ಮೂಲ್ಕಿ ತಾಲೂಕು ಘೋಷಣೆ: ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಹೋರಾಟಕ್ಕೆ ಸಿಕ್ಕಿದ ದೊಡ್ಡ ಗೆಲುವು

ಮೂಲ್ಕಿ: ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಈ ಸಲ 10 ಹೊಸ ತಾಲೂಕನ್ನು ಘೋಷಣೆ ಮಾಡುವಾಗ, ಮೂಲ್ಕಿ ಹೋಬಳಿ ಜನರ ಹಲವಾರು ವರ್ಷಗಳ ಕನಸು ಆಗಿರುವ ಮೂಲ್ಕಿ ತಾಲೂಕನ್ನು ಕ್ಯಾಬಿನೆಟ್ ಸಭೆಯಲ್ಲಿ ಘೋಷಣೆ ಮಾಡಿರುವುದು ಮೂಲ್ಕಿ ಹೋಬಳಿ ಜನರಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಮಾತಿಗೆ ಮಾತು ಕೊಟ್ಟರೆ ತಪ್ಪುವುದಿಲ್ಲ ಎಂಬುವುದನ್ನು ನಮ್ಮ ಮುಖ್ಯಮಂತ್ರಿಯವರು ರಾಜ್ಯದ ಜನರಿಗೆ ತೋರಿಸಿ ಕೊಟ್ಟಿರುತ್ತಾರೆ ಎಂದು ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಎನ್. ಪುತ್ರನ್ ಹೇಳಿದ್ದಾರೆ.

ಮೂಲ್ಕಿ ಸ್ವಾಗತ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಸಮಿತಿಯ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೂಲ್ಕಿಯನ್ನು ತಾಲೂಕಾಗಿ ಘೋಷಿಸಿದ್ದಕ್ಕೆ ಮುಖ್ಯಮಂತ್ರಿಂ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮೂಲ್ಕಿ ಹೋಬಳಿ ಜನರ ಪರವಾಗಿ ಮಿತಿಯು ಧನ್ಯವಾದವನ್ನು ಹೃದಯ ಸ್ಪರ್ಶಿಯಾಗಿ ಅರ್ಪಿಸುತ್ತದೆ.ಅದಲ್ಲದೆ ಅವರ ಸಂಪುಟ ಸಹೊದ್ಯೋಗಿಗಳಿಗೂ, ನಮ್ಮೊಟ್ಟಿಗೆ ಸಹಕರಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಅಬ್ದುಲ್ ಖಾದರ್ ಕಂದಾಯ ಆರ್.ವಿ.ದೇಶ್‍ಪಾಂಡೆ,ಮಾಜಿ ಸಚಿವರಾದ ಕೆ.ಅಮರನಾಥ ಶೆಟ್ಟಿ ಮತ್ತು ಕೆ.ಅಭಯಚಂದ್ರ ಜೈನ್,ಶಾಸಕರಾದ ಉಮಾನಾಥ ಕೋಟ್ಯಾನ್‍ರನ್ನು ಅಭಿನಂದಿಸಿದ್ದಾರೆ.

ಮುಲ್ಕಿ ತಾಲೂಕು ಆಗಬೇಕೆಂದು ನಮ್ಮ ಹಿರಿಯರು ತುಂಬಾ ಹೋರಾಟವನ್ನು ಮಾಡುತ್ತಿದ್ದರು.ಆದರೆ ಇದಕ್ಕೆ ಸರಿಯಾದ ಸಮಯದಲ್ಲಿ ಫಲ ದೊರಕದ ಸಂದರ್ಭದಲ್ಲಿ ಹೊಸತಾಗಿ ರಚನೆಯಾದ “ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ”ಯ ಒಗ್ಗಟಿನ ಪ್ರತಿಫಲವಾಗಿ ಇಂದು ಮೂಲ್ಕಿ ತಾಲೂಕು ಆಗುವ ಸುಸಂದರ್ಭ ಒದಗಿ ಬಂದಿದೆ ಎಂದು ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ.
ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ,40 ವರ್ಷಕ್ಕೂ ಅಧಿಕ ಸಮಯದಿಂದ ಹೋರಾಟ ನಡೆಸಿದ್ದೇವೆ.ಡಾ.ಶಿವರಾಮ ಕಾರಂತರ ಜತೆ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೆವು.ದಕ ಜಿಲ್ಲೆ ವಿಭಜನೆಗೆ ಮುನ್ನ ಮೂಲ್ಕಿ ತಾಲೂಕು ಘೋಷಣೆ ಮಾಡಬೇಕೆಂದು ನಮ್ಮ ಮುಖ್ಯ ಬೇಡಿಕೆಯಾಗಿತ್ತು.ಈಗಲಾದರೂ ಬೇಡಿಕೆ ಈಡೇರಿದೆ.ಇದೀಗ ಮೂಲ್ಕಿಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಜೀವನ್ ಕೆ.ಶೆಟ್ಟಿ,ಸುನಿಲ್ ಆಳ್ವ,ಮಧು ಆಚಾರ್ಯ,ಧನಂಜಯ ಮಟ್ಟು,ಇಕ್ಬಾಲ್ ಅಹಮದ್,ಭುವನಾಭಿರಾಮ ಉಡುಪ,ಉದಯ ಶೆಟ್ಟಿ,ಭಾಸ್ಕರ ಹೆಗ್ಡೆ,ಸದಾಶಿವ ಹೊಸದುರ್ಗ,ಭಾಸ್ಕರ್ ಶೆಟ್ಟಿಗಾರ್,ವೆಂಕಟೇಶ್ ಹೆಬ್ಬಾರ್,ಸುಶಿಲ್ ಬಂಗೇರ,ನೂರುಲ್ಲಾ,ಶರೀಫ್ ಕೊಲ್ನಾಡು,ದೇವಪ್ರಸಾದ್ ಪುನರೂರು,ರಂಗನಾಥ ಶೆಟ್ಟಿ,ಸತೀಶ್ ಅಂಚನ್ ಉಪಸ್ಥಿತರಿದ್ದರು.