ಮೂಲ್ಕಿ: ಮಳೆ ಗಾಳಿಯ ನಡುವೆಯೂ ಶಾಂಭವಿ ಹೊಳೆಯಲ್ಲಿ ಮರುವಾಯಿ ಪ್ರಿಯರು

— ಎಚ್ಕೆ ಹೆಜ್ಮಾಡಿ ಮೂಲ್ಕಿ

ಮರುವಾಯಿ(ಕಪ್ಪೆ ಚಿಪ್ಪು) ಹೆಕ್ಕುವವರ ದಂಡು ಮೂಲ್ಕಿ ಶಾಂಭವಿ ಹೊಳೆಯಲ್ಲಿ ಕಂಡು ಬಂದಿದ್ದು, ಬಿರು ಮಳೆ, ಗಾಳಿ ಹಾಗೂ ನೀರಿನ ಮಟ್ಟ ಹೆಚ್ಚಳದ ನಡುವೆಯೂ ನೀರಿನಿಂದ ಮೇಲಕ್ಕೆ ಬಾರದ ಹಿನ್ನೆಲೆಯಲ್ಲಿ ಮೂಲ್ಕಿ ಪೋಲೀಸರು ಸ್ಥಳಕ್ಕಾಗಮಿಸಿ ಗದರಿಸಿ ಎಲ್ಲರನ್ನೂ ಹೊಳೆಯಿಂದ ಹಿಂದಕ್ಕೆ ಕರೆಸಿದ್ದಾರೆ.

ಕಳೆದ ತಿಂಗಳ ಕಾಲದಿಂದ ಮೂಲ್ಕಿ ಶಾಂಭವಿ ಹೊಳೆಯ ಕೊಳಚಿಕಂಬಳ ಬಳಿ ಶಾಂಭವಿ ಮತ್ತು ನಂದಿನ ಹೊಳೆ ಸಮುದ್ರ ಸೇರುವ ಅಳಿವೆ ಬಾಗಿಲಿನಲ್ಲಿ ಮರುವಾಯಿ ಕಂಡು ಬಂದಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದ ದೂರದೂರುಗಳ ಸಹಸ್ರಾರು ಜನರು ಆಗಮಿಸಿ ನಿತ್ಯ ಗೋಣಿಗಟ್ಟಲೆ ಮರುವಾಯಿಗಳನ್ನು ಕೊಂಡೊಯ್ಯುತ್ತಿದ್ದಾರೆ. ಮಳೆಗಾಲ ಆರಂಭದ ಬಳಿಕ ಹೊಳೆ ನೀರು ಉಕ್ಕೇರುವ ಕಾರಣ ಈ ಪ್ರದೇಶ ಅತ್ಯಂತ ಅಪಾಯಕಾರಿ. ಈ ಬಗ್ಗೆ ವಿಕ ಎರಡು ಬಾರಿ ವರದಿ ಮೂಲಕ ಎಚ್ಚರಿಕೆಯನ್ನೂ ನೀಡಿತ್ತು. ಪೋಲೀಸರೂ ಎರಡೆರಡು ಬಾರಿ ಆಗಮಿಸಿ ಅಪಾಯಕಾರಿ ಪ್ರದೇಶವಾದ್ದರಿಂದ ನೀರಿಗಿಳಿಯದಂತೆ ಎಚ್ಚರಿಕೆ ನೀಡಿದ್ದರು. ಕೊಳಚಿಕಂಬಳ ಬಳಿ ಮೂಲ್ಕಿ ನಗರ ಪಂಚಾಯಿತಿ ಮತ್ತು ಮೂಲ್ಕಿ ಪೋಲೀಸರು ಎಚ್ಚರಿಕೆಯ ಫಲಕವನ್ನೂ ಅಳವಡಿಸಿದ್ದರು. ಬುಧವಾರ ಬೆಳಿಗ್ಗೆ ನೀರಿಗಿಳಿಯುತ್ತಿದ್ದವರನ್ನು ಸ್ಥಳೀಯರು ಎಚ್ಚರಿಸಿದ್ದರು.

