ಮೂಲ್ಕಿ: ನಾಲ್ವರು ತಮಿಳುನಾಡು ಮೂಲದ ಸರಗಳ್ಳಿಯರ ಬಂಧನ

ಮೂಲ್ಕಿ: ಭಾನುವಾರ ಮಧ್ಯಾಹ್ಮ ಹಳೆಯಂಗಡಿಯಿಂದ ಕಿನ್ನಿಗೋಳಿಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಕರಂತೆ ಬಂದು ಮಹಿಳೆಯೊಬ್ಬರ ಚಿನ್ನದ ಸರ ಅಪಹರಿಸಿದ್ದ ನಾಲ್ವರು ತಮಿಳುನಾಡು ಮೂಲದ ಸರಗಳ್ಳಿಯರನ್ನು ಅದೇ ದಿನ ಸಂಜೆ ಮೂಲ್ಕಿ ಪೊಲೀಸರು ಬಂಧಿಸಿ ಚಿನ್ನದ ಸರವನ್ನು ಸ್ವಾಧಿನಪಡಿಸಿಕೊಂಡಿದ್ದಾರೆ.

ಮೂಲ್ಕಿ ಠಾಣಾ ವ್ಯಾಪ್ತಿಯ ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ಚರ್ಚ್ ಬಳಿ ಬಸ್ಸು ಬರುವ ಸಂದರ್ಭ ಸರಕಳ್ಳಿಯರು ರತ್ನಾ ಎಂಬವರ 50 ಸಾವಿರ ರೂ.ಮೌಲ್ಯದ 3 ಪವನ್ ತೂಕದ ಚಿನ್ನದ ಹವಳದ ಸರವನ್ನು ಎಗರಿಸಿದ್ದರು.

ಈ ಬಗ್ಗೆ ಮಾಹಿತಿ ಅರಿತ ಮೂಲ್ಕಿ ಠಾಣಾಧಿಕಾರಿ ಅನಂತಪದ್ಮನಾಭ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಅದೇ ಪರಿಸರದಲ್ಲಿ ತಿರುಗಾಡುತ್ತಿದ್ದ ಅಲೆಮಾರಿ ಮಹಿಳೆಯರನ್ನು ವಿಚಾರಿಸಿದಾಗ ಉತ್ತರಿಸಲು ತಡಕಾಡಿದ ಹಿನ್ನೆಲೆಯಲ್ಲಿ ಮಹಿಳಾ ಪೋಲೀಸರ ನೆರವಿನೊಂದಿಗೆ ವಶಕ್ಕೆ ಪಡೆದು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ತೀವ್ರ ತನಿಖೆ ನಡೆಸಿದಾಗ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದರು.

ಈ ಸಂದರ್ಭ ಅವರಿಂದ ರತ್ನಾರವರ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ವಿವರ: ತಮಿಳುನಾಡು ಮೂಲದ ಸೊಡಲ ಯಾನೆ ಸೊಡಲೈ ಯಾನೆ ಸತ್ಯಾ ಶರವಣನ್(30),ಹರಿಣಿ ಯಾನೆ ಇಂದ್ರಾಣಿ ಯಾನೆ ಇಂದಿರಾಣಿ ರಾಹುಲ್(29),ರೋಹಿಣಿ ಯಾನೆ ಮಾರಿಮುತ್ತು ಮುರುಗನ್(30) ಮತ್ತು ದಿವ್ಯಾ ವಿಕ್ಕಿ(23) ಬಂಧಿತ ಮಹಿಳೆಯರು.ಇವರೆಲ್ಲಾ ತಮಿಳುನಾಡಿನ ತಿರುಪೂರು ಜಿಲ್ಲೆಯ ಪೆರಿಚಲ್ ಗ್ರಾಮದ ಪಿಳ್ಳೆಯಾರ್ ದೇವಳ ಬಳಿಯ ನಿವಾಸಿಗಳು.
ಪೋಲೀಸ್ ಆಯುಕ್ತರಾದ ಟಿ.ಆರ್.ಸುರೇಶ್ ನಿರ್ದೇಶನದಲ್ಲಿ ಉಪ ಆಯುಕ್ತರಾದ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಉತ್ತರ ಉಪವಿಭಾಗದ ಸಹಾಯಕ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಮೂಲ್ಕಿ ನಿರೀಕ್ಷಕ ಅನಂತಪದ್ಮನಾಭ,ಎಸ್‍ಐಗಳಾದ ಶೀತಲ್ ಅಲಗೂರು ಮತ್ತು ಕಮಲಾ,ಎಎಸ್‍ಐ ಚಂದ್ರಶೇಖರ್,ಪೋಲೀಸ್ ಸಿಬ್ಬಂದಿಗಳಾದ ಮೆಲ್ವಿನ್ ಪಿಂಟೋ,ತಾರಾನಾಥ್,ಧರ್ಮೇಂದ್ರ,ವಿವೇಕಾನಂದ,ಮಹೇಶ್,ಅಣ್ಣಪ್ಪ,ಮೊಹಮ್ಮದ್ ಹುಸೇನ್,ರಾಜೇಶ್,ದಿನೇಶ್,ಚಂದ್ರಶೇಖರ್,ಸೌಮ್ಯಾ,ಅಕ್ಷಯಾ,ಸಬಿಯಾ ಬಾನು,ಮೇಘಾ,ಶಾರದಾ,ರೇಣುಕಾ,ವಿಜಯಾ,ಲಾಮಣಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.