ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅತ್ಯಗತ್ಯ

ಮೂಲ್ಕಿ: ಸುತ್ತಲಿನ ಹಲವಾರು ಗ್ರಾಮಗಳ ಜನರು ನಿತ್ಯ ಆಗಮಿಸುವ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಯಾಗಬೇಕಿದೆ.

ಸುರತ್ಕಲ್,ಹಳೆಯಂಗಡಿ,ಕಿನ್ನಿಗೋಳಿ,ಪಕ್ಷಿಕೆರೆ,ಬಜ್ಪೆ,ಮೂರುಕಾವೇರಿ,ಬೆಳ್ಮಣ್ಣು,ಪಡುಬಿದ್ರಿ,ಉಚ್ಚಿಲ,ಕಾಪು,ಹೆಜಮಾಡಿ ಸಹಿತ ಮೂಲ್ಕಿಯ ಅತೀ ದೊಡ್ಡ ಕೊಳಚೆ ಪ್ರದೇಶವಾದ ಲಿಂಗಪ್ಪಯ್ಯಕಾಡು ಪ್ರದೇಶಗಳಿಂದ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂರಾರು ಜನಸಾಮಾನ್ಯರು ವೈದ್ಯಕೀಯ ಸೌಲಭ್ಯ ಅರಸಿ ಬರುತ್ತಾರೆ.ಆದರೆ ಇಲ್ಲಿ ಜನವರಿ ಬಳಿಕ ತೀವ್ರ ಕುಡಿಯುವ ನೀರಿನ ಸಮಸ್ಯೆಯ ಕಾರಣ ದಾಖಲೀಕರಣ ಕಷ್ಟಸಾಧ್ಯವಾಗಿದೆ.

ಮೂಲ್ಕಿ ನಪಂ ವತಿಯಿಂದ ಪ್ರತಿವರ್ಷ ಟ್ಯಾಂಕರ್ ಮೂಲಕ ಹಾಗೂ ಪೈಪ್‍ಲೈನ್ ಮೂಲಕ ನೀರು ಕೊಡುತ್ತಾರಾದರೂ ಶಾಶ್ವತ ಯೋಜನೆ ಇದ್ದಲ್ಲಿ ಸಮಸ್ಯೆ ಸುಲಲಿತ ಪರಿಹಾರ ಸಾಧ್ಯ ಎಂದು ಅಲ್ಲಿನ ವೈದ್ಯಾಧಿಕಾರಿ ಡಾ.ಕೃಷ್ಣ ಹೇಳುತ್ತಾರೆ.ಈ ಬಾರಿಯೂ ಕುಡಿಯುವ ನೀರು ಪೂರೈಸುವಂತೆ ನಪಂಗೆ ಪತ್ರ ಬರೆಯಲಾಗಿದೆ.

ಹೊರರೋಗಿಗಳ ಪ್ರತ್ಯೇಕ ವಿಭಾಗದ ಅವಶ್ಯಕತೆ: ಪ್ರತಿದಿನ 100ರಿಂದ 200ರಷ್ಟು ಹೊರರೋಗಿಗಳು ಇಲ್ಲಿಗೆ ಆಗಮಿಸುತ್ತಾರೆ.ಆದರೆ ಆಸ್ಪತ್ರೆಯಲ್ಲಿ ಬಂದವರಿಗೆ ಸೂಕ್ತ ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತದೆ.ಹಾಗಾಗಿ ಆಸ್ಪತ್ರೆಗೊಂದು ಪ್ರತ್ಯೇಕ ಹೊರರೋಗಿಗಳ ವಿಭಾಗದ ಅವಶ್ಯಕತೆ ಇದೆ.

ನೇತ್ರ ತಜ್ಞರು ಮತ್ತು ಅರೆವಳಿಕೆ ತಜ್ಞರಿಲ್ಲ: 50 ಬೆಡ್‍ಗಳ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರವಾಗಿರುವ ಇಲ್ಲಿ ನೇತ್ರ ತಜ್ಞರು ಮತ್ತು ಅರೆವಳಿಕೆ ತಜ್ಞರ ಅವಶ್ಯಕತೆ ಇದೆ.ಆದಾಗ್ಯೂ ಗುತ್ತಿಗೆ ಆಧಾರದಲ್ಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ.ಅದು ಬಿಟ್ಟರೆ ಇಲ್ಲಿ ವೈದ್ಯರ ಅಥವಾ ಸಿಬ್ಬಂದಿಗಳ ಕೊರತೆ ಇಲ್ಲ.ಔಷಧಗಳ ಕೊರತೆಯೂ ಕಂಡುಬಂದಿಲ್ಲ.ಕೊರತೆ ಕಂಡುಬಂದ ಸಂದರ್ಭ ಸ್ಥಳೀಯ ಔಷಧಿ ಅಂಗಡಿಗಳಲ್ಲಿ ಖರೀದಿಯನ್ನೂ ಮಾಡಲಾಗುತ್ತಿದೆ.

