ಭಯೋತ್ಪಾದನೆಗೆ ಧರ್ಮವನ್ನು ಥಳಕು ಹಾಕಬಾರದು-ಶರೀಫ್ ಚಾರ್ಮಾಡಿ

ಪಡುಬಿದ್ರಿ: ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ.ಭಯೋತ್ಪಾದಕರು ಧರ್ಮವನ್ನು ಅರಿಯದವರು.ಎಲ್ಲಾ ಧರ್ಮಗಳ ಸಂದೇಶ ಒಂದೇ ಆಗಿದ್ದು,ಶಾಂತಿ ಸೌಹಾರ್ದತೆಯೇ ಧರ್ಮಗಳ ಮೂಲ ಮಂತ್ರವಾಗಿದೆ.ಹಾಗಾಗಿ ಭಯೋತ್ಪಾದನೆಗೆ ಧರ್ಮವನ್ನು ಥಳಕು ಹಾಕಬಾರದು ಎಂದು ಕನ್ನಂಗಾರ್ ಮುಹಿಸ್ಸುನ್ನ ದರ್ಸ್ ವಿದ್ಯಾರ್ಥಿ ಶರೀಫ್ ಚಾರ್ಮಾಡಿ ಹೇಳಿದರು.

ಅವರು ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಸಾಯಿ ಆರ್ಕೆಡ್‍ನಲ್ಲಿ ನಡೆದ ಸತತ 5ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ರಂಝಾನ್ ತಿಂಗಳಲ್ಲಿ ಮುಸ್ಲಿಮ್ ಬಾಂದವರು ಆಚರಿಸುವ ಉಪವಾಸದಿಂದ ಹೃದಯ ಶುದ್ದೀಕರಣ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಹೃದಯ ಶುದ್ಧೀಕರಣ ಇಲ್ಲದೆ ಪರಸ್ಪರ ಅಪನಂಬಿಕೆಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಉಪವಾಸ ಇದಕ್ಕೊಂದು ಸಾಧನವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಮಾತನಾಡಿ, ಪ್ರತಿಯೊಂದು ಧರ್ಮದ ಹಬ್ಬಗಳನ್ನು ಎಲ್ಲರೂ ಕೂಡಿ ಆಚರಿಸಿದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ಬದುಕಲು ಸಾಧ್ಯ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಆಯೋಜಿಸಿರುವ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಪ್ರಸ್ತುತವಾಗಿದೆ ಎಂದರು.

ಕೆಪಿಸಿಸಿ ಸಂಯೋಜಕ ನವೀನ್‍ಚಂದ್ರ ಜೆ.ಶೆಟ್ಟಿ ಮಾತನಾಡಿ, ಇಸ್ಲಾಂ ಧರ್ಮದ ಐದು ಆಧಾರ ಸ್ಥಂಭಗಳಲ್ಲಿ ರಂಝಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಕಡ್ಡಾಯ. ಅಲ್ಲದೆ ಈ ತಿಂಗಳಲ್ಲಿ ದಾನ ಧರ್ಮ ನೀಡುವುದಕ್ಕೆ ಪ್ರೋತ್ಸಾಹ ನೀಡಿದೆ. ಇದರಿಂದ ಬಡವರ ಹಸಿವು ಏನೇಂಬುವುದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹಿಮಾಯತುಲ್ ಇಸ್ಲಾಂ ಸಂಘದ ಸಂಚಾಲಕ ಶಬ್ಬೀರ್ ಹುಸೇನ್, ರೋಟರಿ ಕ್ಲಬ್‍ನ ನಿಯೋಜಿತ ಅಧ್ಯಕ್ಷ ರಿಯಾಝ್ ಮುದರಂಗಡಿ ಉಪಸ್ಥಿತರಿದ್ದರು. ಅಬ್ದುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಆಚಾರ್ಯ ಸ್ವಾಗತಿಸಿದರು. ಸುಧಾಕರ ಕೆ. ವಂದಿಸಿದರು.