ಮೂಲ್ಕಿ: ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಮೂಲ್ಕಿ: ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಗಂಡು ಮಕ್ಕಳ ಕ್ರೀಡೆಯೆಂದೇ ಪ್ರಸಿದ್ಧಿ ಪಡೆದ ಕಬಡ್ಡಿಯಲ್ಲಿ ಮಹಿಳೆಯರೂ ಮಿಂಚುತ್ತಿರುವುದು ಔಚಿತ್ಯಪೂರ್ಣವಾದುದು ಎಂದು ಮೂಲ್ಕಿ ವಿಜಯಾ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹಾಗೂ ಮಂಗಳೂರು ಶ್ರೀ ಗುರು ಮಹಿಳಾ ಬ್ಯಾಂಕ್ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ ಹೇಳಿದರು.
ಮಂಗಳೂರು ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಮೂಲ್ಕಿ ವಿಜಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಅಂತರ್ ಕಾಲೇಜು ಮಟ್ಟದ ಎರಡು ದಿನಗಳ ಮಹಿಳೆಯರ ಕಬಡ್ಡಿ ಪಂದ್ಯಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಅಪ್ಪಟ ಭಾರತೀಯ ಕ್ರೀಡೆ ಕಬಡ್ಡಿಗೆ ಇಂದು ಅಂತರಾಷ್ಟ್ರೀಯ ಮಟ್ಟದ ಗೌರವ ಲಭಿಸಿದೆ. ಅದರಲ್ಲಿ ಮಹಿಳಾ ಕ್ರೀಡಾಪಟುಗಳು ಮಿಂಚುತ್ತಿದ್ದಾರೆ. ಕ್ರೀಡೆಯಲ್ಲಿ ಬರುವ ಸೋಲು ಗೆಲುವುಗಳ ಬಗ್ಗೆ ಗೌರವಯುತವಾಗ ನಡೆದು ಕ್ರೀಡಾ ಸ್ಪೂರ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದವರು ಹೇಳಿದರು.

ಮುಖ್ಯ ಅತಿಥಿ ಮಂಗಳೂರು ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ, ಇಂದು ಮಂಗಳೂರು ವಿಶ್ವ ವಿದ್ಯಾನಿಲಯವು ಕ್ರೀಡೆಗಾಗಿ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತುಗಳನ್ನು ಹೆಚ್ಚಿಸಿದೆ. ಮಹಿಳಾ ಕ್ರೀಡಾ ಪಟುಗಳು ಹೆಚ್ಚು ಭಾಗವಹಿಸಿ ಸ್ವರ್ಣ ಪದಕ ಗಳಿಕೆಯ ಮೂಲಕ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ವಿಜಯಾ ಪದವಿ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ವಹಿಸಿ ಶುಭ ಹಾರೈಸಿದರು.

ವಿಜಯಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮಿದಾ ಬೇಗಂ,ಆಡಳಿತ ಸಮಿತಿ ಸದಸ್ಯ ಡಾ.ಎಂ.ಎ.ಆರ್.ಕುಡ್ವಾ, ಎಚ್.ರಾಮದಾಸ್ ಕಾಮತ್,ಮಾಧವ ಸನಿಲ್, ಡಾ.ರೋಶನ್ ಕುಮಾರ್ ಶೆಟ್ಟಿ, ಕಾಲೇಜು ಕ್ರೀಡಾ ನಿರ್ದೇಶಕರಾದ ಪ್ರೊ.ಸಿದ್ದರಾಮಣ್ಣ,ನವೀನ್ ಎಸ್,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿ.ರಮೇಶ್ ಕಾಮತ್,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ನಿರೀಕ್ಷಿತ್ ಕುಕ್ಯಾನ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ತ್ರಿವಿಕ್ರಮ ಭಾಗವತ್ ಮತ್ತಿತರರಿದ್ದರು. ಪ್ರೊ.ಸಿದ್ದರಾಮಣ್ಣ ಸ್ವಾಗತಿಸಿದರು. ಶಿಲ್ಪಾ ರಾವ್ ನಿರೂಪಿಸಿದರು. ಶ್ರೀಲತಾ ಎಸ್.ತಂತ್ರಿ ವಂದಿಸಿದರು.