ಅನಧಿಕೃತ ವಾಹನ ಪಾರ್ಕಿಂಗ್: ಹಳೆ ಕಾಲದ ಆಸ್ಪತ್ರೆಯ ಆವರಣ ಬಹು ದೊಡ್ಡದಿದ್ದರೂ ಸೂಕ್ತ ಸುರಕ್ಷತೆ ಇಲ್ಲ.ಮುಖ್ಯ ದ್ವಾರದ ಗೇಟ್ ಇಲ್ಲದ ಕಾರಣ ಅಪರ ವೇಳೆಯಲ್ಲಿಯೂ ಅಪರಿಚಿತರು ಒಳಗಡೆ ತಮ್ಮ ವಾಹನಗಳನ್ನು ಪಾರ್ಕ್ ಮಾಡಿ ಹೋಗುತ್ತಾರೆ.ಈ ಬಗ್ಗೆ ಭಿತ್ತಿಪತ್ರ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಆಸ್ಪತ್ರೆಯ ಒಳ ಭಾಗವನ್ನು ಖಾಸಗಿಯವರೂ ತಮ್ಮ ಮನೆಗೆ ತೆರಳಲು ಬಳಸುತ್ತಿದ್ದಾರೆ.ಇಲ್ಲೊಂದು ಸಿಸಿಟಿವಿ ಅಳವಡಿಸಿದ್ದರೂ ವಾಹನ ಪಾರ್ಕಿಂಗ್ ಸ್ಥಗಿತಗೊಂಡಿಲ್ಲ.
ಕಾರ್ನಾಡು-ಮೂಲ್ಕಿ ಹೆದ್ದಾರಿಯ ಪಕ್ಕ ಇರುವ ಆಸ್ಪತ್ರೆಯ ಕಂಪೌಂಡ್ ಒಳಕ್ಕೆ ದಾರಿಹೋಕರು,ದ್ವಿಚಕ್ರ ವಾಹನ ಸವಾರರು ತ್ಯಾಜ್ಯಗಳನ್ನೂ ಬಿಸಾಡಿಹೋಗುತ್ತಿದ್ದು ಈ ಬಗ್ಗೆ ಕಠಿಣ ಕ್ರಮದ ಅವಶ್ಯಕತೆ ಇದೆ.
ಸಾಂಕ್ರಾಮಿಕ ರೋಗ ತಹಬದಿಗೆ: ಮೂಲ್ಕಿಯಲ್ಲಿ ಅತೀ ಹೆಚ್ಚು ಕಟ್ಟಡ ಕಾರ್ಮಿಕರು ಇದ್ದಾರೆ.ಅವರೆಲ್ಲರೂ ಹೊರರಾಜ್ಯಗಳಿಂದಲೇ ಬಂದವರು.ಪ್ರತಿವರ್ಷ ಇಲ್ಲಿ ಮಲೇರಿಯಾ,ಡೆಂಗೆ ಸಹಿತ ಸಾಂಕ್ರಾಮಿಕ ರೋಗಗಳು ಕಂಡುಬರುತ್ತದೆ.ಜೂನ್ ತಿಂಗಳಲ್ಲಿ ಅತೀ ಹೆಚ್ಚು ಮಲೇರಿಯಾ ಇರುತ್ತದೆ.ಆದರೆ ಈಬಾರಿ ಕಳೆದ ಹಲವು ವರ್ಷಗಳಿಗೆ ಹೋಲಿಸಿದಲ್ಲಿ ಸಾಂಕ್ರಾಮಿಕ ರೋಗಗಳು ಅತೀ ಕಡಿಮೆ ದಾಖಲಾಗಿವೆ.
2 ರಾಜ್ಯ ಪ್ರಶಸ್ತಿ: ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 2017-18ನೇ ಸಾಲಿನಲ್ಲಿ ರಾಜ್ಯ ಸರಕಾರದ ವತಿಯಿಂದ ರಾಜ್ಯದ 4 ಆಸ್ಪತ್ರೆಗಳಿಗೆ ದೊರೆತ “ಸ್ವಚ್ಛ ರತ್ನ” ಪ್ರಶಸ್ತಿ ದೊರಕಿದ್ದರೆ,ಕಾಯಕಲ್ಪ ವಿಭಾಗದಲ್ಲಿ ಸಮಾಧಾನಕರ ರಾಜ್ಯ ಪ್ರಶಸ್ತಿ ದೊರಕಿತ್ತು.

ಅನಿಸಿಕೆ

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ಸವಲತ್ತುಗಳು ದೊರೆಯುತ್ತದೆ.ಆದರೆ ಅಲ್ಲಿನ ಸಿಬ್ಬಂದಿಗಳು ವೈದ್ಯಕೀಯ ಸವಲತ್ತು ಅರಸಿ ಬರುವವರೊಂದಿಗೆ ಸೌಜನ್ಯದಿಂದ ಮಾತಾಡಬೇಕು.ರೋಗಿಗಳು ಹೆದರುವಂತಾಗಬಾರದು.
-ಮಂಜುನಾಥ್ ಆರ್.ಕೆ.,ಲಿಂಗಪ್ಪಯ್ಯಕಾಡು.

ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಬೇಕಾದ ಸೌಲಭ್ಯಗಳು ದೊರಕುತ್ತಿಲ್ಲ.ಸರಕಾರ ಜನರಿಗೆ ಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಬೇಕು.ಅಲ್ಲಿ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸಬೇಕು.
-ಅಬ್ದುಲ್ ರಜಾಕ್,ಸಮಾಜ ಸೇವಕ,ಮೂಲ್ಕಿ