ಆದರೆ ಬುಧವಾರ ದೂರದ ಕೂಳೂರು, ಹೊಸಬೆಟ್ಟು, ಕಿನ್ನಿಗೋಳಿ, ಪಡುಬಿದ್ರಿ, ಹಳೆಯಂಗಡಿ, ಮುಕ್ಕ ಕಡೆಗಳಿಂದ ಪುರುಷರು, ಮಹಿಳೆಯರು ಆಗಮಿಸಿ ಮರುವಾಯಿ ಹೆಕ್ಕಲು ಪ್ರಾರಂಭಿಸಿದ್ದರು. ನೀರಿನ ಹೆಚ್ಚಳ ಸಂದರ್ಭ ಸ್ಥಳೀಯರು ಹಾಗೂ ಮೀನುಗಾರರು ಎಚ್ಚರಿಸಿದರೂ ಪ್ರಯೋಜನವಾಗಲಿಲ್ಲ. ಇದೇ ಸಂದರ್ಭ ಗಾಳಿ ಮಳೆ ಪ್ರಾರಂಭವಾಗಿದ್ದರೂ ನೀರಿನಿಂದ ಮೇಲಕ್ಕೆ ಬಂದಿರಲಿಲ್ಲ. ಬಳಿಕ ಮೂಲ್ಕಿ ಪೋಲೀಸರು ಸ್ಥಳಕ್ಕಾಗಮಿಸಿ ಸೈರನ್ ಬಳಸಿ ಮೈಕ್ ಮೂಲಕ ಎಲ್ಲರನ್ನೂ ನೀರಿನಿಂದ ಮೇಲಕ್ಕೆ ಬರುವಂತೆ ಎಚ್ಚರಿಸಿದ್ದರು. ಮಧ್ಯಾಹ್ನದ ಬಳಿಕವಷ್ಟೇ ಎಲ್ಲರೂ ನೀರಿನಿಂದ ಮೇಲಕ್ಕೆ ಬಂದರು. ಈ ಸಂದರ್ಭ ಪೋಲೀಸರು ಎಲ್ಲರನ್ನೂ ಎಚ್ಚರಿಸಿ ಮತ್ತೆ ನೀರಿಗಿಳಿಯದಂತೆ ಆದೇಶಿಸಿದರು.

ಮುಕ್ಕ ಮತ್ತಿತರ ಕಡೆಯಿಂದ ಮೀನುಗಾರರು ಮೀನುಗಾರಿಕೆ ಸ್ಥಗಿತಗೊಂಡ ಕಾರಣ ಶಾಂಭವಿ ಹೊಳೆಗೆ ಮರುವಾಯಿ ಹೆಕ್ಕಲು ಆಗಮಿಸಿದ್ದು, ಸಮುದ್ರ ನೀರು ಹೊಳೆ ಬರುತ್ತಿದ್ದಂತೆ ಎಲ್ಲರನ್ನೂ ಎಚ್ಚರಿಸಿ ಮೇಲಕ್ಕೆ ಬಂದಿದ್ದರು. ಆದರೆ ಅವರ್ಯಾರೂ ಮೇಲಕ್ಕೆ ಬರಲು ಒಪ್ಪಲಿಲ್ಲ ಎಂದು ಮುಕ್ಕ ಮೂಲದ ಮೀನುಗಾರರು ಮಾಹಿತಿ ನೀಡಿದ್ದಾರೆ.

ಮೀನುಗಾರಿಕೆಯಲ್ಲಿ ಮೀನಿನ ಬರ ಬಂದ ಕಾರಣ ಹಲವಾರು ಮೀನುಗಾರರು ದೋಣಿ ಮೂಲಕ ಹೊಳೆಯ ಮಧ್ಯದಲ್ಲಿ ಮರುವಾಯಿ ತೆಗೆದು ಕುಂದಾಪುರ, ಮಲ್ಪೆ ಮುಂತಾದೆಡೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬುಧವಾರ ಹೊಳೆ ನೀರು ಹೆಚ್ಚಿದ್ದ ಕಾರಣ ಅವರು ನೀರಿಗಿಳಿದಿದ್ದರೂ ಬಹು ಬೇಗನೆ ನೀರಿನಿಂದ ಹೊರ ಬಂದಿದ್ದರು. ಅವರ ಪೈಕಿ ಇಲಿಯಾಸ್ ಎಂಬವರು ಹೇಳುವಂತೆ ಇಂದು ಹೊಳೆ ನೀರಿನ ಒತ್ತಡ ಅತೀ ಹೆಚ್ಚಾಗಿದೆ. ನೀರಿನಲ್ಲಿ ಮುಳುಗಿ ಮರುವಾಯಿ ಹೆಕ್ಕಲು ಕಷ್ಟಕರವಾಗುತ್ತಿದೆ. ಹಾಗಾಗಿ ನಾವೆಲ್ಲರೂ ನಿಗದಿತ ಸಮಯಕ್ಕಿಂತ ಬಹು ಬೇಗ ಹಿಂದೆ ಬಂದಿದ್ದೇವೆ ಎಂದಿದ್ದಾರೆ.

ಹೊಳೆಯಲ್ಲಿ ನೆರೆ ನೀರು ರಭಸವಾಗಿ ಬಂದಲ್ಲಿ ಈಗಿರುವ ಮರುವಾಯಿ ಸಮುದ್ರ ಸೇರಲಿದೆ. ಹೊಳೆ ನೀರಿನ ನೆಲದ ಮೇಲ್ಪದರದಲ್ಲಿ ಕೆಸರಿನ ನಡುವೆ ಇರುವ ಮರುವಾಯಿ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಸೇರುತ್ತದೆ. ಅಷ್ಟರವರೆಗೆ ಮಾತ್ರ ಮರುವಾಯಿ ಬೇಟೆ ಸಾಧ್ಯ ಎಂದು ಅನುಭವಿ ಮೀನುಗಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.