ಮತ್ಸ್ಯಾಶ್ರಯ ಯೋಜನೆ ರಾಜೀವ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಕ್ಕೆ ಹೆಜಮಾಡಿ ಗ್ರಾಮಸ್ಥರ ವಿರೋಧ

ಬಡ ಮೀನುಗಾರರ ಮತ್ಸ್ಯಾಶ್ರಯ ಯೋಜನೆಯನ್ನು ರಾಜ್ಯ ಸರಕಾರ ರಾಜೀವಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಿರುವುದನ್ನು ಹೆಜಮಾಡಿ ಗ್ರಾಮಸ್ಥರು ಒಕ್ಕೊರಲಿಂದ ವಿರೋಧಿಸಿದ್ದು, ನಿರ್ಣಯ ಮಂಡಿಸಿ ಸರಕಾರಕ್ಕೆ ಕಳುಹಿಸಲು ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ.

ಮಂಗಳವಾರ ಹೆಜಮಾಡಿ ಬಿಲ್ಲವರ ಸಂಘದ ಮಿನಿ ಹಾಲ್‍ನಲ್ಲಿ ಗಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮದ 2018-19ನೇ ಸಾಲಿನ ಗ್ರಾಮ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಹಿಂದಿನ ಮತ್ಸ್ಯಾಶ್ರಯ ಯೋಜನೆಯ ಫಲಾನುಭವಿಗಳಿಗೆ ಅನುದಾನ ದೊರಕಿಲ್ಲ.ಹೊಸ ಅರ್ಜಿಗಳನ್ನು ವಿಲೇವಾರಿಯೂ ಮಾಡಿಲ್ಲ.ಈತನ್ಮಧ್ಯೆ ಯೋಜನೆಯನ್ನು ಬೇರೆ ನಿಗಮಕ್ಕೆ ಹಸ್ತಾಂತರಿಸಿದ ಕಾರಣ ಯೋಜನೆಯ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗಲಿದೆ.ನಿಗಮದ ನಿಯಮಗಳು ಕಠಿಣವಾಗಿರುವ ಕಾರಣ ಗ್ರಾಮೀಣ ಬಡ ಮೀನುಗಾರರಿಗೆ ಯೋಜನೆಯ ಫಲ ಸಿಗುತ್ತಿಲ್ಲ.ಹಾಗಾಗಿ ಯೋಜನೆಯನ್ನು ನಿಗಮಕ್ಕೆ ಹಸ್ತಾಂತರ ಮಾಡಕೂಡದು ಎಂದು ಗ್ರಾಮಸ್ಥರು ಒಕ್ಕೊರಲಿಂದ ಮೀನುಗಾರಿಕಾ ಇಲಾಖಾಧಿಕಾರಿ ಕಿರಣ್‍ಕುಮಾರ್‍ರನ್ನು ಆಗ್ರಹಿಸಿದರು.

ಈ ಬಗ್ಗೆ ಗ್ರಾಪಂ ನಿರ್ಣಯ ಕೈಗೊಂಡು ಸರಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲು ನಿರ್ಧರಿಸಲಾಯಿತು.
ಮುಟ್ಟಳಿವೆ ಸೇತುವೆ ಕಾಮಗಾರಿಗೆ ಸಿಆರ್‍ಝಡ್ ನೋಟೀಸ್: ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿರುವ ಹೆಜಮಾಡಿಯ ಉತ್ತರ ಭಾಗದ ಸಮುದ್ರ ತೀರದ ಮುಟ್ಟಳಿವೆ ಪ್ರದೇಶದಲ್ಲಿ ಸಿಆರ್‍ಝಡ್ ಇಲಾಖೆಗೆ ಮಾಹಿತಿ ನೀಡದೆ ಸೇತುವೆ ಹಾಗೂ ರಸ್ತೆ ಕಾಮಗಾರಿ ನಡೆಸಿದ್ದಕ್ಕಾಗಿ ಸಂಬಂಧಿತ ಇಲಾಖೆಗೆ ಸಿಆರ್‍ಝಡ್ ನೋಟೀಸ್ ಜಾರಿ ಮಾಡಿದ್ದಾಗಿ ಇಲಾಖಾಧಿಕಾರಿ ಧೀರಜ್ ಹೇಳಿದರು.

