ಮೂಲ್ಕಿಗೆ ಶೀಘ್ರ ಎಟಿಪಿ ಯಂತ್ರ ಅಳವಡಿಕೆ-ಮೆಸ್ಕಾಂ ವೃತ್ತ ಅಧೀಕ್ಷಕ ಮಂಜಪ್ಪ

ಮೂಲ್ಕಿ: ಮೆಸ್ಕಾಂ ಬಿಲ್ಲು ಪಾವತಿ ಬಗ್ಗೆ ಮೂಲ್ಕಿ ಮೆಸ್ಕಾಂ ಕೇಂದ್ರದಲ್ಲಿ ನಿತ್ಯ ಸರತಿ ಸಾಲಿನಲ್ಲಿ ನಿಂತು ಬಿಲ್ಲು ಪಾವತಿಗೆ ಗ್ರಾಹಕರು ಪರದಾಡುತ್ತಿದ್ದು,ಶೀಘ್ರ ಎಟಿಪಿ ಯಂತ್ರ ಅಳವಡಿಸುವಂತೆ ಗ್ರಾಹಕರೊಬ್ಬರು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಮೆಸ್ಕಾಂ ಮಂಗಳೂರು ವೃತ್ತ ಅಧೀಕ್ಷಕ ಮಂಜಪ್ಪ, ಅತೀ ಶೀಘ್ರದಲ್ಲೇ ಮೂಲ್ಕಿ ವಿದ್ಯುತ್ ಬಿಲ್ಲು ಪಾವತಿ ಕೇಂದ್ರದಲ್ಲಿ ಎಟಿಪಿ ಯಂತ್ರ ಅಳವಡಿಸುವುದಾಗಿ ಭರವಸೆ ನೀಡಿದರು.

ಮೂಲ್ಕಿ ನಪಂ ಸಮೀಪದ ಸಮದಾಯ ಭವನದಲ್ಲಿ ಮಂಗಳವಾರ ನಡೆದ ಮೂಲ್ಕಿ ಹಾಗೂ ಸುರತ್ಕಲ್ ಉಪ ವಿಭಾಗದ ವಿದ್ಯುತ್ ಗ್ರಾಹಕರ ಕುಂದುಕೊರತೆಗಳ ಬಗ್ಗೆ ಜನ ಸಂಪರ್ಕ ಸಭೆಯಲ್ಲಿ ಅವರು ಭರವಸೆ ನೀಡಿದರು.

ಅತೀ ಹೆಚ್ಚು ವಿದ್ಯುತ್ ಗ್ರಾಹಕರಿರುವ ಕಿನ್ನಿಗೋಳಿಗೆ ಶೀಘ್ರದಲ್ಲೇ 110 ಕೆವಿ ಸಬ್‍ಸ್ಟೇಶನ್ ಮಂಜೂರುಗೊಳಿಸಲಾಗುವುದು ಎಂದು ವೃತ್ತ ಅಧೀಕ್ಷಕ ಮಂಜಪ್ಪ ಭರವಸೆ ನೀಡಿದ್ದಾರೆ.
ರೈತ ಮುಖಂಡ ಶ್ರೀಧರ ಶೆಟ್ಟಿಯವರು ಈ ಬಗ್ಗೆ ಪ್ರಸ್ತಾವಿಸಿ,ಈ ಹಿಂದೆ ಹಲವು ಬಾರಿ ಕಿನ್ನಿಗೋಳಿ ಸಬ್‍ಸ್ಟೇಶನ್‍ಗೆ ಮನವಿ ಮಾಡಲಾಗಿದೆ.ಕಂದಾಯ ಇಲಾಖೆ ಮೂಲಕ 4 ಎಕ್ರೆ ಜಮೀನನ್ನೂ ಗುರುತಿಸಲಾಗಿದೆ.ಹಾಗಾಗಿ ಮೆಸ್ಕಾಂ ಇಲಾಖೆ ಶೀಘ್ರ ಮಂಜೂರಾತಿ ಮಾಡುವಂತೆ ವಿನಂತಿಸಿದ್ದರು.ಅಲ್ಲಿನ ಸಹಾಯಕ ಇಂಜಿನಿಯರ್ ಜತೆ ಸಮಾಲೋಚಿಸಿದ ಬಳಿಕ ಮಂಜಪ್ಪನವರು ಈ ಬಗ್ಗೆ ಶೀಘ್ರ ಮಂಜೂರಾತಿ ಬಗ್ಗೆ ತಿಳಿಸಿದರು.

