ಮೂಲ್ಕಿ ಅರಮನೆಗೆ ವಸತಿ ಸಚಿವ ಸೋಮಣ್ಣ ಭೇಟಿ

ಮೂಲ್ಕಿ : ಸನಾತನ ಭಾರತೀಯ ಕೃಷಿ ಪರಂಪರೆಯ ಜೊತೆಗೆ ಅರಸೊತ್ತಿಗೆಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಮೂಲ್ಕಿ ಅರಮನೆಯ ಕಾರ್ಯ ಅಭಿನಂದನೀಯ ಎಂದು ರಾಜ್ಯ ವಸತಿ ಸಚಿವ ಸೋಮಣ್ಣ ಹೇಳಿದರು.

ಮೂಲ್ಕಿ ಸೀಮೆಯ ಅರಸರ ಪಡುಪಣಂಬೂರಿನಲ್ಲಿರುವ ಅರಮನೆಗೆ ಬುಧವಾರ ಸೌಹಾರ್ದ ಭೇಟಿ ನೀಡಿದ ಸಂದರ್ಭ ಅವರು ಮಾತನಾಡಿದರು.

ನಮ್ಮ ಪರಂಪರಾಗತ ಮೌಲ್ಯಗಳಿಗೆ ವೈಜ್ಞಾನಿಕ ಬುನಾದಿ ಇದೆ. ಅವುಗಳು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಆದ್ಯ ಕರ್ತವ್ಯ. ಆಧುನೀಕತೆಯ ಈ ದಿನಗಳಲ್ಲಿ ಕೃಷಿ ಮತ್ತು ಧಾರ್ಮಿಕ ಪರಂಪರೆಯನ್ನು ಉಳಿಸುವ ಕಾರ್ಯ ಸ್ತುತ್ಯರ್ಹ ಎಂದವರು ಅಭಿಪ್ರಾಯಿಸಿದರು.

ಅರಮನೆಗೆ ಆಗಮಿಸಿದ ಸಚಿವರನ್ನು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಸ್ವಾಗತಿಸಿದರು. ಬಳಿಕ ಅರಮನೆಯ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿಗೆ ಕರೆದೊಯ್ದು ಶ್ರೀ ದೇವರುಗಳ ಭೇಟಿ ಮಾಡಿಸಿದರು. ಹಾಗೂ ಸಾಂಪ್ರದಾಯಿಕ ಅರಸು ಕಂಬಳ ಮತ್ತು ಕಂಬಳಗದ್ದೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ಮೂಲ್ಕಿ ಸೀಮೆಯ ಪರವಾಗಿ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರೊಂದಿಗೆ ಆಶಾಲತಾ ದುಗ್ಗಣ್ಣ ಸಾವಂತರು, ನ್ಯಾಯವಾದಿ ಚಂದ್ರಶೇಖರ ಜಿ., ದಿನೇಶ್ ಸುವರ್ಣ, ಗೌತಮ್ ಜೈನ್, ಎಂ.ಕೆ.ಹೆಬ್ಬಾರ್, ಪವಿತ್ರೇಶ್ ಉಪಸ್ಥಿತರಿದ್ದರು.

ಫೋಟೋ: ಮೂಲ್ಕಿ ಅರಮನೆಗೆ ಭೇಟಿ ನೀಡಿದ ರಾಜ್ಯ ವಸತಿ ಸಚಿವ ಸೋಮಣ್ಣರವರನ್ನು ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಗೌರವಿಸಿದರು.