ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಅಂತರ್‍ಕಾಲೇಜು ರಸಪ್ರಶ್ನೆ ಸ್ಪರ್ಧೆ

ಮೂಲ್ಕಿ: ಆಧುನಿಕ ಆವಿಷ್ಕಾರ, ಜಾಗತಿಕ ವಿದ್ಯಾಮಾನಗಳ ಬಗ್ಗೆ ಅರಿತುಕೊಂಡು ವಿದ್ಯಾರ್ಥಿಗಳು ತಮ್ಮ ಜ್ಞಾನ ಮಟ್ಟವನ್ನು ವೃದ್ಧಿಸುವ ಮನೋಭೂಮಿಕೆಯನ್ನು ಬೆಳೆಸಲು ರಸಪ್ರಶ್ನೆ ಸ್ಪರ್ಧೆಯನ್ನು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳು ಪುಸ್ತಕ ಜ್ಞಾನದೊಂದಿಗೆ ಪ್ರಾಪಂಚಿಕ ಜ್ಞಾನವನ್ನು ಬೆಳೆಸಿಕೊಂಡಾಗ ಕಲಿಕೆ ಪರಿಪೂರ್ಣವಾಗುತ್ತದೆ ಎಂದು ಮೂಲ್ಕಿ ವಿಜಯಾ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ ಹೇಳಿದರು.

ಮೂಲ್ಕಿ ವಿಜಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಹಾಗೂ ಮೂಲ್ಕಿ ನೂತನ್ ಟ್ರೇಡಿಂಗ್ ಕಂಪೆನಿಯ ಪ್ರಾಯೋಜಕತ್ವದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ರಸ ಪ್ರಶ್ನೆ ಸ್ಪರ್ಧೆಯನ್ನು ಮೂಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದು,ಸುಮಲತಾ ಸುವರ್ಣ ಉದ್ಘಾಟಿಸಿ ಮಾತನಾಡಿದರು.

ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಂಗಳೂರಿನ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದ ಪೆÇ್ರ| ಉದಯಕುಮಾರ್ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು.
ಪದವಿ ಕಾಲೇಜು ಪ್ರಾಂಶುಪಾಲ ಡಾ. ಕೆ. ನಾರಾಯಣ ಪೂಜಾರಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಮೇಶ್ ಕಾಮತ್, ಆಡಳಿತ ಮಂಡಳಿ ಸದಸ್ಯ ಹೆಚ್.ರಾಮದಾಸ್ ಕಾಮತ್ ಉಪಸ್ಥಿತರಿದ್ದರು.
ತ್ರಿವಿಕ್ರಮ್ ಪೈ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಶ್ರೀ ರಾಮಚಂದ್ರ ಉಡುಪ ವಂದಿಸಿದರು.

ಬೇರೆ ಬೇರೆ ಕಾಲೇಜುಗಳ 21 ತಂಡಗಳು ಭಾಗವಹಿಸಿದ್ದು ಸೈಂಟ್ ಅಲೋಶಿಯಸ್ ಕಾಲೇಜಿನ ಸವಿನ್ ಡಿ’ಸೋಜ ಮತ್ತು ಎರೋಲ್ ಪೆರ್ನಾಂಡಿಸ್ ಅವರ ತಂಡ ಪ್ರಥಮ ಹಾಗೂ ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸವ್ಯಸಾಚಿ ಅಡ್ಯಂತಾಯ ಮತ್ತು ಮಾರ್ಟಿನ್ ಪೀಟರ್ ಅವರ ತಂಡ ದ್ವಿತೀಯ ಸ್ಥಾನ ಪಡೆದರು.