ಮೂಲ್ಕಿ ತಾಲೂಕು ಘೋಷಣೆ-ನಗರಾಭಿವೃದ್ಧಿಯೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ಉಪಯುಕ್ತ-ಉಮಾನಾಥ ಕೋಟ್ಯಾನ್

ಮೂಲ್ಕಿ: ಮೂಲ್ಕಿ ತಾಲೂಕು ರಚನೆಗೆ ಇಲ್ಲಿನ ನೂರಾರು ಹಿರಿಯರು ಶ್ರಮಪಟ್ಟಿದ್ದರು.ಕಳೆದ 44 ವರ್ಷಗಳಿಂದ ಹೋರಾಟ ನಡೆದಿತ್ತು.ಇದೀಗ ಅವರೆಲ್ಲರ ಶ್ರಮದ ಫಲವಾಗಿ ಮೂಲ್ಕಿ ತಾಲೂಕು ಘೋಷಣೆಯಾಗಿದೆ.ಇದರಿಂದ ನಗರದೊಂದಿಗೆ ತಾಲೂಕಿನ ಗ್ರಾಮೀಣಾಭಿವೃದ್ಧಿ ತ್ವರಿತವಾಗಿ ನಡೆಯಲಿದೆ ಎಂದು ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶುಕ್ರವಾರ ಕ್ಷೇತ್ರ ಬಿಜೆಪಿ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲೂಕು ರಚನೆಗೆ ಆರ್.ವಿ.ದೇಶಪಾಂಡೆ ಬಹಳ ಶ್ರಮಿಸಿದ್ದರು.ಕಳೆದ ಕೆಲವು ದಿನಗಳಲ್ಲಿ ತಾನವರೊಂದಿಗೆ ಬಹಳ ಸಮಯ ಕಳೆದಿದ್ದೆ.ಅವರ ಸತತ ಪ್ರಯತ್ನದಿಂದ ತಾಲೂಕು ಘೋಷಣೆ ತ್ವರಿತವಾಯಿತು ಎಂದವರು ಹೇಳಿದರಲ್ಲದೆ,ತಾಲೂಕು ರಚನೆಗಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಗುರುವಾರ ರಚನೆಯಾದ 12 ತಾಲೂಕುಗಳ ಪೈಕಿ ಮೂಲ್ಕಿ ತಾಲೂಕು ರಚನೆಗೆ ಮಾತ್ರ ಸಮಿತಿಗಳ ಶಿಫಾರಸ್ಸು ಇತ್ತು ಎಂಬುದು ಉಲ್ಲೇಖನೀಯ ಅಂಶ.ಗದ್ದೀಗೌಡರ್,ಹುಂಡೇಕರ್ ಸಮಿತಿಗಳು ಬಹಳ ಹಿಂದೆಯೇ ಮೂಲ್ಕಿ ತಾಲೂಕು ರಚನೆಗೆ ಶಿಫಾರಸ್ಸು ಮಾಡಿತ್ತು.ಹಾಗಾಗಿ ಮೂಲ್ಕಿ ತಾಲೂಕು ರಚನೆ ಸುಲಲಿತವಾಗಿತ್ತು ಎಂದವರು ಅಭಿಪ್ರಾಯಿಸಿದರು.

ರಾಜಕೀಯ ರಹಿತ ಅಭಿವೃದ್ಧಿ: ಮೂಲ್ಕಿ ತಾಲೂಕಿನ ಬಡಿ ಗುರುತು ಒಂದೆರಡು ದಿನದಲ್ಲಿ ದೊರಕಲಿದೆ.ಆ ಬಳಿಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ರಾಜಕೀಯ ರಹಿತ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸೋಣ ಎಂದವರು ಹೇಳಿದರು.
ಮೂಲ್ಕಿಯಲ್ಲಿ ತಾಲೂಕು ಕಛೇರಿ ಸ್ಥಾಪನೆಗೆ ಈಗಾಗಲೇ ಒಂದೂವರೆ ಎಕ್ರೆ ಜಾಗ ಮೀಸಲಿರಿಸಿದ್ದು,ಅನುದಾನ ಕ್ರೋಢೀಕರಣದ ಬಳಿಕ ಮುಂದುವರಿಯಲಾಗುವುದು ಎಂದವರು ಹೇಳಿದರು.

