ಮೂಲ್ಕಿ-ಪಡುಬಿದ್ರಿ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿಗೆ ಆಗ್ರಹಿಸಿ ಹೆಜಮಾಡಿ ಟೋಲ್‍ನಲ್ಲಿ ಪ್ರತಿಭಟನೆ

ಮೂಲ್ಕಿ-ಪಡುಬಿದ್ರಿ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿಗೆ ಆಗ್ರಹಿಸಿ ಹೆಜಮಾಡಿ ಟೋಲ್‍ನಲ್ಲಿ ಪ್ರತಿಭಟನೆ

ಮೂರು ದಿನದೊಳಗೆ ಬೇಡಿಕೆ ಈಡೇರದಿದ್ದಲ್ಲಿ ಮೂಲ್ಕಿ-ಪಡುಬಿದ್ರಿ ಬಂದ್ ಎಚ್ಚರಿಕೆ

ಪಡುಬಿದ್ರಿ: ಅವಿಭಜಿತ ದಕ ಜಿಲ್ಲಾ ಗಡಿಭಾಗವಾದ ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಹೆಜಮಾಡಿ ಟೋಲ್ ಪ್ಲಾಝಾದಲ್ಲಿ 7 ಕಿಮೀ ವ್ಯಾಪ್ತಿಗೊಳಪಡುವ ಪಡುಬಿದ್ರಿ,ಪಲಿಮಾರು,ಎರ್ಮಾಳು,ಹಳೆಯಂಗಡಿ,ಪಡುಪಣಂಬೂರು ಗ್ರಾಮಗಳ ಖಾಸಗಿ ವಾಹನಗಳಿಗೆ ಸಂಪೂರ್ಣ ಟೋಲ್ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಬುಧವಾರ ಹೆಜಮಾಡಿ ಟೋಲ್ ಪ್ಲಾಝಾ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಮೂರು ದಿನದೊಳಗೆ ಬೇಡಿಕೆ ಈಡೇರದಿದ್ದಲ್ಲಿ ಮೂಲ್ಕಿ-ಪಡುಬಿದ್ರಿ ಬಂದ್ ನಡೆಸಿ ಉಗ್ರ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.

ಅವಿಭಜಿತ ದಕ ಜಿಲ್ಲಾ ರಾಹೆ ಹೋರಾಟ ಸಮಿತಿ,ಮೂಲ್ಕಿ,ಪಡುಬಿದ್ರಿ ವಾಹನ ಬಳಕೆದಾರರು,ಮತ್ತು ಈ ಭಾಗದ ಎಲ್ಲಾ ಸಂಘ ಸಂಸ್ಥೆಗಳು ಒಂದಾಗಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರ್ ಹೆಜ್ಮಾಡಿ,ಟೋಲ್ ಹಾಗೂ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಈ ಹಿಂದೆ ಹಲವು ಬಾರಿ ಹೋರಾಟ ನಡೆಸಲಾಗಿತ್ತು.ಆದರೆ ಸರಕಾರವಾಗಲೀ ಜಿಲ್ಲಾಡಳಿತವಾಗಲೀ ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ.ಜನಪ್ರತಿನಿಧಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ.ಸಾಸ್ತಾನದಲ್ಲಿ ನೀಡಿದಂತೆ ಹೆಜಮಾಡಿಯಲ್ಲೂ ಸುತ್ತಲ ಗ್ರಾಮವಾಸಿಗಳಿಗೆ ಸಂಪೂರ್ಣ ಟೋಲ್ ವಿನಾಯಿತಿ ನೀಡಲೇಬೇಕು.ಹೆಜಮಾಡಿಯ ಕನ್ನಂಗಾರು ಬಳಿ 600 ಮೀಟರ್ ಸರ್ವಿಸ್ ರಸ್ತೆ ಮಾಡುವುದಾಗಿ ನವಯುಗ್ ಭರವಸೆ ನೀಡಿದ್ದು ತಕ್ಷಣ ಕಾಮಗಾರಿ ನಡೆಸಬೇಕು.ಅದೇ ರೀತಿ ಶಿವನಗರ ಬಳಿ ಅತೀ ಹೆಚ್ಚು ಅಬಾಲ ವೃದ್ಧರು,ವಿದ್ಯಾರ್ಥಿಗಳು ರಸ್ತೆ ದಾಟುತ್ತಿದ್ದು,ಅಗತ್ಯವಾಗಿ ಸ್ಕೈವಾಕ್ ನಿರ್ಮಿಸಬೇಕು.ಹೆಜಮಾಡಿ ಟೋಲ್‍ನ ಎಲ್ಲಾ ಗೇಟ್‍ಗಳನ್ನು ದಿನದ 24 ಗಂಟೆಯೂ ತೆರೆದಿಡಬೇಕು.ಅಲ್ಲಿ ಮೂಲಭೂತ ಸೌಕರ್ಯಗಳನ್ನು ತಕ್ಷಣ ಒದಗಿಸಬೇಕು.ಬಾಕಿಯಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರ ಮುಗಿಸಬೇಕು ಎಂದವರು ಹೇಳಿದ್ದು,ನಮ್ಮ ತಾಳ್ಮೆಯನ್ನು ಪರೀಕ್ಷಿಸದಿದರಿ.ಬೇಡಿಕೆ ಈಡೇರದಿದ್ದಲ್ಲಿ ನಿರ್ಣಾಯಕ ಹೋರಟಕ್ಕೂ ಸಿದ್ಧರಿದ್ದೇವೆ ಎಂದರು.

ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ,ಮೂಲ್ಕಿ ಹಾಗೂ ಪಡುಬಿದ್ರಿಗಳಿಗೆ ಧಾರ್ಮಿಕ,ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಆತ್ಮೀಯ ಸಂಬಂಧವಿದೆ.ದಿನನಿತ್ಯ ಹೋಗಿಬರುವವರು ಅಧಿಕ ಮಂದಿ ಇದ್ದಾರೆ.ಅಲ್ಲದೆ ಎರಡೂ ಗ್ರಾಮಗಳು ಟೋಲ್ ಪ್ಲಾಝಾದಿಂದ ಒಂದು ಕಿಮೀ ಅಂತರದಲ್ಲಿದೆ.ಸಾಸ್ತಾನದಲ್ಲಿ ನೀಡಿದಂತೆ ಹೆಜಮಾಡಿ ಟೋಲ್‍ನಲ್ಲೂ 7 ಕಿಮಿ ವ್ಯಾಪ್ತಿಯ ಖಾಸಗಿ ವಾಹನಗಳಿಗೆ ಟೋಲ್‍ನಲ್ಲಿ ಸಂಪೂರ್ಣ ವಿನಾಯಿತಿ ನೀಡಲೇಬೇಕು.ನಮ್ಮ ಸಹನೆಯನ್ನು ಪರೀಕ್ಷಿಸದಿರಿ.ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ.ಮೂರು ದಿನದೊಳಗೆ ನಮ್ಮ ಬೇಡಿಕೆಯನ್ನೂ ಈಡೇರಿಸಲೇಬೇಕು ಎಂದರು.

ತಲಪಾಡಿ ಟೋಲ್ ಹೋರಾಟ ಸಮಿತಿಯ ಸಿದ್ದಿಕ್ ತಲಪಾಡಿ ಮಾತನಾಡಿ,ನಮ್ಮನ್ನು ಪರೀಕ್ಷಿಸಬೇಡಿ.ನಮ್ಮ ಶಾಂತಿಯುತ ಪ್ರತಿಭಟನೆಗೆ ಮಣಿದು ಟೋಲ್ ವಿನಾಯಿತಿ ನೀಡಿ.ತಪ್ಪಿದಲ್ಲಿ ಟೋಲ್‍ಗೆ ಮುತ್ತಿಗೆ ಹಾಕಿ ನಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದರು.ಜನಪ್ರತಿನಿಧಿಗಳ ಮೌನವನ್ನೂ ಅವರು ಪ್ರಶ್ನಿಸಿದರು.

ಮನವಿ ಸಲ್ಲಿಕೆ: ಈ ಸಂದರ್ಭ ಜಿಲ್ಲಾಡಳಿತದ ಪರವಾಗಿ ಆಗಮಿಸಿದ ಕಾಪು ಆರ್‍ಐ ರವಿಶಂಕರ್‍ಗೆ ವಿವಿಧ ಬೇಡಿಕೆಗಳ ಮನವಿಯನ್ನು ನೀಡಲಾಯಿತು.ಮನವಿಯನ್ನು ಉಭಯ ಜಿಲ್ಲಾಧಿಕಾರಿಗಳು,ಉಭಯ ಜಿಲ್ಲಾ ಉಸ್ತವಾರಿ ಸಚಿವರು,ಪೋಲೀಸ್ ವರಿಷ್ಠಾಧಿಕಾರಿಗಳು,ಉಭಯ ಸಂಸದರುಗಳಿಗೆ ನೀಡಲಾಗಿದ್ದು,ತಹಶೀಲ್ದಾರ್ ಮೂಲಕ ಸಂಬಂಧಿಸಿದವರಿಗೆ ಶೀಘ್ರ ತಲುಪಿಸುವುದಾಗಿ ಅವರು ಭರವಸೆ ನೀಡಿದರು.