ಸಿಆರ್‍ಝಡ್ ನಿಯಮಗಳ ಬಗ್ಗೆ ಕೇಂದ್ರ ಸರಕಾರದ ಪರಿಷ್ಕøತ ನಿಯಮ ಬಹುಬೇಗ ಜಾರಿಯಾಗಲಿದೆ ಎಂದವರು ಮಾಹಿತಿ ನೀಡಿದರು. ಹೆಜಮಾಡಿ ಬಂದರು ರಸ್ತೆ ಕಾಮಗಾರಿ ಶೀಘ್ರ ಪೂರ್ಣ: ಹೆಜಮಾಡಿ ಯಾರ್ಡ್‍ನಿಂದ ಹೆಜಮಾಡಿ ಕೋಡಿ ಬಂದರು ಪ್ರದೇಶದ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿ ಜಗಧೀಶ್ ಭಟ್ ಗಮನ ಸೆಳೆದಾಗ,ಪ್ರಾಕೃತಿಕ ವಿಕೋಪ ನಿಧಿ 1.71 ಕೋಟಿ ರೂ.ನಲ್ಲಿ 1.12 ಕೀಮೀ ರಸ್ತೆ ಕಾಮಗಾರಿ ಶೀಘ್ರ ನಡೆಯಲಿದೆ.6 ಮೀಟರ್ ಅಗಲ್ ರಸ್ತೆಗೆ 4 ಮೀಟರ್ ಕಾಂಕ್ರಿಟೀಕರಣ ಮತ್ತು ಉಳಿದ ಭಾಗದಲ್ಲಿ ಡಾಮರೀಕರಣ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖಾ ಅಧೀನದ ಹಳೆ ಎಮ್‍ಬಿಸಿ ರಸ್ತೆಯಲ್ಲಿ ನವಯುಗ್ ಕಂಪನಿಯು ಟೋಲ್ ಸಂಗ್ರಹಕ್ಕೆ ಅಣಿಯಾಗಿರುವ ಬಗ್ಗೆ ಅವರ ಗಮನ ಸೆಳೆಯಲಾಯಿತು.ಈ ಬಗ್ಗೆ ಗ್ರಾಪಂ ನಿರ್ಣಯಿಸಿ ಇಲಾಖೆಗೆ ಮನವಿ ಸಲ್ಲಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಹಲೇ ಎಮ್‍ಬಿಸಿ ರಸ್ತೆಯಲ್ಲಿ ಟೋಲ್ ತಪ್ಪಿಸಿ ಘನ ವಾಹನಗಳ ನಿರಂತರ ಸಂಚಾರದಿಂದ ರಸ್ತೆ ಡಾಮರೀಕರಣ ಎದ್ದುಹೋಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ,ಮರು ಡಾಮರೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತೆಂಗು ಬೆಳೆಗಾರರ ಸಂಕಷ್ಟದ ಬಗ್ಗೆ ತೆಂಗು ಪ್ರಕೋಷ್ಟದ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ,ಇಲಾಖಾ ಅಧಿಕಾರಿ ಶ್ವೇತಾ ಹಿರೇಮಠ ಬಳಿ ಮಾಹಿತ ಕೇಳಿದರು.ಇಲಾಖಾಧಿಕಾರಿಗಳು ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ತೆಂಗಿನ ಮರ ಹತ್ತುವವರ ಸಂಖ್ಯೆ ತೀರಾ ಇಳಿಮುಖವಾಗುತ್ತಿದ್ದು ಸರಕಾರ ಹಿಂದೆ ನಡೆಸಿದ ಮರದ ಸ್ನೇಹಿತರು ಕಾರ್ಯಕ್ರಮವನ್ನು ಪುನರಾರಂಭಿಸಬೇಕು.ಮರ ಹತ್ತುವಾಗ ಅಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದರೆ ಸರಕಾರ ಸೂಕ್ತ ಪರಿಹಾರ ನೀಡಬೇಕು.ತೆಂಗು ಇಳುವರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ,ತೋಟಗಾರಿಕಾ ಇಲಾಖೆಯು ರೈತರ ಜತೆ ವಿಚಾರ ಸಂಕಿರಣ ನಡೆಸಬೇಕು ಎಂದವರು ಹೇಳಿದರು.

ವಿಕ ಪ್ರತಿಧ್ವನಿ: ಕಳೆದ ಬಾರಿ ವಿಕ ನಡೆಸಿದ ತೆಂಗು ನೊಣ ಬಾಧೆ ವಿಚಾರ ಸಂಕಿರಣದ ಬಗ್ಗೆ ಪ್ರಾಣೇಶ್ ಹೆಜಮಾಡಿ ಪ್ರಸ್ತಾವಿಸಿ,ಅಂದು ನೀಡಿದ ಭರವಸೆಯಂತೆ ಇಲಾಖೆ ಪುನರಪಿ ರೈತರಿಗೆ ಸೂಕ್ತವಾಗಿ ಸ್ಪಂದಿಸಿಲ್ಲವೆಂದು ಪ್ರಶ್ನಿಸಿದರು.
ರೈತರ ಹಿತರಕ್ಷಣೆಗೆ ಇಲಾಖೆ ಬದ್ಧವಾಗಿರಬೇಕು ಎಂದು ಆಗ್ರಹಿಸಿದ ರೈತರನೇಕರು 6 ತಿಂಗಳ ಗಡುವು ನೀಡಿದರು.ಈ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಶ್ವೇತಾ ಹೇಳಿದರು.
ಮಾತೃಪೂರ್ಣ ಯೋಜನೆ ವಿಫಲ:ಸರಕಾರದ ಮಹತ್ವಾಕಂಕ್ಷೆಯ ಯೋಜನೆ ಉಭಯ ಜಿಲ್ಲೆಗಳಲ್ಲಿ ಸಂಪೂರ್ಣ ವಿಫಲವಾಗಿದ್ದು,ಅದನ್ನು ಸ್ಥಗಿತಗೊಳಿಸಿ ಹಿಂದಿನ ಯೋಜನೆಯನ್ನು ಜಾರಿಗೊಳಿಸುವಂತೆ ಗ್ರಾಮಸ್ಥರನೇಕರು ಇಲಾಖಾಧಿಕಾರಿ ಶಕುಂತಳಾರವರನ್ನು ಆಗ್ರಹಿಸಿದರು.ಈ ಬಗ್ಗೆ ಇಲಾಖಾಧಿಕಾರಿಗಳ ಗಮನ ಸೆಳೆಯುವುದಾಗಿ ಅವರು ಉತ್ತರಿಸಿದರು.
ಮೆಸ್ಕಾಂ ಸರ್ವಿಸ್ ಸೆಂಟರ್‍ಗೆ ಆಗ್ರಹ:ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಹೆಜಮಾಡಿ ಗ್ರಾಮವನ್ನೊಳಗೊಂಡ ಪಡುಬಿದ್ರಿ ಮೆಸ್ಕಾಂ ಇಲಾಖೆಗೆ ಶೀಘ್ರವಾಗಿ ಸರ್ವಿಸ್ ಸೆಂಟರ್ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸದರು.ಈ ಬಗ್ಗೆ ಗ್ರಾಪಂ ನಿರ್ಣಯ ಕೈಗೊಂಡು ಸಂಬಂಧಿತ ಇಲಾಖೆಗೆ ಕಳುಹಿಸಲು ಸಭೆ ನಿರ್ಧರಿಸಿತು.

ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ ನೋಡಲ್ ಅಧಿಕಾರಿಯಾಗಿದ್ದರು.ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯೆ ರೇಣುಕಾ ಪುತ್ರನ್,ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ಆರೋಗ್ಯ ಇಲಾಖೆಯ ಡಾ.ಬಿ.ಬಿ.ರಾವ್,ಮೆಸ್ಕಾಂ ಇಲಾಖೆಯ ಸುಧೀರ್ ಪಠೇಲ್,ಪಶು ಸಂಗೋಪನಾ ಇಲಾಖಾ ಶಿವಪ್ಪಯ್ಯ ಗುರುಸ್ವಾಮಿ,ಅರಣ್ಯ ಇಲಾಖೆಯ ನಾಗೇಶ್ ಬಿಲ್ಲವ,ಪೋಲೀಸ್ ಇಲಾಖೆಯ ದಿವಾಕರ ಸುವರ್ಣ,ಕೃಷಿ ಇಲಾಖೆಯ ವಾದಿರಾಜ ರಾವ್,ಸಮಾಜ ಕಲ್ಯಾಣ ಇಲಾಖಾ ಬಸವರಾಜ್ ಉಪಸ್ಥಿತರಿದ್ದರು.
ಪಿಡಿಒ ಮಮತಾ ವೈ.ಶೆಟ್ಟಿ ಸ್ವಾಗತಿಸಿದರು.ಲೆಕ್ಕಾಧಿಕಾರಿ ರಜನಿ ವರದಿ ಮಂಡಿಸಿದರು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.