ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಹೆಜಮಾಡಿ ಬಂದರಿಗೆ ಶಿಲಾನ್ಯಾಸ-ಕೋಟ ಶ್ರೀನಿವಾಸ ಪೂಜಾರಿ

ಪಡುಬಿದ್ರಿ: ಬಹು ನಿರೀಕ್ಷಿತ ಹೆಜಮಾಡಿ ಬಂದರು ಯೋಜನೆಯ ಶಿಲಾನ್ಯಾಸ ದಿನ ನಿಗದಿ ಪಡಿಸುವ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಸಮಾಲೋಚಿಸಲಾಗುವುದು. ಡಿ.25ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಶೀಘ್ರ ಶಿಲಾನ್ಯಾಸಕ್ಕೆ ದಿನ ನಿಗದಿಪಡಿಸಲಾಗುವುದು ಎಂದು ಮುಜರಾಯಿ, ಬಂದರು, ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ಹೆಜಮಾಡಿ ಗ್ರಾಪಂಗೆ ಭೇಟಿ ನೀಡಿದ ಸಂದರ್ಭ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಜಮಾಡಿ ಬಂದರು ಯೋಜನೆ ತನ್ನ ಮೊದಲ ಆದ್ಯತೆಯಾಗಿದೆ ಎಂದ ಅವರು ಯೋಜನೆ ಜಾರಿಗೆ ಬೇಕಾದ ಅನುದಾನವನ್ನು ಸಚಿವ ಸಂಪುಟದ ಮೂಲಕ ಖಚಿತವಾಗಿ ದೊರಕಿಸಿಕೊಡುತ್ತೇನೆ ಎಂದವರು ಹೇಳಿ, ಜನವರಿ ಎರಡನೇ ವಾರದಲ್ಲಿ ಹೆಜಮಾಡಿ ಬಂದರು ಯೋಜನೆಗೆ ಶಿಲಾನ್ಯಾಸಗೊಳಿಸಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದರು.

ಗ್ರಾಪಂ ನೂತನ ಕಟ್ಟಡ ಕಾಮಗಾರಿ ಚಾಲ್ತಿಯಲ್ಲಿದ್ದು, ಸರಕಾರದ ವತಿಯಿಂದ ರೂ.10 ಲಕ್ಷ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಹೆಜಮಾಡಿ ಗ್ರಾಪಂ ಸಾರ್ವಜನಿಕ ಸ್ಮಶಾನ ಅಭಿವೃದ್ಧಿಗೆ ಧಾರ್ಮಿಕ ದತ್ತಿ ಇಲಾಖೆ ಮೂಲಕ ರೂ.5 ಲಕ್ಷ ನೀಡಲಾಗುವುದು ಎಂದರು.

ಉದ್ಯೋಗ ಖಾತರಿ ಯೋಜನೆಯನ್ನು ಕರಾವಳಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಕಷ್ಟವಿದೆ. ಆದಾಗ್ಯೂ ಇಲಾಖಾ ಇಂಜಿನಿಯರ್‍ಗಳ ಮೂಲಕ ಪ್ರತಿಯೊಂದು ಗ್ರಾಪಂಗಳು ತಲಾ ರೂ.15 ಲಕ್ಷ ತರಲು ಸಾಧ್ಯವಿದೆ ಎಂದವರು ಹೇಳಿದರು. ಗ್ರಾಪಂ ಕಟ್ಟಡ ಕಾಮಗಾರಿಯಲ್ಲೂ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಅವರು ಮನವಿ ಮಾಡಿದರು.
ಇದೇ ಸಂದರ್ಭ ಅವರು ಹೆಜಮಾಡಿ ಗ್ರಾಪಂ ಕಟ್ಟಡ ಕಾಮಗಾರಿ, ಗ್ರಾಪಂ ಎಸ್‍ಎಲ್‍ಆರ್‍ಎಮ್ ಘಟಕಗಳನ್ನು ವೀಕ್ಷಿಸಿದರು.

ಸನ್ಮಾನ: ಇದೇ ಮೊದಲ ಬಾರಿಗೆ ಹೆಜಮಾಡಿ ಗ್ರಾಪಂಗೆ ಆಗಮಿಸಿದ ಸಚಿವರನ್ನು ಗ್ರಾಪಂ ವತಿಯಿಂದ ಸನ್ಮಾನಿಸಾಯಿತು.

ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ತಾಪಂ ಸದಸ್ಯೆ ರೇಣುಕಾ ಪುತ್ರನ್, ಹಿರಿಯ ಮೀನುಗಾರ ಮುಖಂಡ ನಾರಾಯಣ ಕೆ.ಮೆಂಡನ್, ಹೆಜಮಾಡಿ ಬಂದರು ಸಮಿತಿಯ ಅಧ್ಯಕ್ಷ ಸದಾಶಿವ ಕೋಟ್ಯಾನ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಡಿ.28ರಂದು ನಡೆಯಲಿರುವ ಉಡುಪಿ-ದಕ ಜಿಲ್ಲೆಗಳ ಪಂಚಾಯತ್‍ರಾಜ್, ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನೆನಪುಗಳ ದಿಕ್ಸೂಚಿ ಕಾರ್ಯಕ್ರಮವು ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಸಹಯೋಗದೊಂದಿಗೆ ಕೋಟತಟ್ಟು ಗ್ರಾಪಂ ಆಶ್ರಯದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಸಚಿವರ ಸಮ್ಮುಖ ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ ಉಪಾಧ್ಯಕ್ಷ ಲೋಕೇಶ್ ಶೆಟ್ಟಿಯವರು ಹೆಜಮಾಡಿ ಗ್ರಾಪಂ ಅಧ್ಯಕ್ಷರಿಗೆ ವಿತರಿಸಿದರು.

ಹೆಜಮಾಡಿ ಗ್ರಾಪಂ ಪಿಡಿಒ ಮಮತಾ ವೈ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.