ಮುಸ್ಲಿಮರ ಸ್ಥಿತಿಗತಿ ಸುಧಾರಿಸಲು ಮಸ್ಜಿದ್ ಒನ್ ಮೂವ್‍ಮೆಂಟ್ ಯೋಜನೆ

ಪಡುಬಿದ್ರಿ: ದೇಶದಾದ್ಯಂತ ಮುಸ್ಲಿಮರ ಸ್ಥಿತಿಗತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮಸ್ಜಿದ್ ಒನ್ ಮೂವ್‍ಮೆಂಟ್ ಯೋಜನೆ ರೂಪಿಸಲಾಗಿದೆ ಎಂದು ಮಂಗಳೂರಿನ ಎಐಎಂಡಿಸಿ ಕಾರ್ಯದರ್ಶಿ ರಫೀಕ್ ಮಾಸ್ಟರ್ ಹೇಳಿದರು.

ಅವರು ಪಡುಬಿದ್ರಿಯ ಸಾಯಿ ಆರ್ಕೆಡ್‍ನಲ್ಲಿ ಪಡುಬಿದ್ರಿಯ ಯೂತ್ ಫೌಂಡೇಶನ್, ಆಲ್ ಇಂಡಿಯಾ ಮುಸ್ಲಿಮ್ ಡೆವಲೆಪ್‍ಮೆಂಟ್ ಕೌನ್ಸಿಲ್ ಹಾಗೂ ಮಸ್ಜಿದ್ ಒನ್ ಮೂವ್‍ಮಂಟ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಪು ತಾಲೂಕು ಮಸೀದಿ ಸಮಿತಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಲ್ಲಾಹನ ಆರಾಧನೆಯೊಂದಿಗೆ ಮುಸ್ಲಿಮ್ ಮೊಹಲ್ಲಾಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಳಿಗೆ ಮಸ್ಜಿದ್ ಕೇಂದ್ರವಾಗಬೇಕು. ಈ ಪರಿಕಲ್ಪನೆಯನ್ನು ಪ್ರವಾದಿವರ್ಯರ ಪರಿಕಲ್ಪನೆಯಾಗಿತ್ತು. ಅದಕ್ಕೆ ಹೊಸ ಸ್ವರೂಪವನ್ನು ನೀಡಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶಾದ್ಯಂತ ಮಸೀದಿಗಳನ್ನು ಒಂದೇ ವೇದಿಕೆಯಡಿಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.

ಯೂತ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕರ್ನಾಟಕ ಮುಸ್ಲಿಮ್ ಜಮಾಅತ್ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ, ಕಾಪು ತಾಲ್ಲೂಕು ಅಧ್ಯಕ್ಷ ಶಭಿ ಅಹಮದ್ ಕಾಜಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯರಾದ ಹಸನ್ ಬಾವ, ಬುಡಾನ್ ಬಾಷಾ, ಪಿಎಫ್‍ಐ ಉಡುಪಿ ಜಿಲಾ ಸಮಿತಿ ಸದಸ್ಯ ಹನೀಫ್ ಮೂಳೂರು ಉಪಸ್ಥಿತರಿದ್ದರು.

ಎಐಎಂಡಿಸಿ ಯೋಜನಾ ಪ್ರಬಂಧಕ ಮುಹಮ್ಮದ್ ತುಫೈಲ್ ಮಸ್ಜಿದ್ ಒನ್ ಮೂವ್‍ಮೆಂಟ್ ಬಗ್ಗೆ ಹಾಗೂ ಎಐಎಂಡಿಸಿ ಯೋಜನಾ ಸಂಯೋಜಕ ಅಬ್ದುಲ್ ಖಾದರ್ ಸರ್ಕಾರದಿಂದ ಸಿಗುವ ಸವಲತ್ತು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ನೀಡಿದರು.
ಯೂತ್ ಫೌಂಡೇಶನ್ ಕಾರ್ಯದರ್ಶಿ ರಝಾಕ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು. ಜತೆಕಾರ್ಯದರ್ಶಿ ನಿಯಾಝ್ ವಂದಿಸಿದರು. ಕೋಶಾಧಿಕಾರಿ ರಮೀಝ್ ಹುಸೈನ್ ಸ್ವಾಗತಿಸಿದರು.