ಮೂಲ್ಕಿ ತಾಲೂಕು ರಚನೆಗೆ ಪ್ರಾಮಾಣಿಕ ಪ್ರಯತ್ನ – ಸಚಿವ ಯು.ಟಿ.ಖಾದರ್ ಭರವಸೆ

ಮೂಲ್ಕಿ: ಮೂಲ್ಕಿ ಹೋಬಳಿಯ ಜನತೆಯ ಬಹು ದಿನದ ಬೇಡಿಕೆಯಾಗಿರುವ ಮೂಲ್ಕಿ ತಾಲೂಕು ರಚನೆ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯಯವರಿಗೆ ಮನವಿ ಸಲ್ಲಿಸಿದ್ದು ಶೀಘ್ರ ತಾಲೂಕು ರಚನೆಯ ಭರವಸೆ ದೊರಕಿದೆ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ದಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.

ಶನಿವಾರ ಮೂಲ್ಕಿ ನಗರ ಪಂಚಾಯಿತಿಯ ಸಮುದಾಯ ಭವನದಲ್ಲಿ ನಡೆದ ಮೂಲ್ಕಿ ಹೋಬಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನೆನೆಗುದಿಗೆ ಬಿದ್ದಿರುವ ಮೂಲ್ಕಿ ತಾಲೂಕು ರಚನೆ ಬಗ್ಗೆ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರಸ್ತಾವಿಸಿ ಮೂಲ್ಕಿಯಲ್ಲಿ ತಾಲೂಕು ರಚನೆ ಅತೀ ಅಗತ್ಯವಾಗಿದ್ದು ಜೊತೆಗೆ ನ್ಯಾಯಾಲಯ ಸ್ಥಾಪನೆ,ಅಗ್ನಿ ಶಾಮಕ ಘಟಕ ಆಗಬೇಕಾಗಿದ್ದು ಈ ಬಗ್ಗೆ ಪ್ರಯತ್ನಿಸುವಂತೆ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಎಲ್ಲಾ ನಗರ ಪಂಚಾಯಿತಿಗಳಲ್ಲಿ ದಾರಿ ದೀಪ,ಕುಡಿಯುವ ನೀರು ಮತ್ತು ಒಳ ಚರಂಡಿಯ ನಿರ್ವಹಣೆಯನ್ನು ಸರ್ಕಾರದ ಸಂಬಂಧಪಟ್ಟ ಇಲಾಖೆಯು ನೇರವಾಗಿ ನಿರ್ವಹಣೆ ಮಾಡಲಿದ್ದು ನಗರ ಪಂಚಾಯಿತಿಗಳು ಹೊಸ ಮನೆ ನಂಬ್ರ ನೀಡುವ ಸಂದರ್ಭದಲ್ಲಿ ನೀರಿನ ಸಂಪರ್ಕ ಮತ್ತು ಒಳ ಚರಂಡಿ ವ್ಯವಸ್ಥೆ ಕಡ್ಡಾಯ ಮಾಡಬೇಕೆಂದು ಖಾದರ್ ಹೇಳಿದರು.

ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಸಂಕೀರ್ಣಕ್ಕೆ ಮತ್ತಿತರ ವ್ಯವಸ್ಥೆಗಳಿಗೆ ಸರ್ಕಾರಿ ಜಾಗದ ಕೊರತೆಯಿರುವುದರಿಂದ ಪಂಚಾಯಿತಿ ವ್ಯಾಪ್ತಿಯ ಹೊರಗಡೆಯ ಗ್ರಾಮೀಣ ಪ್ರದೇಶದ ಜಾಗವನ್ನು ಖರೀದಿಸಿ ಸಮಸ್ಯೆ ಬಗೆಹರಿಸಬೇಕು.ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು.ಶೇಕಡಾ 24.5 ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹಾಗೂ ಶೇಕಡಾ 3 ಅನುದಾನದಲ್ಲಿ ವಿಶೇಷ ಚೇತನರಿಗೆ ನೀಡುವ ಅನುದಾನವು ಕೇವಲ ಕಾಟಾಚಾರಕ್ಕೆ ಸೀಮಿತವಾಗದೇ ಅದರಿಂದ ಅವರಿಗೆ ಉಪಯೋಗವಾಗುವ ರೀತಿಯಲ್ಲಿ ಸ್ವಾವಲಂಬಿ ಜೀವನ ನಡೆಸಲು ಪೂರಕವಾಗುವ ರೀತಿಯಲ್ಲಿ ವಿತರಣೆ ಮಾಡಬೇಕು ಎಂದವರು ಹೇಳಿದರು.

ಇದೇ ವೇಳೆ ಮೂಲ್ಕಿಗೆ ಅಗ್ನಿಶಾಮಕ ಘಟಕ ಸ್ಥಾಪನೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.

ಮರಳು ಸಮಸ್ಯೆ ಬಗ್ಗೆ ಧನಂಜಯ ಕೋಟ್ಯಾನ್ ಪ್ರಸ್ತಾವಿಸಿದಾಗ ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕುಡಿಯುವ ನೀರು ಮತ್ತು ಒಳ ಚರಂಡಿ ವ್ಯವಸ್ಥೆ: ಮೂಲ್ಕಿಗೆ 15 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದು ಕೆಐಎಡಿಬಿ ಮೂಲಕ ನಡೆಯುತ್ತಿರುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.ಶೀಘ್ರದಲ್ಲಿ ಕಾಮಗಾರಿ ಮುಗಿಸುವಂತೆ ಒತ್ತಡ ಹೇರಬೇಕೆಂದು ಹಾಗೂ ಮೂಲ್ಕಿಗೆ ಒಳಚರಂಡಿ ವ್ಯವಸ್ಥೆಗೆ 2004 ರಲ್ಲಿ 32 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದು ಅದನ್ನು ಶೀಘ್ರದಲ್ಲಿ ಮಂಜೂರು ಮಾಡುವಂತೆ ಸಚಿವರನ್ನು ಆಗ್ರಹಿಸಲಾಯಿತು.
ಎಸ್‍ಟಿಪಿಗೆ ಜಾಗದ ಅವಶ್ಯಕತೆಯಿದ್ದ ಸೂಕ್ತ ಜಾಗ ಗುರುತಿಸಿದಲ್ಲಿ ಒಳ ಚರಂಡಿ ಯೋಜನೆ ಪ್ರಸ್ತಾವನೆ ಮಂಜೂರು ಮಾಡಲಾಗುವುದೆಂದು ಸಚಿವರು ಭರವಸೆ ನೀಡಿದರು.

