ಮೂಲ್ಕಿಯಲ್ಲಿ ಪರಿಶಿಷ್ಟ ಜಾತಿ-ಉಪಯೋಜನೆಯ ಕಲ್ಲ ಕೃಷಿ ಆರಂಭ

ಮೂಲ್ಕಿ: ಭಾರತೀಯ ಕೃಷಿ ಅಭಿವೃದ್ಧಿ ಪರಿಷತ್‍ನ ಮಂಗಳೂರು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ವತಿಯಿಂದ ಪರಿಶಿಷ್ಟ ಜಾತಿ-ಉಪಯೋಜನೆಯ ಅಂಗವಾಗಿ ಮೂಲ್ಕಿ ಪರಿಸರದ ಪರಿಶಿಷ್ಟ ಜಾತಿಯ 14 ಫಲಾನುಭವಿಗಳಿಗೆ ಚಿಪ್ಪು ಕೃಷಿ ಯೋಜನೆಯಡಿ ಕಲ್ಲ ಕೃಷಿ ಮಾಡುವ ಕಾರ್ಯಕ್ರಮ ಗುರುವಾರ ಸಂಜೆ ಮೂಲ್ಕಿಯ ಕೊಳಚಿಕಂಬಳದ ಕಟ್ಟದಂಗಡಿ ಬಳಿಯ ಶಾಂಭವಿ ಹೊಳೆ ತೀರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಲ್ಕಿ ನಪಂ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಮಾತನಾಡಿ, ಮೂಲ್ಕಿ ನಾಗರಿಕರ ಪರವಾಗಿ ಸಂಸ್ಥೆಗೆ ಅಭಿನಂದನೆ. ಮೂಲ್ಕಿ ಭಾಗದ ಶಾಂಭವಿ ಮತ್ತು ನಂದಿನಿ ಹೊಳೆಯು ವಿಸ್ತಾರವಾಗಿದ್ದು, ಸಂಸ್ಥೆಯ ಇನ್ನಷ್ಟು ಯೋಜನೆಗಳನ್ನು ಜಾರಿಗೊಳಿಸುವಂತೆ ವಿನಂತಿಸಿದರು.

ನಪಂ ಸದಸ್ಯ ಸತೀಶ್ ಅಂಚನ್ ಮಾತನಾಡಿ, ಬಡ ಮೀನುಗಾರಿಕಾ ಕೃಷಿಕರಿಗೆ ಯೋಜನೆ ಉಪಯುಕ್ತವಾಗಲಿದೆ ಎಂದರು.
ಮೂಲ್ಕಿ ಕೊಳಚಿಕಂಬಳ ಮಹಿಳಾ ಸಹಕಾರಿ ಮೀನುಗಾರಿಕಾ ಸೊಸೈಟಿಯ ಅಧ್ಯಕ್ಷೆ ನೀರಜಾಕ್ಷಿ ಅಗರ್‍ವಾಲ್ ಮಾತನಾಡಿ, ನೂತನ ಟೆಕ್ನಾಲಜಿ ಬಳಸಿ ಕಲ್ಲ ಕೃಷಿಯ ಯೋಜನೆ ಅತ್ಯಂತ ಉಪಯುಕ್ತವಾದುದು ಎಂದರು.
ಒಂದು ಬಾರಿ ನೀರಿನಲ್ಲಿ ಅಳವಡಿಸಿದ ಬ್ಯಾಂಬೂ ರ್ಯಾಕ್‍ಗಳು ಕನಿಷ್ಟ 5 ವರ್ಷ ಬಾಳಿಕೆ ಬರುತ್ತದೆ. ಈ 5 ವರ್ಷಗಳಲ್ಲಿ ಅವರು ನಿರಂತರ ಕಲ್ಲ ತೆಗೆಯಲು ಸಾಧ್ಯವಿದೆ. ಕಲ್ಲ ಕೃಷಿಗೆ ಒಂದು ಬಾರಿ ನೀರಿನಲ್ಲಿ ಅಳವಡಿಸಿದ ಬಳಿಕ ಯಾವುದೇ ಆಹಾರ ನೀಡುವ ಅಗತ್ಯವಿಲ್ಲ. ಸೂಕ್ಷ್ಮಾಣು ಜೀವಿಗಳನ್ನೆ ಕಲ್ಲಗಳು ಭಕ್ಷಿಸುತ್ತದೆ. ಅತೀ ಸರಳ ವಿಧಾನದ ಕಲ್ಲ ಕೃಷಿ ಇದಾಗಿದೆ ಎಂದು ಸಿಎಮ್‍ಎಫ್‍ಆರ್‍ಐ ಮುಖ್ಯ ವಿಜ್ಞಾನಿ ಹಾಗೂ ಕೇಂದ್ರದ ಮುಖ್ಯಸ್ಥೆ ಡಾ.ಪ್ರತಿಭಾ ರೋಹಿತ್ ತಿಳಿಸಿದ್ದಾರೆ.

1980ರಿಂದ ಕರಾವಳಿ ತೀರದ ನದಿಗಳಲ್ಲಿ ಈ ಕೃಷಿ ನಡೆಸುತ್ತಾ ಬಂದಿದ್ದು, ಯೋಜನೆ ಯಶಸ್ವಿಯಾಗಿದೆ. ಮೂಲ್ಕಿ ಶಾಂಭವಿ ಹೊಳೆಯಲ್ಲಿ 1992ರಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕಲ್ಲದೊಂದಿಗೆ ಇತರ ಮೀನು ಕೃಷಿಗೂ ಸಂಸ್ಥೆ ಸಹಕಾರ ನೀಡುತ್ತಿದೆ ಎಂದವರು ತಿಳಿಸಿದ್ದಾರೆ.

ಸಮಾರಂಭದಲ್ಲಿ 14 ಫಲಾನುಭವಿಗಳಿಗೆ ಕ್ರೇಟ್,ರೆನ್ ಸಹಿತ ವಿವಿಧ ಕೃಷಿ ಸಂಬಂದಿ ಸಲಕರಣೆಗಳನ್ನು ವಿತರಿಸಲಾಯಿತು.

ಮೂಲ್ಕಿ ನಪಂ ಸದಸ್ಯೆಯರಾದ ರಾಧಿಕಾ ಯಾದವ ಕೋಟ್ಯಾನ್ ಮತ್ತು ದಯಾವತಿ ಅಂಚನ್, ಸಿಎಮ್‍ಎಫ್‍ಆರ್‍ಐನ ಮುಖ್ಯ ವಿಜ್ಞಾನಿ ಹಾಗೂ ಯೋಜನಾ ಮುಖ್ಯಸ್ಥೆ ಡಾ. ಗೀತಾ ಶಶಿಕುಮಾರ್, ಹಿರಿಯ ವಿಜ್ಞಾನಿ ಡಾ.ಬಿಂದು ಸುಲೋಚನಾ, ವಿಜ್ಞಾನಿಗಳಾದ ಡಾ.ಪುರುಷೋತ್ತಮ ಮತ್ತು ಡಾ.ದಿವ್ಯಾ ವಿಶ್ವಂಭರನ್, ನಟರಾಜ್, ಡಾ.ವೀಣಾ, ಧರ್ಮರಾಜ್, ಶ್ರೀನಾಥ್, ಸತ್ಯವತಿ ಉಪಸ್ಥಿತರಿದ್ದರು.

ಡಾ.ಪ್ರತಿಭಾ ರೋಹಿತ್ ಪ್ರಸ್ತಾವಿಸಿ ಸ್ವಾಗತಿಸಿದರು. ಡಾ. ಪುರುಷೋತ್ತಮ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.