ಕೊಲ್ನಾಡು ಕೈಗಾರಿಕಾ ಪ್ರದೇಶದ ಉದ್ಯಮಿಗಳು ಸುಮಾರು ಒಂದು ಕೋಟಿ ರೂ.ಗೂ ಅಧಿಕ ವ್ಯಯಿಸಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದು,ಇದೀಗ ಸರಕಾರ ಅದಕ್ಕೆ ಪ್ರತ್ಯೇಕ ತೆರಿಗೆ ವಿಧಿಸುತ್ತಿದೆ.ನಮ್ಮ ವಿದ್ಯುತ್‍ಗೆ ತೆರಿಗೆ ಯಾಕೆ ಕಟ್ಟಬೇಕು ಎಂದು ಅಲ್ಲಿನ ಯೂನಿಯನ್ ಅಧ್ಯಕ್ಷ ಜಯ ಶೆಟ್ಟಿ ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧೀಕ್ಷಕ ಮಂಜಪ್ಪನವರು,ಇದು ಸರಕಾರಕ್ಕೆ ಸಂಬಂಧಿಸಿದ ವಿಚಾರ.ಈ ತೆರಿಗೆಗೂ ಮೆಸ್ಕಾಂ ಇಲಾಖೆಗೂ ಯಾವುದೇ ಸಂಬಂಧವಿಲ್ಲ.ಸರಕಾರದ ಮಟ್ಟದಲ್ಲೇ ಇದಕ್ಕೆ ಪರಿಹಾರ ಸಿಗಬೇಕೆಂದರು.
ಮೂಲ್ಕಿ-ಕಿನ್ನಿಗೋಳಿ ಹೆದ್ದಾರಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ ಎಂದು ಪುನೀತ್‍ಕೃಷ್ಣ ಪ್ರಶ್ನಿಸಿದರು.ಕೆಲಸ ಪ್ರಗತಿಯಲ್ಲಿದ್ದು ಅತೀ ಬೇಗ ಕಂಬಗಳನ್ನು ತೆರವುಗೊಳಿಸಲಾಗುವುದು ಎಂದು ಅಧೀಕ್ಷಕರು ಉತ್ತರಿಸಿದರು.
ಸುರತ್ಕಲ್ ಮತ್ತು ಮೂಲ್ಕಿ ವಿಭಾಗದ ಎಲ್ಲಾ ಹಳೆ ತಂತಿಗಳನ್ನು ಶೀಘ್ರದಲ್ಲಿ ಬದಲಾವಣೆಗೊಳಿಸಲಾಗುವುದು ಎಂದು ಗ್ರಾಹಕರೊಬ್ಬರ ಪ್ರಶ್ನೆಗೆ ಉತ್ತರಿಸಲಾಯಿತು.ಎಲ್ಲಾ ಜ್ಯೂನಿಯರ್ ಇಂಜಿನಿಯರ್‍ಗಳಿಗೆ ಆದೇಶ ನೀಡಿದ ಅಧೀಕ್ಷಕರು ಈ ಬಗ್ಗೆ ತಕ್ಷಣ ಕ್ರಿಯಾಯೋಜನೆ ರೂಪಿಸಿ ಅನುಮತಿ ಪಡೆದುಕೊಂಡು ಎಲ್ಲಾ ಹಳೆಯ ತಂತಿ ಹಾಗೂ ಕಂಬಗಳನ್ನು ಬದಲಿಸುವಂತೆ ತಿಳಿಸಲಾಯಿತು.

ರೈತ ಮುಖಂಡ ಶ್ರೀಧರ ಶೆಟ್ಟಿಯವರು ರೈತರೋರ್ವರ ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕ ನೀಡಲು ಸತಾಯಿಸುತ್ತಿರುವ ಬಗ್ಗೆ ಗಮನ ಸೆಳೆದರು.ಅನುಮತಿ ಸಿಕ್ಕಿದ ಬಳಿಕವೂ ಗುತ್ತಿಗೆದಾರರು ನಿಧಾನಗತಿ ಅನುಸರಿಸುತ್ತಿರುವುದರಿಂದ ತೀವ್ರ ಸಮಸ್ಯೆಯಾಗಿದ್ದು,ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.
2012ರ ಬಳಿಕ ಕೃಷಿಕರ ಪಂಪ್‍ಸೆಟ್‍ಗಳಿಗೆ ರೂ.10 ಸಾವರಿ ಕಟ್ಟಲು ಸರಕಾರ ಆದೇಶ ನೀಡಿದ್ದರಿಂದ ಕೃಷಿಕರಿಗೆ ತೀರಾ ಅನ್ಯಾಯವಾಗಿದೆ.ಈ ಬಗ್ಗೆ ಪುನರ್‍ಪರಿಶೀಲನೆ ಅಗತ್ಯವಿದೆ ಎಂದು ಶ್ರೀಧರ ಶೆಟ್ಟಿ ಆಗ್ರಹಿಸಿ,ಸರಕಾರ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ನ್ಯಾಯಾಲಯದ ಮೊರೆಹೋಗುವುದಾಗಿ ಎಚ್ಚರಿಸಿದರು.