ಡಂಪಿಂಗ್ ಯಾರ್ಡ್ ಸಮಸ್ಯೆ: ಮೂಲ್ಕಿ ಸಮೀಪದ ಎಳತ್ತೂರು ಬಳಿ ಡಂಪಿಂಗ್ ಯಾರ್ಡ್‍ಗಾಗಿ ಖರೀದಿಸಿದ 2.5 ಎಕ್ರೆ ಜಾಗ ಅಲ್ಲಿ ನ ಸ್ಥಳೀಯರ ವಿರೋಧದಿಂದ ಡಂಪಿಂಗ್ ಯಾರ್ಡ್ ನಿರ್ಮಾಣವಾಗದೇ ಹಾಗೇಯೇ ಉಳಿದಿದೆ.ಅದನ್ನು ವಸತಿ ಯೋಜನೆಗೆ ಉಪಯೋಗಿಸಲು ಅವಕಾಶ ನೀಡುವಂತೆ ಮೂಲ್ಕಿ ಪಂಚಾಯಿತಿ ಮಾಜಿ ಅಧ್ಯಕ್ಷ ಬಿಎಂ ಆಸೀಫ್ ತಿಳಿಸಿದರು.ಜಾಗ ಪರಿವರ್ತನೆಗೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಪಂಚಾಯತ್ ಮುಖ್ಯಾಧಿಕಾರಿಗೆ ತಿಳಿಸಿದರು.

ಬಾಕಿ ವಸೂಲಿಗೆ ಆದೇಶ: ಮೂಲ್ಕಿ ನಗರ ಪಂಚಾಯಿತಿಯ 2018-19ರ ಸಾಲಿನ ಖರ್ಚು ವೆಚ್ಚಗಳನ್ನು ಪರಿಶೀಲಿಸಿದ ಸಚಿವರು ಬಾಕಿಯಿರಿಸಿರುವ ತೆರಿಗೆ ಮೊತ್ತ,ನೀರಿನ ಬಿಲ್ಲು ಮತ್ತಿತರ ಬಾಕಿ ಹಣವನ್ನು ಕೂಡಲೇ ಸಂಗ್ರಹಿಸುವಂತೆ ಆದೇಶಿಸಿದರು.

ನಪಂನ ಗುತ್ತಿಗೆ ಪೌರ ಕಾರ್ಮಿಕರಲ್ಲಿ ವಾಹನ ಚಾಲಕರು ಮತ್ತು ಲೋಡರ್‍ಗಳನ್ನು ಖಾಯಂಗೊಳಿಸಲು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನೀಲ್ ಆಳ್ವ ವಹಿಸಿದ್ದು ಲೋಕೋಪಯೋಗಿ ಇಲಾಖೆ,ಜಿಲ್ಲಾ ಪಂಚಾಯಿತಿ,ಅರಣ್ಯ ಇಲಾಖೆ,ಪೆÇಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.

ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು,ತಾಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು,ಮೂಲ್ಕಿಯ ವಿಶೇಷ ತಹಶೀಲ್ದಾರ್ ಮಾಣಿಕ್ಯ,ಮೂಲ್ಕಿ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯೆಲೇಶ್ ಕುಮಾರ್,ಸದಸ್ಯರಾದ ಪುತ್ತು ಬಾವು,ವಿಮಲಾ ಪೂಜಾರಿ,ಬಶೀರ್ ಕುಳಾಯಿ,ಬಿಎಂ ಆಸೀಫ್,ಅತಿಕಾರಿಬೆಟ್ಟು ಪಂಚಾಯಿತಿ ಅಧ್ಯಕ್ಷೆ ಶಾರದಾ ವಸಂತ್ ಸೇರಿದಂತೆ ಮೂಲ್ಕಿ ಹೋಬಳಿಯ ಪಂಚಾಯಿತಿಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯ ಸ್ಥಳೀಯರು ತಮಗೆ ಹಕ್ಕು ಪತ್ರ ನೀಡಿದ್ದು ಆದರೆ ಮನೆ ನಂಬ್ರ ನೀಡದಿರುವುದರಿಂದ ಆಗಿರುವ ಸಮಸ್ಯೆ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು.ಕಟೀಲು ಮಲ್ಲಿಗೆ ಅಂಗಡಿಯ ಸ್ಥಳೀಯರು ಮನೆ ನಿವೇಶನಕ್ಕೆ ಜಾಗ ನೀಡುವಂತೆ ಮನವಿ ಸಲ್ಲಿಸಿದರು.

ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಇಂದು ಎಂ ಸ್ವಾಗತಿಸಿದರು.ಗ್ರಾಮ ಲೆಕ್ಕಿಗೆ ಪ್ರದೀಪ್ ಕಾರ್ಯಕ್ರಮ ನಿರ್ವಹಿಸಿದರು.