ಮೂಢನಂಬಿಕೆಗಿಂತ ಮೂಲನಂಬಿಕೆಯೇ ಪ್ರಧಾನ- ಡಾ.ವೈ.ಎನ್.ಶೆಟ್ಟಿ

ಯುವಜನರ ಸಂಶಯ ನಿವಾರಿಸಲು ಮೂಢನಂಬಿಕೆಗಳನ್ನು ಕಳೆದು ಮೂಲನಂಬಿಕೆಗಳೇ ಪ್ರಧಾನವೆಂಬುದನ್ನು ತಿಳಿಯಪಡಿಸಬೇಕೆಂದು ರಾಜ್ಯ ತುಳು ಸಾಹಿತ್ಯ ಅಕಾಡಮಿ ಸದಸ್ಯ ಡಾ.ವೈ.ಎನ್.ಶೆಟ್ಟಿ ಹೇಳಿದರು.
ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ,ಪಡುಬಿದ್ರಿ ಯುವವಾಹಿನಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 90ನೇ ಪುಣ್ಯ ತಿಥಿಯ ಅಂಗವಾಗಿ ಶನಿವಾರ ಸಂಜೆ ನಡೆದ “ತುಳುನಾಡ ಆಚರಣೆಯಲ್ಲಿ ನಂಬಿಕೆ- ಮೂಢನಂಬಿಕೆಗಳು” ವಿಷಯದ ವಿಚಾರಗೋಷ್ಠಿಯ ಸಮನ್ವಯಕಾರರಾಗಿ ಅವರು ಮಾತನಾಡಿದರು.
ದೈವ ದೇವರುಗಳ ಮೇಲಿನ ನಂಬಿಕೆ ನಮ್ಮ ಜೀವನಕ್ಕೆ ಅರ್ಥವನ್ನೂ ಉದ್ದೇಶವನ್ನೂ ನೀಡುತ್ತದೆ ಎಂದವರು ಅಭಿಪ್ರಾಯಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ,ಕೌಟಂಬಿಕ ಆಚರಣೆಗಳು ವಿಷಯದ ಬಗ್ಗೆ ಮಾತನಾಡಿದ ಉಡುಪಿ ಸಿರಿ ತುಳು ಚಾವಡಿಯ ಅಧ್ಯಕ್ಷ ಕುದಿ ವಸಂತ ಶೆಟ್ಟಿ,ಶಿಸ್ತುಬದ್ಧ ಬದುಕಿಗೆ ಹಾಕಿಕೊಂಡ ಕಟ್ಟುಪಾಡುಗಳೇ ನಮ್ಮ ಆಚರಣೆಗಳು.ಆಚರಣೆ ಮಾಡಬಾರದ್ದನ್ನೂ ಆಚರಣೆಯನ್ನಾಗಿಸಿದ್ದು ಇಂದಿನ ದುರಂತ.ಇದಕ್ಕೆ ಉದಾಹರಣೆ ಮದರಂಗಿ ಕಾರ್ಯಕ್ರಮ.ಹಾಗಾಗಿ ನಂಬಿಕೆಯೇ ಪರಿವರ್ತನೆಯಾಗಿ ಮೂಢನಂಬಿಕೆಯಾಗಿದೆ ಎಂದರು.
ವಾರ್ಷಿಕ ಆವರ್ತನ ಬಗ್ಗೆ ವಿಷಯ ಪ್ರಸ್ತಾವಿಸಿದ ರಾಜ್ಯ ತುಳು ಸಾಹಿತ್ಯ ಅಕಾಡಮಿ ಸದಸ್ಯ ಎ.ಗೋಪಾಲ ಅಂಚನ್ ಮಾನನಾಡಿ,ಆಚರಣೆಗಳು ಮೂಢನಂಬಿಕೆಗಳಲ್ಲ.ಅದರ ಹಿನ್ನೆಲೆಯಲ್ಲಿ ನಂಬಿಕೊಂಡ ಕಟ್ಟುಪಾಡುಗಳು ಮೂಢನಂಬಿಕೆಗಳು.ತನಗೆ ಸಂತೋಷವುಂಟುಮಾಡಿ ಇತರರಿಗೆ ತೊಂದರೆಯುಂಟು ಮಾಡಿದರೆ ಅದು ಆಚರಣೆ ಎನಿಸದು ಎಂದರು.

ಯುವವಾಹಿನಿ ಕೇಂದ್ರ ಸಮಿತಿಯ ನಿಕಟ ಪೂರ್ವಾಧ್ಯಕ್ಷ ಯಶವಂತ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ.ಸುಧೀರ್‍ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ,ಯುವ ಜನತೆಗೆ ಹಿರಿಯರ ಆಚರಣೆಗಳ ಬಗ್ಗೆ ತಿಳಿಹೇಳುವ ಕಾರ್ಯಕ್ರಮ ಸಕಾಲಿಕ ಎಂದರು.
ಬಂಟ್ವಾಳ ಎಸ್‍ವಿಎಸ್ ಪದವಿ ಕಾಲೇಜಿನ ಉಪನ್ಯಾಸಕ ಚೇತನ್ ಮುಂಡಾಜೆಯವರು ದೈವಾರಾಧನೆ ಕುರಿತು,ಯುವ ಚಿಂತಕ ಸಂಜಯ್ ಪೂಜಾರಿ ಸಾಂತೂರುರವರು ಯುವಜನರ ಸಂಶಯ ನಿವಾರಣೆ ಕುರಿತು ವಿಷಯ ಮಂಡಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅರ್ಚಕ ಚಂದ್ರಶೇಖರ ಶಾಂತಿ ಪ್ರಸ್ತಾವಿಸಿದರು.ಸಂದೀಪ್ ಪೂಜಾರಿ ನಾರಾಯಣ ಗುರುಗಳ ಬಗ್ಗೆ ಮಾತನಾಡಿದರು.ಯುವವಾಹಿನ ಅಧ್ಯಕ್ಷ ದೀಪಕ್ ಕೆ.ಬೀರ,ಸಂಘದ ಕಾರ್ಯದರ್ಶಿ ಲಕ್ಷ್ಮಣ ಬಿ.ಅಮೀನ್ ವೇದಿಕೆಯಲ್ಲಿದ್ದರು.

ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕಿ ನಿಶ್ಮಿತಾ ಪಿ.ಎಚ್.ಸ್ವಾಗತಿಸಿದರು.ರವಿರಾಜ್ ಕೋಟ್ಯಾನ್ ಮತ್ತು ಶಾಶ್ವತ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.ಯುವವಾಹಿನಿ ಕಾರ್ಯದರ್ಶಿ ಶೈಲಜಾ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಭಜನೆ,ತುಳಸೀ ಅರ್ಚನೆ ಹಾಗೂ ಮಹಾಪೂಜೆ ನಡೆಯಿತು.