿಳಿ ಹೇಳಿದರು.ಆದಾಗ್ಯೂ ಪಶ್ಚಿಮ ಬದಿಯ ಸರ್ವಿಸ್ ರಸ್ತೆ ಕಾಮಗಾರಿ ನಡೆದಲ್ಲಿ ಆದಿಧನ್ ಬಳಿಯ ವಿಭಾಜಕ ತೆರವುಗೊಳಿಸಿ ಆರ್‍ಆರ್ ಟವರ್ ಬಳಿ ವಿಭಾಜಕ ನಿರ್ಮಿಸಲಾಗುವುದು ಎಂದವರು ಹೇಳಿದರು.
ರಸ್ತೆ ಸುರಕ್ಷತೆ ಬಗ್ಗೆ ಹೆದ್ದಾರಿ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎನ್‍ಎಚ್‍ಎಗೆ ಮನವಿಯೊಂದನ್ನು ಸಲ್ಲಿಸುವಂತೆ ಅವರು ಕೇಳಿಕೊಂಡಿದ್ದು,ಅದನ್ನು ಆದ್ಯತೆ ಮೇರೆಗೆ ಗುತ್ತಿಗೆದಾರ ಕಂಪನಿ ನವಯುಗ್‍ಗೆ ಕಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದರು.ಎಲ್ಲಾ ಸಮಸ್ಯೆಗಳ ಬಗ್ಗೆ ನವಯುಗ್ ಪ್ರಾಜೆಕ್ಟ್ ಮ್ಯಾನೇಜರ್ ಶಂಕರ್ ಗಮನಕ್ಕೆ ತಂದು ಶೀಘ್ರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ನವಯುಗ್ ಕಂಪನಿಯ ಚಂದ್ರಶೇಖರ್ ಹೇಳಿದರು.ಮುಂದಿನ ವಾರ ಶಂಕರ್‍ರವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದವರು ಹೇಳಿದರು.

ರಿಕ್ಷಾ ಪಾರ್ಕಿಂಗ್ ವಿವಾದ: ಮಾರ್ಕೆಟ್ ರಸ್ತೆಯಲ್ಲಿರುವ ರಿಕ್ಷಾಗಳನ್ನು ಏಕಾಏಕಿ ಎತ್ತಂಗಡಿ ಮಾಡಿಸುವ ಬಗ್ಗೆ ಅಲ್ಲಿನ ರಿಕ್ಷಾ ಚಾಲಕರು ಆಕ್ಷೇಪ ವ್ಯಕ್ತಪಡಿಸಿದರು.ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ರಿಕ್ಷಾ ನಿಲುಗಡೆಗೊಳಿಸುವಂತೆ ಮಂಜುನಾಥ್ ಶೆಟ್ಟಿ ತಿಳಿಸಿ ಎಲ್ಲರ ಸಮಕ್ಷಮದಲ್ಲೇ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದರು.

ನವಯುಗ್‍ನಿಂದ ಬ್ಯಾರಿಕೇಡ್: ಸಂಚಾರಿ ಪೋಲಿಸರ ಬೇಡಿಕೆಯಂತೆ ನವಯುಗ್ ಕಂಪನಿಯು 6 ಬ್ಯಾರಿಕೇಡ್‍ಗಳನ್ನು ನೀಡಲು ಒಪ್ಪಿಗೆ ನೀಡಿದೆ.ಆದರೆ ಅದಕ್ಕೆ 2 ವಾರಗಳ ಅವಕಾಶ ಕೇಳಿದೆ.ಬ್ಯಾರಿಕೇಡ್‍ಗಳಿಗೆ ಬಿಳಿ ಬಣ್ಣ ಬಳಿಯುವಂತೆ ಸಂಚಾರಿ ಪೋಲೀಸ್ ನಿರೀಕ್ಷಕ ಅಮಾನುಲ್ಲಾ ಕೇಳಿಕೊಂಡರು.

ಬಪ್ಪನಾಡು ಬಳಿಯೂ ಬ್ಯಾರಿಕೇಡ್ ಅಳವಡಿಕೆ:ಸುರಕ್ಷಿತ ಸಂಚಾರ ದೃಷ್ಟಿಯಿಂದ ಬಪ್ಪನಾಡು ಬಳಿಯೂ ಹೆದ್ದಾರಿಯ ಎರಡೂ ಕಡೆ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಯಿತು.ಅಲ್ಲಿಯೂ ಕೆಲವು ಸಂಚಾರಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ.

ನಪಂ ಅಧ್ಯಕ್ಷ ಸುನಿಲ್ ಆಳ್ವ,ಹರೀಶ್ ಎನ್.ಪುತ್ರನ್,ಮಧು ಆಚಾರ್ಯ,ಧನಂಜಯ ಮಟ್ಟು,ಸದಾಶಿವ ಹೊಸದುರ್ಗ,ಅಬ್ದುಲ್ ರಜಾಕ್,ಉದಯ ಶೆಟ್ಟಿ ಆದಿಧನ್,ರಮಾನಾಥ ಪೈ,ಸತೀಶ್ ಅಂಚನ್,ಕಮಲಾಕ್ಷ ಬಡಗುಹಿತ್ಲು,ಕಿಶೋರ್ ಶೆಟ್ಟಿ,ಉಮೇಶ್ ಮಾನಂಪಾಡಿ,ಪ್ರವೀಣ್ ಕಾಮತ್,ಮೋಹನ್ ಕುಬೆವೂರು,ಎನ್‍ಎಚ್‍ಎ ಇಂಜಿನಿಯರ್ ರವಿ,ಟೋಲ್ ಮ್ಯಾನೇಜರ್ ಶಿವಪ್ರಸಾದ್,ನವಯುಗ್ ಕಂಪನಿಯ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.