ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡೀಸ್ ಹೆಸರು ಮೂಲ್ಕಿಯಲ್ಲಿ ಜಾರ್ಜ್ ಫೆನಾಂಡೀಸ್ ನುಡಿ ನಮನ ಸಭೆಯಲ್ಲಿ ಸರ್ವತ್ರ ಅಭಿಪ್ರಾಯ

ಮೂಲ್ಕಿ: ದೇಶದ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಜಾರ್ಜ್ ಫೆರ್ನಾಂಡೀಸ್‍ರವರ ಹೆಸರನ್ನು ಮಂಗಳುರು ರೈಲ್ವೇ ನಿಲ್ದಾಣಕ್ಕೆ ಇಡಬೇಕೆಂದು ಮೂಲ್ಕಿಯಲ್ಲಿ ನಡೆದ ನುಡಿ ನಮನ ಸಭೆಯಲ್ಲಿ ಸರ್ವತ್ರ ಅಭಿಪ್ರಾಯಿಸಲಾಯಿತು.

ಶುಕ್ರವಾರ ಮೂಲ್ಕಿಯ ಪುನರೂರು ಹೋಟೆಲ್ ಸಭಾಂಗಣದಲ್ಲಿ ದಿ.ಜಾರ್ಜ್ ಫೆರ್ನಾಂಡೀಸ್ ನಿಧನಕ್ಕೆ ಸಂತಾಪ ಸೂಚಿಸಿ ಮೂಲ್ಕಿ ನಾಗರಿಕರ ವತಿಯಿಂದ ನಡೆದ ನುಡಿ ನಮನ ಸಭೆಯಲ್ಲಿ ಎಲ್ಲರೂ ಇದೇ ಅಭಿಪ್ರಾಯ ವ್ಯಕ್ತ ಪಡಿಸಿ,ಅವಿಭಜಿತ ದಕ ಜಿಲ್ಲೆಯ ಪ್ರತಿಯೊಬ್ಬರೂ ಈ ಬಗ್ಗೆ ಸರಕಾರ ಮತ್ತು ಜನಪ್ರತಿನಿಧಿಗಳನ್ನು ಆಗ್ರಹಿಸಬೇಕೆಂದು ನಿರ್ಧರಿಸಲಾಯಿತು.

ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ,ಸಮಾಜದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಜಾರ್ಜ್ ಫೆರ್ನಾಂಡೀಸ್‍ರವರನ್ನು ಜೀವನಪೂತಿ ನೆನಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ನಾವೆಲ್ಲರೂ ಪಣತೊಡಬೇಕು.ರೈಲ್ವೇ,ರಕ್ಷಣಾ ಸಚಿವರಾಗಿ ಅವರು ದೇಶಕ್ಕೆ ಗೌರವ ತಂದುಕೊಟ್ಟಿದ್ದರು ಎಂದರು.
ಡಾ.ಎಮ್.ಅಚ್ಯುತ ಕುಡ್ವ ಮಾತನಾಡಿ, ಮಂಗಳುರಿಗರಾದ ಜಾರ್ಜ್ ಫೆರ್ನಾಂಡೀಸ್ ಕರಾವಳಿಯ ಅನಘ್ರ್ಯ ರತ್ನ.ಅವರು ಹೆರನ್ನು ಚಿರಸ್ಥಾಯಿಯಾಗಿಸಲು ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಅವರ ಹೆಸರನ್ನಿಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಸಾಹಿತಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಮಾತನಾಡಿ, ರೈಲ್ವೇ ಇಲಾಖೆ ನೂತನವಾಗಿ ಆರಂಭಿಸಲಿರುವ ರೈಲಿಗೆ ಜಾರ್ಜ್ ಫೆರ್ನಾಂಡೀಸ್ ಹೆಸರಿಡುವುದು ಸೂಕ್ತವಾಗಿದೆ.ಈ ಬಗ್ಗೆ ನಾವೆಲ್ಲರೂ ಹಕ್ಕೊತ್ತಾಯ ಮಂಡಿಸಬೇಕು.ಜಿಲ್ಲೆಯಲ್ಲಿ ಅತ್ಯಗತ್ಯವಾಗಿ ಅವರ ಸ್ಮಾರಕ ನಿರ್ಮಿಸಬೇಕೆಂದರು.

ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಮಾತನಾಡಿ,ಆನೆ ನಡೆದದ್ದೇ ದಾರಿ ಎಂಬ ನಾಣ್ಣುಡಿಗೆ ತಕ್ಕಂತೆ ಬದುಕಿದವರು ಜಾರ್ಜ್ ಫೆರ್ನಾಂಡೀಸ್‍ರವರು.ಪಾಲ್ಘಾಟ್ ಬದಲು ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಪ್ರಾಮುಖ್ಯತೆ ಬರುವಂತಾಗಲು ಜಾರ್ಜ್ ಹೆಸರು ಬಲು ಸೂಕ್ತವಾಗಿದೆ ಎಂದರು.

ಐಕಳಬಾವ ಜಯಪಾಲ್ ಶೆಟ್ಟಿಯವರು ಜಾರ್ಜ್ ಫೆರ್ನಾಂಡೀಸ್ ಮತ್ತು ಡಾ.ಸಂಜೀವನಾಥ್ ಐಕಳರ ಒಡನಾಟದ ಬಗ್ಗೆ ವಿವರಿಸಿದರು.
ಹರೀಶ್ ಎನ್.ಪುತ್ರನ್,ಸಾಧು ಅಂಚನ್,ಸರೋಜಿನಿ ಸುವರ್ಣ,ಭಾಸ್ಕರ ಶೆಟ್ಟಿ,ವಾಮನ ಕೋಟ್ಯಾನ್ ನಡಿಕುದ್ರು,ಮಟ್ಟಿ ಲಕ್ಷ್ಮೀನಾರಾಯಣ ರಾವ್ ಮಾತನಾಡಿದರು.

ವೈ.ಎನ್.ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಜಾರ್ಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ,ಮೌನ ಪ್ರಾರ್ಥನೆ ಸಲ್ಲಿಸಲಾಯಿತು.