2 ಪಟ್ಟಣ ಪಂಚಾಯಿತಿಗೆ ಶಿಫಾರಸ್ಸು: ಮೂಲ್ಕಿ ಮೂಡಬಿದಿರೆ ಕ್ಷೇತ್ರ ವ್ಯಾಪ್ತಿಯ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮಗಳನ್ನೊಳಗೊಂಡು ಹಾಗೂ ಬಜ್ಪೆ ಮತ್ತು ಮಳವೂರು ಗ್ರಾಮಗಳನ್ನೊಳಗೊಂಡು 2 ಪಟ್ಟಣ ಪಂಚಾಯಿತಿ ರಚನೆ ಮಾಡಲು ಶಿಫಾರಸ್ಸು ಮಾಡಲಾಗಿದೆ.ಇವೆರಡೂ ಯೋಜನೆಗಳು ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದವರು ಹೇಳಿದರು.

ಬಹುಗ್ರಾಮ ನೀರಿನ ಯೋಜನೆ: ಕೊಲ್ಲೂರಿನಲ್ಲಿ ಸ್ಥಾಪನೆಗೊಂಡಿರುವ ಬಹುಗ್ರಾಮ ನೀರಿನ ಯೋಜನೆ ತಾಂತ್ರಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ.11ಲಕ್ಷ ಲೀ. ನೀರು ವಿತರಣೆಗೆ ಕೇವಲ 3ಲಕ್ಷ ಲೀ. ವ್ಯವಸ್ಥೆ ಇದೆ.ಗ್ರಾಮಗಳ ನೀರಿನ ಟ್ಯಾಂಕ್‍ಗಳಿಗೆ ಸಂಪರ್ಕವಾಗಿಲ್ಲ. ಶುದ್ದೀಕರಣ ವ್ಯವಸ್ಥೆ ಬಗ್ಗೆ ಗೊಂದಲ, ಈಗಾಗಲೇ ಸಮಿತಿ ರಚಿಸಲಾಗಿದ್ದು ಪ್ರತೀ ತಿಂಗಳು ಸಭೆ ಕರೆದು ಚರ್ಚಿಸಲು ಸೂಚನೆ ನೀಡಲಾಗಿದೆ.ಎಲ್ಲಾ 10 ಗ್ರಾಮಗಳೂ ಸಮಾನ ಫಲಾನುಭವಿಗಳಾಗಿದ್ದು ಸೂಕ್ತ ರೀತಿಯಲ್ಲಿ ನೀರು ಹಂಚಿಕೆ ಮಾಡುವಂತೆ ಸೂಚಿಸಲಾಗಿದೆ. ಸಧ್ಯ ಫಲಿಮಾರು ಆಣೆಕಟ್ಟು ಸೋರಿಕೆ ತಡೆ, ಮೂಲ್ಕಿ ಮಟ್ಟುವಿನಲ್ಲಿ 28ಕೋಟಿ ವೆಚ್ಚದ ಪಶ್ಚಿಮ ವಾಹಿನಿ ಯೋಜನೆಯ ಕಿಂಡಿ ಆಣೆಕಟ್ಟು, ನೀರು ಶೇಖರಣೆಗಾಗಿ ನದಿ ಪಾತ್ರ ಡ್ರಜ್ಜಿಂಗ್ ಮುಂತಾದ ಯೋಜನೆಗಳು ನಡೆಯಬೇಕು ಇಲ್ಲವಾದರೆ ಈ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

ಮೂಲ್ಕಿಗೆ ಕುಡಿಯುವ ನೀರು: ಮೂಲ್ಕಿಗೆ ಮಹಾನಗರ ಪಾಲಿಕೆಯಿಂದ ಬರುವ ಬಹುಪಾಲು ನೀರು ಹಳೆಯಂಗಡಿ ಬಳಸುತ್ತಿದೆ.ಈ ಬಗ್ಗೆ ಕುಳಾಯಿ ಪಂಪ್ ಹೌಸ್ ಬಳಿ ಬಲ್ಕ್ ಮೀಟರ್ ಸ್ಥಾಪಿಸಲಾಗಿದೆ.ಮೂಲ್ಕಿ ಕಾರ್ನಾಡಿನಲ್ಲಿ ಬಲ್ಕ್ ಮೀಟರ್ ಸ್ಥಾಪಿಸಿ ಮೂಲ್ಕಿ ಪಡೆಯುವ ನೀರಿಗೆ ಮಾತ್ರ ಬಿಲ್ಲು ಪಾವತಿಸುವಂತೆ ಮಾಡಲಾಗಿದೆ.ಹಳೆಯಂಗಡಿ ಪಂಚಾಯಿತಿ ಬಲ್ಕ್ ಮೀಟರ್ ಸ್ಥಾಪಿಸಿ ಹಳೆ ಬಾಕಿ ತೀರಿಸುವಂತೆ ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ ನೀಡಿದ್ದಾರೆ ಎಂದರು.

