ಮೂಲ್ಕಿ ಕೊಲ್ನಾಡು ಬಸ್ಸಿನೊಳಗೆ ನುಗ್ಗಿದ ನಾಗರ ಹಾವು

ಮೂಲ್ಕಿ: ಉಡುಪಿಯಿಂದ ಬೆಂಗಳೂರು ಮೂಲಕ ಹೈದರಾಬಾದ್‍ಗೆ ತೆರಳುತ್ತಿದ್ದ ಬಸ್ಸಿನಲ್ಲಿ ನಾಗರ ಹಾವು ಕಾಣಿಸಿಕೊಂಡು ಪ್ರಯಾಣಿಕರು ಗಾಬರಿಗೊಂಡ ಘಟನೆ ಶನಿವಾರ ಮೂಲ್ಕಿಯ ಕಾರ್ನಾಡು ಬಳಿ ನಡೆದಿದೆ.

ಇಲ್ಲಿಗೆ ಸಮೀಪದ ಕೊಲ್ನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟೂರಿಸ್ಟ್ ಬಸ್ಸಿನೊಳಗೆ ನಾಗರ ಹಾವು ನುಗ್ಗಿ ಬಸ್ಸಿನವರು ಗಾಬರಿಗೊಂಡಿದ್ದು ಕೆಲ ಕಾಲ ಹೆದ್ದಾರಿ ಸಂಚಾರ ವ್ಯತ್ಯಯವಾಯಿತು.

ಹೈದರಾಬಾದ್ ಕಡೆಗೆ ಹೋಗುತ್ತಿದ್ದ ಎಸ್‍ಆರ್‍ಎಸ್ ಟ್ರಾವೆಲ್ಸ್ ಎಂಬ ಟೂರಿಸ್ಟ್ ಬಸ್ಸು ರಾಷ್ಟ್ರೀಯ ಹೆದ್ದಾರಿ ಮೂಲ್ಕಿಯ ಕೊಲ್ನಾಡು ಸಮೀಪಿಸುತ್ತಿದ್ದಂತೆ ಹೆದ್ದಾರಿಗೆ ನಾಗರಹಾವು ಅಡ್ಡ ಬಂದಿತ್ತು. ಬಸ್ಸು ಚಾಲಕ ತಕ್ಷಣ ಬ್ರೇಕ್ ಹಾಕಿದ್ದು, ಹೆದರಿ ಕಂಗಾಲಾದ ನಾಗರಹಾವು ಬಸ್ಸಿನ ಮೇಲೇರಿತ್ತು. ಬಸ್ಸೊಳಗೆ ನಾಗರ ಹಾವು ಹತ್ತಿದ್ದನ್ನು ಕಂಡ ಪ್ರಯಾಣಿಕರು ಗಾಬರಿಯಿಂದ ಬಸ್ಸಿಂದ ಕೆಳಗಿಳಿದಿದ್ದರು.

ಬಳಿಕ ಪ್ರಯಾಣಿಕರು ಹಾಗೂ ಸ್ಥಳೀಯರು ಬಸ್ಸಿನಲ್ಲಿದ್ದ ಹಾವನ್ನು ತೆರವುಗೊಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿಲ್ಲ. ಈ ಸಂದರ್ಭ ಸುರತ್ಕಲ್ ಮೂಲದ ಎಂಆರ್‍ಪಿಲ್ ಬಳಿಯ ಹಾವು ಹಿಡಿಯುವ ತಜ್ಞ ಸುಕುಮಾರ್ ಎಂಬವರನ್ನು ಸ್ಥಳಕ್ಕೆ ಕರೆಯಿಸಲಾಯಿತು. ಸುಕುಮಾರ್‍ರವರು ಕಾರ್ಯಾಚಾರಣೆ ನಡೆಸುತ್ತಿರುವ ವೇಳೆ ಕೆಲ ಕುತೂಹಲಿಗರು ಮೊಬೈಲ್ ಮೂಲಕ ಫೊಟೋ ರೇಕಾರ್ಡಿಂಗ್ ಮಾಡಲು ಯತ್ನಿಸುತ್ತಿದ್ದು ಕಾರ್ಯಾಚರಣೆಗೆ ಅಡ್ಡಿಯಾಯಿತು.

ಸ್ವಲ್ಪ ಸಮಯದ ಬಳಿಕ ತ್ರಾಸಪಟ್ಟು ಸುಕುಮಾರ್ ಕಾರ್ಯಾಚರಣೆ ನಡೆಸಿ ಬಸ್ಸಿನೊಳಗಿಂದ ಹಾವನ್ನು ತೆಗೆದಾಗ ಬಸ್ಸಿನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದು, ಬಳಿಕ ಪ್ರಯಾಣ ಮುಂದುವರಿಸಲಾಯಿತು.