ಮೂಲ್ಕಿ ತಾಲೂಕು ರಚನೆಗೆ ಪ್ರಥಮ ಆದ್ಯತೆ-ಮುಖ್ಯಮಂತ್ರಿ,ಕಂದಾಯ ಸಚಿವರ ಭರವಸೆ

ಮೂಲ್ಕಿ; ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 30 ಕಂದಾಯ ಗ್ರಾಮಗಳನ್ನೊಳಗೊಂಡ ಮೂಲ್ಕಿ ತಾಲೂಕು ರಚನೆ ಬಗ್ಗೆ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಹಿತ ಕಾಂಗ್ರೆಸ್ ನಿಯೋಗ ಬುಧವಾರ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು,ಸಪ್ಲಿಮೆಂಟರಿ ಬಜೆಟ್‍ನಲ್ಲಿ ಖಚಿತವಾಗಿ ಮೂಲ್ಕಿ ತಾಲೂಕು ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮೂಲ್ಕಿ ಹೋಬಳಿಯು ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು,ಈಗಾಗಲೇ ಮಾಜಿ ಸಚಿವರುಗಳಾದ ಕೆ.ಅಭಯಚಂದ್ರ ಜೈನ್ ಮತ್ತು ಕೆ.ಅಮರನಾಥ ಶೆಟ್ಟಿಯವರು ತಾಲೂಕು ಘೋಷಣೆ ಬಗ್ಗೆ ಮನವಿ ಮಾಡಿದ್ದಾರೆ.ಆದ್ದರಿಂದ ಆದಷ್ಟು ಶೀಘ್ರ ತಾಲೂಕು ಘೋಷಣೆ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದ್ದು,ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರು ಪ್ರಥಮ ಆದ್ಯತೆ ಮೇರೆಗೆ ಸಪ್ಲಿಮೆಂಟರಿ ಬಜೆಟ್‍ನಲ್ಲಿ ಮೂಲ್ಕಿ ತಾಲೂಕು ಘೋಷಣೆ ಮಾಡುವ ಭರವಸೆ ನೀಡಿದರು.

ಈ ಸಂದರ್ಭ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು,ಕೆಪಿಸಿಸಿ ಸದಸ್ಯ ಎಚ್.ವಸಂತ್ ಬೆರ್ನಾರ್ಡ್,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ್ ಕೋಟ್ಯಾನ್ ಮೂಡಬಿದಿರೆ ಜತೆಗಿದ್ದರು.