ಮಲ್ಪೆ ಮೀನುಗಾರರ ಸುರಕ್ಷಿತ ವಾಪಸಾತಿಗೆ ಬಪ್ಪನಾಡು ದೇವಳದಲ್ಲಿ ವಿಶೇಷ ಪ್ರಾರ್ಥನೆ

ಮೂಲ್ಕಿ: ಸುವರ್ಣ ತ್ರಿಭುಜ ದೊಣಿ ಸಹಿತ ಏಳು ಮೀನುಗಾರರು ಆಳಸಮುದ್ರ ಮೀನುಗಾರಿಕೆಗೆಂದು ತೆರಳಿ ತಿಂಗಳಾದರೂ ಯಾವುದೇ ಸುಳಿವು ಲಭ್ಯವಿಲ್ಲದಿರುವುದಕ್ಕಾಗಿ ಅವರ ಸುರಕ್ಷಿತ ಬಿಡುಗಡೆಗೆ ಪ್ರಾರ್ಥಿಸಿ ಭಾನುವಾರ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ನೇತೃತ್ವದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅಭಯಚಂದ್ರ ಜೈನ್,ಹೊಟ್ಟೆಪಾಡಿಗಾಗಿ ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆ ಮೀನುಗಾರರಿದ್ದ ಬೋಟ್ ನಾಪತ್ತೆಯಾಗಿರುವುದು ಗಂಭೀರ ವಿಷಯ.ಸರಕಾರ,ಕೋಸ್ಟ್ ಗಾರ್ಡ್ ಮತ್ತು ಇಲಾಖೆ ಅವರ ಸುರಕ್ಷಿತ ವಾಪಸಾತಿಗೆ ತೀವ್ರ ಪ್ರಯತ್ನ ಮುಂದುವರಿಸಿದೆ.ಈ ಹಿನ್ನೆಲೆಯಲ್ಲಿ ಮೂಲ್ಕಿ-ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಬಪ್ಪನಾಡು ದೇವಳದಲ್ಲಿ ಎಲ್ಲರೂ ಒಂದಾಗಿ ಅವರ ಸುರಕ್ಷಿತ ವಾಪಸಾತಿಗಾಗಿ ಶ್ರೀ ದುರ್ಗೆಯನ್ನು ಬೇಡಿಕೊಳ್ಳಲಾಗಿದೆ ಎಂದರು.
ಆಳ ಸಮುದ್ರ ಮೀನುಗಾರಿಕೆಯಲ್ಲಿ ಕರ್ನಾಟಕದ ಮೀನುಗಾರರರಿಗೆ ಪಕ್ಕದ ರಾಜ್ಯಗಳಿಂದ ಆತಂಕ ಇರುವುದು ನಿಜ.ಈ ಬಗ್ಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಕರ್ನಾಟಕ ರಾಜ್ಯದ ಮೀನುಗಾರರಿಗೆ ಯಾವುದೇ ಅನ್ಯಾಯವಾಗಬಾರದು ಎಂದು ಮಾಜಿ ಮೀನುಗಾರಿಕಾ ಸಚಿವರೂ ಆಗಿರುವ ಜೈನ್ ಅಭಿಪ್ರಾಯಿಸಿದರು.

ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು,ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ ಉಪಸ್ಥಿತಿಯಲ್ಲಿ ಬಪ್ಪನಾಡು ಶ್ರೀ ದುರ್ಗೆಗೆ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ,ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾರ್ಡ್,ಮೂಲ್ಕಿ ನಪಂ ಸದಸ್ಯರಾದ ಪುತ್ತುಬಾವ ಮತ್ತು ಬಶೀರ್ ಕುಳಾೈ,ಅಂಬಿಗರ ಚೌಡಯ್ಯರ ಸಮಿತಿಯ ಅಧ್ಯಕ್ಷ ಪ್ರಭು ಆಲೂರು,ಮುಖಂಡರುಗಳಾದ ಯೋಗೀಶ್ ಕೋಟ್ಯಾನ್ ಚಿತ್ರಾಪು,ಸಂದೀಪ್ ಸುವರ್ಣ ಚಿತ್ರಾಪು,ಶಶೀಂದ್ರ ಸಾಲ್ಯಾನ್,ಹರೀಶ್ ಸುವರ್ಣ ಕೊಳಚಿಕಂಬ್ಳ,ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ,ಮಂಜುನಾಥ್ ಕಂಬಾರ್,ಶಶಿ ಅಮೀನ್,ಬಾಲಚಂದ್ರ ಕಾಮತ್,ಪ್ರವೀಣ್ ಬೊಳ್ಳೂರು,ಶಿವಾನಂದ ಆರ್‍ಕೆ,ಚಂದ್ರಶೇಖರ್ ಹಳೆಯಂಗಡಿ,ರಿತೇಶ್ ಸಾಲ್ಯಾನ್ ಸಸಿಹಿತ್ಲು,ಶಂಕರ ಪಡಂಗ,ಮಲ್ಲಿಕಾರ್ಜುನ,ಅಬ್ದುಲ್ ಅಜೀಜ್,ಉತ್ತಮ್ ಮೊೈಲೊಟ್ಟು,ದಯಾನಂದ ಮಟ್ಟು,ಶಂಕರ್ ಚೇಳಾರು,ಲೋಹಿತ್ ಸುವರ್ಣ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.