ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರ ಮುತುವರ್ಜಿಯಿಂದ ಒಂದು ಕೋಟಿ ರೂ.ಅನುದಾನ

ಮೂಲ್ಕಿ: ಶಾಸಕ ಉಮಾನಾಥ್ ಕೋಟ್ಯಾನ್ ಮುತುವರ್ಜಿಯಿಂದ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಸ್ಥಾಪನೆಯಾಗಲಿರುವ ಹೊರ ರೋಗಿ ವಿಭಾಗ ರಚನೆಗೆ ಎಮ್‍ಆರ್‍ಪಿಎಲ್ ಒಂದು ಕೋಟಿ ರೂ.ಅನುದಾನ ನೀಡಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ.

ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಆರೋಗ್ಯ ಕೇಂದ್ರದಲ್ಲಿ ನಿತ್ಯ ಸರಾಸರಿ 200ರಿಂದ 300 ಹೊರರೋಗಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ವ್ಯವಸ್ಥೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ಅನಾನುಕೂಲವಾಗುತ್ತಿರುವ ಬಗ್ಗೆ ಶಾಸಕರ ಗಮನ ಸೆಳೆಯಲಾಗಿತ್ತು. ಈ ಬಗ್ಗೆ ಸ್ಪಂದಿಸಿದ ಶಾಸಕ ಉಮಾನಾಥ್ ಕೋಟ್ಯಾನ್ ಎಮ್‍ಆರ್‍ಪಿಎಲ್‍ನ ಸಿಎಸ್‍ಆರ್ ಅನುದಾನಕ್ಕೆ ಮನವಿ ಸಲ್ಲಿಸಿದ್ದು, ತಕ್ಷಣ ಮಂಜೂರಾಗಿತ್ತು.

ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚರ್ಚಿಸಲಾಯಿತು. ಜಿಪಂ ಸದಸ್ಯ ವಿನೋದ್ ಕುಮಾರ್ ಬೊಳ್ಳೂರುರವರಲ್ಲಿ ತೆರೆದ ಬಾವಿ ರಚನೆ ಸಹಿತ ವಿವಿಧ ಆಯಾಮಗಳ ಬಗ್ಗೆ ಗಮನಹರಿಸುವಂತೆ ವಿನಂತಿಸಲಾಯಿತು.
ಸಿಬ್ಬಂದಿ ಕೊರತೆ: ಆಸ್ಪತ್ರೆಯಲ್ಲಿ ವೈದ್ಯರ ಸಹಿತ 52 ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕಿದ್ದು, ಸದ್ಯ 33 ಹುದ್ದೆಗಳು ಖಾಲಿಯಾಗಿರುವ ಬಗ್ಗೆ ಶಾಸಕರ ಗಮನ ಸೆಳೆಯಲಾಯಿತು. ಈ ಪೈಕಿ 16 ಮಂದಿಯನ್ನು ಕಾಂಟ್ರಾಕ್ಟ್ ನೆಲೆಯಲ್ಲಿ ನೇಮಕಗೊಳಿಸಿದ ಬಗ್ಗೆ ವೈದ್ಯಾಧಿಕಾರಿ ಡಾ.ಕೆ.ಕೃಷ್ಣ ಮಾಹಿತಿ ನೀಡಿದರು. ಮುಖ್ಯವಾಗಿ ಅನಸ್ತೇಶಿಯಾ ಪರಿಣಿತರ ಕೊರತೆಯಿಂದ ತೀವ್ರ ಸಮಸ್ಯೆಯಾಗಿರುವ ಬಗ್ಗೆ ಅವರು ಗಮನ ಸೆಳೆದು ತಕ್ಷಣ ನೇಮಕಗೊಳಿಸುವಂತೆ ಮನವಿ ಮಾಡಿದರು.

