ಮೂಲ್ಕಿ ಮಿನಿ ವಿಧಾನಸೌಧ ಶೀಘ್ರ ಅನುಷ್ಠಾನ- ಶಾಸಕ ಉಮಾನಾಥ ಕೋಟ್ಯಾನ್

ಮೂಲ್ಕಿ: ಈಗಾಗಲೇ ಮೂಲ್ಕಿ ತಾಲೂಕು ಘೋಷಣೆಯಾಗಿದ್ದು, ಗಜೆಟ್ ಅನುಮೋದನೆಯೊಂದಿಗೆ ಮೂಲ್ಕಿ ತಾಲೂಕು ರಚನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮೂಲ್ಕಿಯ ಮಿನಿ ವಿಧಾನಸೌಧ ರಚನೆ ಬಗ್ಗೆ ವಿಧಾನಸೌಧದಲ್ಲಿ ಅಂತಿಮ ಮಾತುಕತೆ ಪೂರ್ಣಗೊಂಡಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿ ನಗರ ಪಂಚಾಯಿತಿ ವತಿಯಿಂದ ಗಾಂಧಿ ಮೈದಾನದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಮೂಲ್ಕಿಯ ಬಹುನಿರೀಕ್ಷಿತ ಬಸ್ಸು ತಂಗುದಾಣ ನಿರ್ಮಾಣಕ್ಕಾಗಿ ಜಾಗ ಖರೀದಿ ಪ್ರಕ್ರಿಯೆ ಅಂತಿಮಗೊಂಡಿದ್ದು, ಎಸಿಯವರ ಅನುಮೋದನೆಯೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ಹೋಗಿದೆ. ಹಾಗಾಗಿ ಯೋಜನೆ ಅತಿ ಶೀಘ್ರದಲ್ಲಿ ಜಾರಿಗೊಳ್ಳಲಿದೆ ಎಂದವರು ಹೇಳಿದರು.

ಮೂಲ್ಕಿ ಬಹುದಿನದ ಸಮಸ್ಯೆಯಾದ ಒಳಚರಂಡಿ ಯೋಜನೆ ಜಾರಿಗೆ ಪಣತೊಟ್ಟಿದ್ದು, ಬಹುಬೇಗ ಜಾರಿಯಾಗಲಿದೆ ಎಂದ ಅವರು ಮೂಲ್ಕಿಯ ವಿಶೇಷ ತಹಶೀಲ್ದಾರ್ ಬದಲು ಖಾಯಂ ತಹಶೀಲ್ದಾರ್ ನೇಮಕಕ್ಕೆ ಪ್ರಯತ್ನ ನಡೆದಿದೆ ಎಂದರು.
ಮೂಲ್ಕಿಯ ಸಮಗ್ರ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಶ್ರಮವಹಿಸಬೇಕೆಂದು ಹೇಳಿದ ಅವರು ಪ್ರಕೃತಿ ವಿಕೋಪ ಸಂತ್ರಸ್ಥರಿಗೆ ರೂ.3900ರ ಬದಲು ರೂ.10 ಸಾವಿರ ನೀಡಲು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು, ಶೀಘ್ರ ವಿತರಣೆಯಾಗಲಿದೆ ಎಂದರು.
ಹಕ್ಕುಪತ್ರ ವಿತರಣೆ: ಇದೇ ಸಂದರ್ಭ ಕಂದಾಯ ಇಲಾಖೆ ವತಿಯಿಂದ ಮೂಲ್ಕಿಯ 10 ಮಂದಿಗೆ ಮತ್ತು ಶಿಮಂತೂರಿನ ಮೂವರಿಗೆ 94 ಸಿಸಿ ಹಕ್ಕುಪತ್ರಗಳನ್ನು ಶಾಸಕರು ವಿತರಿಸಿದರು.

ಮೂಲ್ಕಿ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಚಿತ್ರಾಪು ನೇತೃತ್ವದ ಪಥಸಂಚಲನದಲ್ಲಿ ಶಾಸಕ ಕೋಟ್ಯಾನ್ ಧ್ವಜ ವಂದನೆ ಸ್ವೀಕರಿಸಿದರು.

ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಎಮ್. ಸ್ವಾಗತಿಸಿದರು. ಮೂಲ್ಕಿ ಇನ್ಸ್‍ಪೆಕ್ಟರ್ ಅನಂತ ಪದ್ಮನಾಭ, ವಿಜಯಾ ಕಾಲೇಜು ಪ್ರಿನ್ಸಿಪಾಲ್ ಡಾ. ನಾರಾಯಣ ಪೂಜಾರಿ, ನಪಂ ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ನಿವೃತ್ತ ಮುಖ್ಯಾಧಿಕಾರಿ ಡಾ.ಹರಿಶ್ಚಂದ್ರ ಸಾಲ್ಯಾನ್, ನಪಂ ಸದಸ್ಯರಾದ ಪುತ್ತುಬಾವ, ಸತೀಶ್ ಅಂಚನ್, ಹರ್ಷರಾಜ್ ಶೆಟ್ಟಿ ಜಿಎಮ್, ಯೋಗೀಶ್ ಕೋಟ್ಯಾನ್, ಶೈಲೇಶ್ ಕುಮಾರ್, ರಾಧಿಕಾ ಕೋಟ್ಯಾನ್, ದಯಾವತಿ ಅಂಚನ್, ಮುನ್ನ ಮಹೇಶ್, ಬಾಲಚಂದ್ರ ಕಾಮತ್, ವಂದನಾ ಕಾಮತ್, ಶಾಂತಾ ಕಿರೋಡಿಯನ್ ಉಪಸ್ಥಿತರಿದ್ದರು.

ನಪಂ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ವಂದಿಸಿದರು. ಭಾಸ್ಕರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.