ಭಜನೆಯಿಂದ ಧನಾತ್ಮಕ ಶಕ್ತಿಯ ಉದ್ದೀಪನ: ಶಾಸಕ ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ಕರಾವಳಿ ಭಾಗದಲ್ಲಿ ಜನಜನಿತವಾದ ಭಜನೆಯಿಂದ ನಮ್ಮ ಸಂಸ್ಕøತಿ ಸಂಸ್ಕಾರ ಉಳಿದಿದೆ.ನಿತ್ಯ ಭಜನೆಯಿಂದ ನಮ್ಮ ಒಳಗೇ ಧನಾತ್ಮಕ ಶಕ್ತಿಯು ಉದ್ದೀಪನಗೊಳ್ಳುವುದು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಅವರು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಡುಬಿದ್ರಿ ರೋಟರಿ ಕ್ಲಬ್, ಇನ್ನರ್‍ವೀಲ್ ಕ್ಲಬ್ ಪಡುಬಿದ್ರಿ ಮತ್ತು ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಆಶ್ರಯದಲ್ಲಿ ಸತತ ನಾಲ್ಕನೇ ವರ್ಷದಲ್ಲಿ ನಡೆದ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಅತಿಥಿಗಳಾಗಿದ್ದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ಮಾತನಾಡಿ,ಇಂದಿನ ಕಾಲಘಟ್ಟದಲ್ಲಿ ವಿಪರೀತ ಕುಟುಂಬ ವ್ಯವಸ್ಥೆ, ಮಕ್ಕಳೆದುರೇ ಹೊಡೆದಾಡಿಕೊಳ್ಳುವ ಗಂಡ ಹೆಂಡಿರು ಬಹಳಷ್ಟಿದ್ದು ಇದರಿಂದಾಗಿ ಮಕ್ಕಳೂ ಚಂಚಲಿತ ಮನಸ್ಕರಾಗುತ್ತಾರೆ. ಇವಕ್ಕೆ ನಾವು ನಮ್ಮ ಮನೆಯಲ್ಲಿ ಸಂಧ್ಯಾಕಾಲದಲ್ಲಿ ಭಜನೆ ಮಾಡುವುದರಿಂದ ದುಷ್ಟ ಶಕ್ತಿಗಳೂ ಮನೆಯಿಂದ ಹೊರಗೋಡುತ್ತವೆ ಎಂದರು.

ಇನ್ನೋರ್ವ ಅತಿಥಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ ಪ್ರಾಕೃತಿಕ ವಿಕೋಪಗಳು ನಾವು ಪರಿಸರದ ಮೇಲೆ ಮಾಡುವ ಸವಾರಿಯಿಂದಾಗಿ ಸಂಭವಿಸುತ್ತಿವೆ. ಪರಿಸರವನ್ನು ಉಳಿಸಲು, ನಮ್ಮ ಮನೆ, ಸಂಸಾರಗಳನ್ನು ಮತ್ತು ಗಳಿಸಿದ್ದನ್ನೂ ಉಳಿಸಿಕೊಳ್ಳಲು ಭಜನೆ ಸೂಕ್ತ ಸಾಧನವೆಂದರು.