ನಾಯಿ ಕಡಿತದ ಪ್ರಕರಣ: ಆಸುಪಾಸಿನ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತದ ಚುಚ್ಚುಮದ್ದು ಕೊರತೆಯಿಂದ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅತೀ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ಗಮನಸೆಳೆಯಲಾಯಿತು. ವಾರ್ಷಿಕ 300ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಲಾಯಿತು.
ಮನವಿ: ಮೂಲ್ಕಿಯು ತಾಲೂಕಾಗಿ ಘೋಷಣೆಯಾಗಿರುವುದರಿಂದ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಆರೋಗ್ಯ ಕೇಂದ್ರದ ಬೌಂಡರಿ ಗುರುತಿಸಿ ಸುತ್ತ ಕಂಪೌಂಡ್ ಗೋಡೆ ನಿರ್ಮಿಸಬೇಕು. ನಿರಂತರ ನೀರು ಪೂರೈಕೆಗೆ ಗಮನ ಹರಿಸಬೇಕು. ಹೊರಭಾಗದಲ್ಲಿ ಶೌಚಾಲಯ ನಿರ್ಮಾಣ, ಬೋರ್‍ವೆಲ್ ನಿರ್ಮಾಣ, ಹೈಮಾಸ್ಕ್ ದೀಪ ಅಳವಡಿಕೆ, ಉದ್ಯಾನವನ, ವಾಹನ ನಿಲುಗಡೆ ತಂಗುದಾಣ, ಮುಖ್ಯ ಗೇಟ್ ನಿರ್ಮಾಣ ಹಾಗೂ ಸೆಕ್ಯುರಿಟಿ ನೇಮಕ ಇತ್ಯಾದಿ ಬೇಡಿಕೆಗಳನ್ನು ಶಾಸಕರಿಗೆ ನೀಡಲಾಯಿತು.
ಆಯುಷ್ಮಾನ್ ಕಾರ್ಡ್ ವಿತರಣೆ: ಆರೋಗ್ಯ ಕೇಂದ್ರದಲ್ಲಿ ದಿನಕ್ಕೆ 20 ರಂತೆ ಈಗಾಗಲೇ 1000 ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಮುಂದಿನ ಡಿಸೆಂಬರ್‍ವರೆಗೆ ಕಾರ್ಡ್ ನೀಡಲು ಟೋಕನ್ ನೀಡಲಾಗಿದೆ ಎಂದು ಮಾಹಿತಿ ನೀಡಲಾಯಿತು. ಕಳೆದ ಜನವರಿಯಿಂದ 73 ಮಲೇರಿಯಾ, 4 ಎಚ್‍ಐವಿ ಪ್ರಕರಣಗಳು ದಾಖಲಾದ ಬಗ್ಗೆಯೂ ಮಾಹಿತಿ ನೀಡಲಾಯಿತು.

2019-20ನೇ ಸಾಲಿಗೆ ಈಗಾಗಲೇ ಚಾಲ್ತಿಯಲ್ಲಿರುವ ಎನ್‍ಎಚ್‍ಎಮ್ ಯೋಜನೆಯನ್ನು ಮುಂದುವರಿಸುವ ಕುರಿತು ಸಭೆಯಲ್ಲಿ ಅನುಮತಿ ನೀಡಲಾಯಿತು. ಆಸ್ಪತ್ರೆಗೆ ಬೇಕಾದ ಔಷಧಿ, ರಾಸಾಯನಿಕ ವಸ್ತು, ವಿವಿಧ ಸಲಕರಣೆಗಳನ್ನು ಖರೀದಿ ಮತ್ತು ದುರಸ್ತಿ ಮಾಡಲು ಅನುಮತಿ ಪಡೆಯಲಾಯಿತು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ಉಚಿತ ರೋಗ ಪತ್ತೆ ಸೇವೆಗಳು ಕಾರ್ಯಕ್ರಮದ ಅಡಿಯಲ್ಲಿ ನೀಡಲಾದ ಅನುದಾನದಲ್ಲಿ ಪ್ರಯೋಗಾಲಯಕ್ಕೆ ಬೇಕಾದ ಅತ್ಯಾಧುನಿಕ ಯಂತ್ರ, ಕಿಟ್‍ಗಳನ್ನು ಖರೀದಿಸಿಲು ಅನುಮತಿ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ಮೂಲ್ಕಿ ವ್ಯಾಪ್ತಿಯಲ್ಲಿ ಅತ್ಯುತ್ತಮ ಆಸ್ಪತ್ರೆಯಾಗಿ ಗುರುತಿಸಿಕೊಂಡಿರುವ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದ ರೀತಿಯಲ್ಲಿ ಸಿಬ್ಬಂದಿಗಳು ಉತ್ತಮ ಕಾರ್ಯನಿರ್ವಹಿಸಬೇಕೆಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಸದಾನಂದ್, ಮೂಲ್ಕಿ ನಪಂ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ಜಿಪಂ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರೋಹಿದಾಸ್, ಕಿರಿಯ ಅಭಿಯಂತರ ಪ್ರಶಾಂತ್ ಆಳ್ವ, ತಾಪಂ ಸದಸ್ಯ ಶರತ್ ಕುಬೆವೂರು, ಸಮಿತಿಯ ಸದಸ್ಯ ನರಸಿಂಹ ಪೂಜಾರಿ, ವೈದ್ಯಾಧಿಕಾರಿಗಳಾದ ಡಾ.ಜಗದೀಶ್, ಡಾ.ಪೂರ್ಣಿಮಾ, ಡಾ. ಸುನಿಲ್, ಡಾ.ಇರ್ಫಾನ್, ಡಾ.ದಿನೇಶ್ ಉಪಸ್ಥಿತರಿದ್ದರು.