ಸಸಿಹಿತ್ಲು ಬೀಚ್ ಅಭಿವೃದ್ಧಿಗೆ 7 ಕೋಟಿ ರೂ.: ಸಸಿಹಿತ್ಲು ಬೀಚ್ ಅಭಿವೃದ್ಧಿಗಾಗಿ 7ಕೋಟಿ ರೂ. ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾಗಿದ್ದು ಬೀಚ್ ಸಮಗ್ರವಾಗಿ ಅಭಿವೃದ್ಧಿಗೊಳ್ಳಲಿದೆ ಎಂದವರು ಹೇಳಿದರು.

ಹಳೆಯಂಗಡಿ ಗ್ರಾಪಂ ಕರ್ಮಕಾಂಡ: ಹಳೆಯಂಗಡಿ ಗ್ರಾಪಂ ಸರಕಾರಿ ಅನುದಾನಗಳ ಹೆಚ್ಚುವರಿಯಾಗಿ ಒಂದು ಕೋಟಿಗೂ ಅಧಿಕ ಆದಾಯ ಹೊಂದಿದೆ.ಆದರೆ ಇಲ್ಲಿನ ಭ್ರಷ್ಠಾಚಾರ ಸಮಸ್ಯೆಗಳಿಂದಾಗಿ ಹಣ ಯಾರದೋ ಕಿಸೆ ಸೇರುತ್ತಿದೆ.ಇಲ್ಲಿ ಡ್ರೈನೇಜ್ ಸಮಸ್ಯೆ ಉಲ್ಬಣಿಸಿದೆ.ಗ್ರಾಮೀಣ ಪ್ರದೇಶದಲ್ಲಿ ಕೇವಲ 3ಮಹಡಿಗೆ ಅವಕಾಶವಿದ್ದರೆ ಅದನ್ನು ಧಿಕ್ಕರಿಸಿ 6ಮಹಡಿಗೆ ಅವಕಾಶ ಕಲ್ಪಿಸಲಾಗಿದೆ.ಈ ವಸತಿ ಸಂಕೀರ್ಣಗಳ ಕೊಳಚೆ ನೀರು ನೇರವಾಗಿ ರಸ್ತೆ ಬದಿಯ ತೋಡಿಗೆ ಬಿಡುತ್ತಿದ್ದರೂ ಪಂಚಾಯಿತಿ ಶಾಮೀಲಾಗಿ ಜನ ಸಾಮಾನ್ಯರಿಗೆ ಸಮಸ್ಯೆ ಮಾಡುತ್ತಿದೆ.ಕಡತ ಪರೀಶೀಲನೆಗೆ ಅಧಿಕಾರಿಗಳು ಬಂದರೆ ಕಡತ ಅಧ್ಯಕ್ಷರ ಮನೆಯಲ್ಲಿದೆ ಎಂದು ಹೇಳುತ್ತಾರೆ. ಇಲ್ಲಿನ ಸಿಬ್ಬಂದಿಗಳಿಗೆ ತಿಂಗಳೋಂದಕ್ಕೆ 25 ಸಾವಿರ ಸಂಬಳ ನೀಡಲಾಗುತ್ತಿದೆ ಎನ್ನುವ ಸುದ್ದಿ ಬಂದಿದೆ ಎಂದು ಕೋಟ್ಯಾನ್ ಹೇಳಿದರು.

ಉಳ್ಳವರ ಮನೆಗೆ ನೀರಿನ ನೇರ ಸಂಪರ್ಕ: ಸಸಿಹಿತ್ಲು ಬೀಚ್ ಬಳಿ ಕೆಲವು ರಿಸೋರ್ಟುಗಳಿಗೆ ಕುಡಿಯುವ ನೀರಿನ ನೇರ ಸಂಪರ್ಕವಿದೆ.ಆದರೆ ಬಡವರ ಮನೆಗಳಿಗೆ ನೀರು ಬರುತ್ತಿಲ್ಲ.ಇಲ್ಲಿ ಯಾವುದೂ ಸರಿಯಿಲ್ಲ.ಇಲ್ಲಿಗೆ ಪಿಡಿಒಗಳೇ ಬರಲು ಒಪ್ಪುತ್ತಿಲ್ಲ ಎಂದು ಜಿಪಂ ಸದಸ್ಯ ವಿನೋದ್ ಬೊಳ್ಳೂರು ಆಪಾದಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ,ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ,ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್,ಸದಸ್ಯರಾದ ಮೀನಾಕ್ಷಿ ಬಂಗೇರ,ಉಮೇಶ್ ಮಾನಂಪಾಡಿ,ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ ಕಟೀಲು,ಮೂಲ್ಕಿ ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯೇಂದ್ರ ಶೆಣೈ,ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ,ರಂಗನಾಥ ಶೆಟ್ಟಿ,ದೇವಪ್ರಸಾದ್ ಪುನರೂರು,ಸತೀಶ್ ಅಂಚನ್ ಉಪಸ್ಥಿತರಿದ್ದರು.