ಮುಖ್ಯ ಪ್ರಾಯೋಜಕರಾದ ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಭಜನಾ ಸ್ಪರ್ಧೆಯನ್ನು ಆಯೋಜಿಸಿದ ಪಡುಬಿದ್ರಿ ರೋಟರಿ ಸಾಹಸವನ್ನು ಶ್ಲಾಘಿಸಿದರು.
ರೋಟರಿ ವಲಯ 5ರ ಸಹಾಯಕ ಗವರ್ನರ್ ಸೂರ್ಯಕಾಂತ ಶೆಟ್ಟಿ, ನಿಯೋಜಿತ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಆಚಾರ್ಯ ಎರ್ಮಾಳು ಮಾತನಾಡಿದರು.
ಭಜನಾ ಸ್ಪರ್ಧೆಯನ್ನು ಆಯೋಜಿಸಲು ಶ್ರಮಿಸಿದ ಪಿ. ಕೃಷ್ಣ ಬಂಗೇರ, ಹೇಮಚಂದ್ರ, ಸಂತೋಷ್ ಪಡುಬಿದ್ರಿ ಇವರನ್ನು ಗೌರವಿಸಲಾಯಿತು.ತೀರ್ಪುಗಾರರಾದ ರತ್ನಾವತಿ ಬೈಕಾಡಿ ಹಾಗೂ ವೆಂಕಟೇಶ ರಾವ್ ಅವರನ್ನು ಶಾಸಕ ಲಾಲಾಜಿ ಮೆಂಡನ್ ಗೌರವಿಸಿದರು.

ಹೊಟೇಲು ಉದ್ಯಮಿ, ಕಲ್ಲಟ್ಟೆ ಶ್ರೀ ಧರ್ಮ ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಿಯಾಜ್ ಮುದರಂಗಡಿ, ಪ್ರಶಸ್ತಿ ವಿಜೇತ ಶಿಕ್ಷಕ ಶಂಕರ್ ಗೋಳಿಜಾರ, ಇನ್ನರ್‍ವೀಲ್ ಕ್ಲಬ್ ಕಾರ್ಯದರ್ಶಿ ಸುನಂದಾ ಮತ್ತಿತರರು ವೇದಿಕೆಯಲ್ಲಿದ್ದರು.

ಪಡುಬಿದ್ರಿ ರೋಟರಿ ಅಧ್ಯಕ್ಷ ಗಣೇಶ್ ಆಚಾರ್ಯ ಎರ್ಮಾಳು ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸುಧಾಕರ ಕೆ. ವಂದಿಸಿದರು.

ಪಲಿತಾಂಶ: ಭಜನಾ ಸ್ಪರ್ಧೆಯಲ್ಲಿ ದಾಸಪ್ರಿಯ ಭಜನ ಮಂಡಳಿ ಹಳೆಯಂಗಡಿ ಪ್ರಥಮ, ಸುಬ್ರಹ್ಮಣ್ಯ ಭಜನಾ ಮಂಡಳಿ ನೀರು ಮಾರ್ಗ ದ್ವಿತೀಯ ಹಾಗೂ ವೆಂಕಟರಮಣ ಭಜನಾ ಮಂಡಳಿ ಕಾರ್ಕಳ ತೃತೀಯ ಸ್ಭಾನವನ್ನು ಗಳಿಸಿದವು. ಉತ್ತಮ ಗಾಯಕರಾಗಿ ನಿತಿನ್ ಮೂಲ್ಕಿ(ದಾಸಪ್ರಿಯ ಭಜನ ಮಂಡಳಿ ಹಳೆಯಂಗಡಿ),ಉತ್ತಮ ಗಾಯಕಿಯಾಗಿ ಶೈಲಜಾ ನಾಯಕ್(ಶ್ರೀ ದುರ್ಗಾ ಭಜನಾ ಮಂಡಳಿ ಉಡುಪಿ),ಉತ್ತಮ ತಬಲಾ ವಾದಕರಾಗಿ ಪ್ರದೀಪ್ ಆಚಾರ್ಯ(ದಾಸಪ್ರಿಯ ಭಜನ ಮಂಡಳಿ ಹಳೆಯಂಗಡಿ), ಉತ್ತಮ ಹಾರ್ಮೋನಿಯಮ್ ವಾದಕರಾಗಿ ಲಲಿತಾ ಕುಳಾಯಿ(ಶ್ರೀ ವಿಷ್ಣು ಭಜನಾ ಮಂಡಳಿ ಕರ್ನಿರೆ ಬೆಳ್ಮಣ್ಣು) ವೈಯಕ್ತಿಕ ಪ್ರಶಸ್ತಿ ಪಡೆದರು.