ಇದೇ ಸಂದರ್ಭ ಟೋಲ್‍ಗೆ ತೆರಳಿದ ಪ್ರತಿಭಟನಾಕಾರರು ಟೋಲ್ ಮ್ಯಾನೇಜರ್ ಶಿವಪ್ರಸಾದ್ ರೈಯವರಿಗೂ ಮನವಿ ಸಲ್ಲಿಸಿ ಶೀಘ್ರ ಟೋಲ್ ವಿನಾಯಿತಿಗೆ ಆಗ್ರಹಿಸಿದರು.ಈ ಬಗ್ಗೆ ನವಯುಗ್ ಮುಖ್ಯಸ್ಥರಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಸಾಸ್ತಾನ ಟೋಲ್ ಹೋರಾಟ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ,ಹೆಜಮಾಡಿ ಟೋಲ್ ಹೋರಾಟ ಸಮಿತಿಯ ಅಧ್ಯಕ್ಷ ಗುಲಾಮ್ ಮೊಹಮ್ಮದ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್,ಕಾಪು ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಹರೀಶ್ ಎನ್.ಪುತ್ರನ್,ಮಧು ಆಚಾರ್ಯ ಮೂಲ್ಕಿ,ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು,ಮೂಲ್ಕಿ ಜೆಡಿಎಸ್ ಅಧ್ಯಕ್ಷ ಜೀವನ್ ಕೆ.ಶೆಟ್ಟಿ,ರಾಮಚಂದ್ರ ನಾಯಕ್ ಕೊಲ್ನಾಡುಗುತ್ತು,ವೈ.ಸುಧೀರ್ ಕುಮಾರ್,ಕರವೇ ಅಧ್ಯಕ್ಷ ಅನ್ಸಾರ್ ಅಹಮದ್,ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ಶರೀಫ್ ಮೂಲ್ಕಿ,ಸಾಧು ಅಂಚನ್ ಮಾತನಾಡಿದರು.

ಬಪ್ಪನಾಡು ದೇವಳದ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ,ದೇವಪ್ರಸಾದ್ ಪುನರೂರು,ಅಬ್ದುಲ್ ರಝಾಕ್,ರಾಧಿಕಾ ಕೋಟ್ಯಾನ್,ಆಸಿಫ್ ಮೊಹಮ್ಮದ್,ಶಶಿಕಾಂತ್ ಶೆಟ್ಟಿ,ಗಣೇಶ್ ಕೋಟ್ಯಾನ್,ದೇವಣ್ಣ ನಾಯಕ್,ಉದಯ ಶೆಟ್ಟಿ,ಅಶೋಕ್ ಶೆಟ್ಟಿ,ಮುನೀರ್ ಕಾರ್ನಾಡು,ಗೋಪಿನಾಥ ಪಡಂಗ,ಸುಧೀರ್ ಕರ್ಕೇರ,ರಂಗನಾಥ ಶೆಟ್ಟಿ,ಶಿವ ಶೆಟ್ಟಿ,ಯಾದವ ಕೋಟ್ಯಾನ್,ಕಿಶೋರ್ ಶೆಟ್ಟಿ,ವೀರಯ್ಯ ಹಿರೇಮಠ,ಗೊಳ್ಳಾಲಪ್ಪ,ಶೈಲೇಶ್ ಕುಮಾರ್,ನವೀನ್‍ರಾಜ್,ಚಂದ್ರಶೇಖರ ಸುವರ್ಣ,ಸದಾಶಿವ ಹೊಸದುರ್ಗ,ಜೀವನ್ ಮೂಲ್ಕಿ,ಹರ್ಷರಾಜ್ ಶೆಟ್ಟಿ,ವಿಠಲ,ಯೋಗೀಶ್ ಕೋಟ್ಯಾನ್,ಜೀವನ್ ಅಂಗರಗುಡ್ಡೆ,ಸತ್ಯೇಂದ್ರ ಶೆಣೈ,ಉದಯ ಅಮೀನ್,ಪುತ್ತುಬಾವ,ವೆಂಕಟೇಶ್ ಹೆಬ್ಬಾರ್,ಪ್ರಬೋದ್ ಕುಡ್ವ,ಮ್ಯಾಕ್ಷಿಂ ಡಿಸೋಜಾ,ನಿಜಾಮುದ್ದೀನ್,ಸುಧೀರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಕಳ ಎಎಸ್‍ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಕಾಪು ಸಿಐ ಮಹೇಶ್‍ಪ್ರಸಾದ್,ಪಡುಬಿದ್ರಿ ಎಸ್‍ಐ ಸತೀಶ್ ಉಸ್ತುವಾರಿಯಲ್ಲಿ ಸೂಕ್ತ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಭಾನುವಾರ ಸಭೆ: ಹೋರಾಟವನ್ನು ಜೀವಂತವಾಗಿರುವ ಉದ್ದೇಶದಿಂದ ಹೋರಾಟ ಸಮಿತಿಯು ಭಾನುವಾರ(ಜ.6) ಬೆಳಿಗ್ಗೆ 10 ಗಂಟೆಗೆ ಮೂಲ್ಕಿಯ ಬಪ್ಪನಾಡು ದೇವಳದ ಸಭಾಂಗಣದಲ್ಲಿ ಸಮಾನಾಸಕ್ತರ ಸಭೆಯನ್ನು ಕರೆದಿದೆ ಎಂದು ಹೋರಾಟ ಸಮಿತಿಯ ಪರವಾಗಿ ಸುನಿಲ್ ಆಳ್ವ ತಿಳಿಸಿದ್ದಾರೆ.