ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಮಹಿಳಾ ಗ್ರಾಮಸಭೆ

ಮೂಲ್ಕಿ: ನಮ್ಮ ಆರೋಗ್ಯ ಕಾಪಾಡುವ ಮದ್ದುಗಳು ನಮ್ಮ ಮನೆಯಂಗಳದಲ್ಲೇ ಲಭ್ಯವಿದೆ. ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿದರೆ ಅದೇ ಆರೋಗ್ಯ ಭಾಗ್ಯ ಎಂದು ಬಳ್ಕುಂಜೆ ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶೋಭಾರಾಣಿ ಹೇಳಿದರು.

ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಗ್ರಾಮದ ಸಮಾಜ ಮಂದಿರದಲ್ಲಿ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭ ಅವರು ಔಷಧೀಯ ಗುಣಗಳುಳ್ಳ ವಿವಿಧ ಸಸ್ಯಗಳ ಬಗ್ಗೆ, ಪ್ರಾಣಾಯಾಮ ಇತ್ಯಾದಿ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಇದೇ ಸಂದರ್ಭ ಗ್ರಾಮಸ್ಥರಿಂದ ಅತಿಕಾರಿಬೆಟ್ಟು ಗ್ರಾಮದಲ್ಲಿ ಆಯುರ್ವೇದ ಆಸ್ಪತ್ರೆ ಕೇಂದ್ರ ಸ್ಥಾಪನೆಯ ಬೇಡಿಕೆ ಕೇಳಿ ಬಂತು. ಅತೀ ಶೀಘ್ರದಲ್ಲಿ ಆಯುರ್ವೇದ ಕುರಿತು ಅತಿಕಾರಿಬೆಟ್ಟು ಗ್ರಾಮದಲ್ಲಿ ಮಾಹಿತಿ ಕಾರ್ಯಾಗಾರ ನಡೆಸುವ ಭರವಸೆ ದೊರೆಯಿತು.

ಗಾಂಜಾ ಮಾರಕ: ಮೂಲ್ಕಿ ಪೋಲಿಸ್ ಠಾಣಾ ನಿರೀಕ್ಷಕರಾದ ಜಯರಾಮ ದೇವೂಗೌಡ ಮಾತನಾಡಿ, ಗ್ರಾಮವ್ಯಾಪ್ತಿಯಲ್ಲಿ ಗಾಂಜಾ ಸಹಿತ ಆಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣ ಪೋಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಿದರು. ಎಳೆಯ ಮಕ್ಕಳು ಗಾಂಜಾ ವ್ಯಸನಿಗಳಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಈ ಬಗ್ಗೆ ಹೆತ್ತವರು ಮಕ್ಕಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವಂತೆ ಕೋರಿದರು. ಮಕ್ಕಳ ಚಲನವಲನಗಳ ಬಗ್ಗೆ ಸದಾ ನಿಗಾ ವಹಿಸುವಂತೆಯೂ ವಿನಂತಿಸಿದರು. ಮಕ್ಕಳಿಗೆ ಮೊಬೈಲ್ ಬಳಕೆ ಬಗ್ಗೆ ಜಾಗೃತರಾಗಿರುವಂತೆ ಕೇಳಿಕೊಂಡರು.
ಇತ್ತೀಚಿನ ದಿನಗಳಲ್ಲಿ ಸರ ಅಪಹರಣ ಪ್ರಕರಣಗಳು ಹೆಚ್ಚು ನಡೆಯುತ್ತಿದೆ. ಈ ಬಗ್ಗೆ ಮಹಿಳೆಯರು ಜಾಗೃತರಾಗಬೇಕು. ಮನೆಯಿಂದ ಹೊರಹೋಗುವ ಸಂದರ್ಭ ಆಭರಣಗಳನ್ನು ಧರಿಸದೆ ತೆರಳಬೇಕು. ನಿರ್ಜನ ರಸ್ತೆಗಳಲ್ಲಿ ಒಬ್ಬಂಟಿಯಾಗಿ ತಿರುಗಾಡಬಾರದು ಎಂದವರು ವಿನಂತಿಸಿದರು. ಅಲೆಮಾರಿಗಳ ತಂಡ ಚಿನ್ನಗಳನ್ನು ಪಾಲಿಶ್ ಮಾಡುವ ಹುನ್ನಾರದ ಬಗ್ಗೆಯೂ ಸಮಗ್ರ ಮಾಹಿತಿ ನೀಡಿದರು. ಒಬ್ಬಂಟಿಯಾಗಿರುವ ಸಂದರ್ಭ ಅಪರಿಚಿತರು ಬಂದಲ್ಲಿ ಮನೆ ಬಾಗಿಲು ತೆರೆಯದಂತೆಯೂ ಕೇಳಿಕೊಂಡರು.

ಸಂಚಲನಾ ಮಹಿಳಾ ತರಬೇತಿದಾರರ ರಾಜ್ಯ ಕಾರ್ಯದರ್ಶಿ ವತ್ಸಲಾ ನಾಯಕ್ ಮಹಿಳಾ ಹಕ್ಕುಗಳ ಬಗ್ಗೆ ವಿಸ್ತøತ ಮಾಹಿತಿ ನೀಡಿದರು. ಮಹಿಳಾ ಹಕ್ಕುಗಳ ಬಗ್ಗೆ ತೊಂದರೆಯಾದಲ್ಲಿ ದೂರು ನೀಡಲು ಹೆದರದಿರಿ ಎಂದ ಅವರು ದೌರ್ಜನ್ಯ ಮುಕ್ತ ಗ್ರಾಮವನ್ನಾಗಿಸಲು ಮಹಿಳೆಯರು ತಮ್ಮ ಹಕ್ಕುಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕೆಂದರು.

ಸ್ಥಳೀಯ ಅಂಗನವಾಡಿಗೆ ನಳ್ಳಿನೀರು ಸಮಸ್ಯೆ ಬಗ್ಗೆ ಗೀತಾ ಎಂಬವರು ಗ್ರಾಪಂ ಗಮನ ಸೆಳೆದರು. ಬಾಡಿಗೆ ಕಟ್ಟಡವಾಗಿರುವ ಕಾರಣ ಸಮಸ್ಯೆಯನ್ನು ತಕ್ಷಣ ಪರಿಹರಿಸದಿರುವ ಬಗ್ಗೆ ತಿಳಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಶಾರದಾ ವಸಂತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನಾಗರತ್ನ, ತಾಪಂ ಸದಸ್ಯ ಶರತ್ ಕುಬೆವೂರು, ಕಂದಾಯ ಅಧಿಕಾರಿ ಸುನಿಲ್ ಕುಮಾರ್, ದಕ ಜಿಲ್ಲಾ ಮಹಿಳಾ ವೇದಿಕೆಯ ಅಧ್ಯಕ್ಷೆ ನಂದಾ ಪಾಯಸ್, ಗ್ರಾಪಂ ಸದಸ್ಯರಾದ ಜೀವನ್ ಶೆಟ್ಟಿ, ಮನೊಹರ ಕೋಟ್ಯಾನ್, ಹರೀಶ್ ಶೆಟ್ಟಿ, ಸುಮತಿ ಉಪಸ್ಥಿತರಿದ್ದರು.

ಪ್ರಜ್ಞಾ ಸಲಹಾ ಕೇಂದ್ರದ ಜಾಯಲಿನ್ ಕಾರ್ಯಕ್ರಮ ನಿರ್ವಹಿಸಿದರು. ಪಿಡಿಒ ರವಿ ಸ್ವಾಗತಿಸಿ ವಂದಿಸಿದರು.