ಭಜನಾ ಮಂದಿರಗಳು ಕರಾವಳಿಯ ಕಾವಲುಪಡೆಗಳು-ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ಪುರಾತನ ಕಾಲದಿಂದಲೂ ಕರಾವಳಿಯ ಮೀನುಗಾರರು ಅಲ್ಲಲ್ಲಿ ಭಜನಾ ಮಂದಿರಗಳನ್ನು ಸ್ಥಾಪಿಸಿ ಎಳೆಯರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೈಂಕರ್ಯ ಮುಂದುವರಿಸಿಕೊಂಡು ಬಂದಿದ್ದು, ಭಜನಾ ಮಂದಿರಗಳು ಕರಾವಳಿಯ ಕಾವಲುಪಡೆಗಳಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಹೆಜಮಾಡಿಯ ಸಣ್ಣಗುಂಡಿ ಮೊಗವೀರ ಮಹಾಸಭಾದ ವತಿಯಿಂದ ಸುಮಾರು ರೂ.25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಗೀತಾ ಮಂದಿರದ ಉದ್ಘಾಟನಾ ಸಮಾರಂಭದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅವಿಭಜಿತ ದಕ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶಪಾಲ್ ಸುವರ್ಣ ಮುಖ್ಯ ಅತಿಥಿಯಾಗಿ ಮಾತನಾಡಿ, ಗೀತಾ ಮಂದಿರದಲ್ಲಿ ನಿರಂತರ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಜತೆಗೆ ಎಳೆಯರಿಗೆ ಭಜನಾಸಂಕೀರ್ತನೆಗಳನ್ನು ಕಲಿಸಿಕೊಡುವ ತಾಣವಾಗಬೇಕೆಂದರು.

ಉಡುಪಿ ಸಾಯಿರಾಧಾ ಗ್ರೂಪ್ಸ್‍ನ ಎಮ್‍ಡಿ ಮನೋಹರ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ,ಧಾರ್ಮಿಕ ಚಿಂತನೆಗಳತ್ತ ಜನರ ಚಿತ್ತ ಇರಬೇಕು.ಮುಖ್ಯವಾಗಿ ನಾವೆಲ್ಲರೂ ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದರು.
ಧಾರ್ಮಿಕ ಉಪನ್ಯಾಸಗೈದ ಪಲಿಮಾರು ಮಠದ ವಿದ್ವಾನ್ ಲಕ್ಷ್ಮೀಶ ಆಚಾರ್ಯ ಮಾತನಾಡಿ, ಮೊಗವೀರರು ಅಗತ್ಯವಾಗಿ ವೇದವ್ಯಾಸ ಜಯಂತಿಯನ್ನು ಆಚರಿಸಬೇಕೆಂದರು.

ಸನ್ಮಾನ: ಗೀತಾ ಮಂದಿರ ನಿರ್ಮಾಣಕ್ಕೆ ಸ್ಥಳದಾನಗೈದ ಕುಟುಂಬಿಕರ ಪರವಾಗಿ ರತ್ನಾಕರ ಜಿ.ಪುತ್ರನ್, ಗೀತಾ ಮಂದಿರದಲ್ಲಿ ಈ ಹಿಂದೆ ನಿರಂತರ ಸೇವೆಗೈಯ್ಯುತ್ತಿದ್ದ ಜಾನಕಿ ಕೆ.ಬಂಗೇರ,ಗೀತಾ ಮಂದಿರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದೋಗ್ರ ಪಟ್ಟೆಬಲೆ ಫಂಡಿನ ಪರವಾಗಿ ಗಣೇಶ್ ಕೋಟ್ಯಾನ್, ಗುತ್ತಿಗೆದಾರ ಯೋಗೀಶ್ ಕಾಪು ಹಾಗೂ ಈ ಹಿಂದೆ ಗೀತಾ ಮಂದಿರದ ಏಳಿಗೆಗಾಗಿ ದುಡಿದ ಹಿರಿಯರ ಕುಟುಂಬಿಕರಿಗೆ ಸಣ್ಣಗುಂಡಿ ಮೊಗವೀರ ಮಹಾಸಭಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಲ್ಪೆ ಮತ್ಸ್ಯೋದ್ಯಮಿ ಸಾಧು ಸಾಲ್ಯಾನ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಗ್ರಾಪಂ ಅಧ್ಯಕ್ಷ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ತಾಪಂ ಸದಸ್ಯ ರೇಣುಕಾ ಪುತ್ರನ್, ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಸದಾಶಿವ ಕೆ.ಕೋಟ್ಯಾನ್, ಮೂಲ್ಕಿ ನಾಲ್ಕುಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಗುರುವಪ್ಪ ಕೋಟ್ಯಾನ್, ಸಣ್ಣಗುಂಡಿ ಮೊಗವೀರ ಮಹಾಸಭಾ ಅಧ್ಯಕ್ಷ ವಿಠಲ ