ಮಂತ್ರ ಬೀಚ್ ಸ್ವಚ್ಛತಾ ಅಭಿಯಾನ

ಮೂಲ್ಕಿ ಸಸಿಹಿತ್ಲು ಮತ್ತು ಹೆಜಮಾಡಿ ಗ್ರಾಮಗಳನ್ನು ವಿಭಜಿಸುವ ಶಾಂಭವಿ-ನಂದಿನಿ ಹೊಳೆಯು ಸಮುದ್ರ ಸೇರುವ ಅಳಿವೆ ಬಾಗಿಲಿನ ಹೆಜಮಾಡಿ ಭಾಗದ ಮಂತ್ರ ಬೀಚ್ ಬಳಿ ಭಾನುವಾರ ನೂರಾರು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದರು.

ಮಂತ್ರ ಸರ್ಫ್ ಕ್ಲಬ್, ಬೋಳಾಸ್, ನೋವಿಗೋ, ಸೆಮ್‍ನೋಕ್ಷ್ ಮತ್ತು ಕೋಡ್‍ಕ್ರಾಫ್ಟ್ ಸಂಸ್ಥೆಗಳ ಸಂಯುಕ್ತ ಪ್ರಾಯೋಜಕತ್ವದಲ್ಲಿ ನಡೆದ ಬೀಚ್ ಕ್ಲೀನ್ ಕಾಯಕ್ರಮದಲ್ಲಿ ಮೂಡಬಿದಿರೆ ಆಳ್ವಾಸ್ ಡಿಗ್ರಿ ಕಾಲೇಜಿನ 90 ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದರು.

ಅಳಿವೆ ಬಾಗಿಲ ಹೆಜಮಾಡಿ ಭಾಗದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳು ಸಂಗ್ರಹಗೊಂಡಿದ್ದು, ಸರ್ಫಿಂಗ್ ಸ್ವಾಮಿ ಫೌಂಡೇಶನ್ ಪ್ರತಿ ತಿಂಗಳು ವಿವಿಧ ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ.

ಭಾನುವಾರ ಪ್ರಾಯೋಜಕರು ಹಾಗೂ ವಿದ್ಯಾರ್ಥಿಗಳು 300ಕ್ಕೂ ಅಧಿಕ ಗೋಣಿಗಳಲ್ಲಿ ಪ್ಲಾಸ್ಟಿಕ್, ಬಾಟಲಿ ಮತ್ತು ಚಪ್ಪಲಿಗಳನ್ನು ವಿಭಜಿಸಿ ಸಂಗ್ರಹಿಸಿದರು. ಅವುಗಳನ್ನೆಲ್ಲಾ ದೋಣಿ ಮೂಲಕ ಸಾಗಿಸಿ ಗುಜರಿ ವ್ಯಾಪಾರಸ್ಥರಿಗೆ ನೀಡಲಾಯಿತು.

ಜನವರಿ ತಿಂಗಳಲ್ಲಿ ಮೂಲ್ಕಿಯ ವಿವಿಧ ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ನೆರವಿನೊಂದಿಗೆ ಸ್ವಚ್ಛತಾ ಅಭಿಯಾನ ನಡೆಸುವುದಾಗಿ ಗೌರವ್ ಹೆಗ್ಡೆ ತಿಳಿಸಿದ್ದಾರೆ.
ಈ ಸಂದರ್ಭ ಪ್ರಾಯೋಜಕರುಗಳಾದ ರಘುನಾಥ್ ಸಾಲಿಗ್ರಾಮ, ದೀಪಕ್ ಬೋಳೂರು, ಗುರುದತ್ ಶೆಟ್ಟಿ, ಮಂತ್ರ ಸರ್ಫ್ ಕ್ಲಬ್‍ನ ನಿರ್ದೇಶಕರುಗಳಾದ ಗೌರವ್ ಹೆಗ್ಡೆ ಮತ್ತು ಶಮಂತ್ ಕುಮಾರ್, ಆಳ್ವಾಸ್ ಕಾಲೇಜಿನ ದರ್ಶನ್, ಅಪೂರ್ವ ಮತ್ತು ದಿವ್ಯಾ ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿದ್ದರು.