ಕೃಷಿಕ ಬಾಲಚಂದ್ರ ಸನಿಲ್ ಮಾತನಾಡಿ,ತನಗೆ ಪ್ರತ್ಯೇಕ 3 ಕಡೆ ಕೃಷಿ ಜಮೀನಿದ್ದು,3 ಪ್ರತ್ಯೇಕ ಪಂಪ್‍ಗಳನ್ನು ಅಳವಡಿಸಲು ಸರಕಾರದ ಕಾನೂನಿನಿಂದ ತೊಡಕಾಗಿದೆ.ಈ ಬಗ್ಗೆ ಅಧಿಕಾರಿಗಳು ಸರಕಾರದ ಗಮನ ಸೆಳೆಯಬೇಕೆಂದರು.

ಮೂಲ್ಕಿಯಿಂದ ನಡಿಕುದ್ರುವಿಗೆ ಶಾಂಭವಿ ಹೊಳೆಯ ಮಧ್ಯೆ ಕಂಬ ಹಾಕಿ ವಿದ್ಯುತ್ ಸಂಪರ್ಕ ನೀಡಲಾಗಿದ್ದು,ಮಧ್ಯಭಾಗದ ಕಂಬವೊಂದು ಬೀಳುವ ಸ್ಥಿತಿಯಲ್ಲಿದೆ.ಅದನ್ನು ತಕ್ಷಣ ಸರಿಪಡಿಸಿ ಎಂದು ಗ್ರಾಹಕರೊಬ್ಬರು ಆಗ್ರಹಿಸಿದರು.ಇದಕ್ಕೆ ಸೂಕ್ತ ಸ್ಪಂದನೆ ದೊರೆಯಿತು.
ಸ್ಥಳಿಯಾಡಳಿತ ಪರವಾನಗಿಯಿಲ್ಲದೆ ಯಾವುದೇ ಮನೆಗಳಿಗೆ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡಬಾರದು.ಮೆನ್ನಬೆಟ್ಟು ಗ್ರಾಮದಲ್ಲಿ ಇದೇ ರೀತಿ 11 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದು ಸಮಸ್ಯೆಯಾಗಿದೆ ಎಂದು ಶ್ರೀಧರ ಶೆಟ್ಟಿ ಇಲಾಖಾಧಿಕಾರಿಗಳಲ್ಲಿ ಮನವಿ ಮಾಡಿದರು.
ಮೆಸ್ಕಾಂ ಮಂಗಳೂರು ವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಸ್.ಸತೀಶ್ಚಂದ್ರ,ಸುರತ್ಕಲ್ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಭಿಷೇಕ್,ಮೂಲ್ಕಿ ಶಾಖಾ ಸಹಾಯಕ ಇಂಜಿನಿಯರ್ ವಿವೇಕಾನಂದ ಶೆಣೈ,ಕಿನ್ನಿಗೋಳಿ ಶಾಖಾ ಸಹಾಯಕ ಇಂಜಿನಿಯರ್ ಚಂದ್ರಹಾಸ್,ಕಾಟಿಪಳ್ಳ ಶಾಖಾ ಸಹಾಯಕ ಇಂಜಿನಿಯರ್ ಜಯ ಶೆಟ್ಟಿ,ಮೂಲ್ಕಿ ನಪಂ ಸದಸ್ಯರಾದ ಪುತ್ತುಬಾವ ಮತ್ತು ಉಮೇಶ್ ಮಾನಂಪಾಡಿ ಉಪಸ್ಥಿತರಿದ್ದರು.

ಮೂಲ್ಕಿ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಕೃಷ್ಣ ಐತಾಳ್ ಸ್ವಾಗತಿಸಿ ವಂದಿಸಿದರು.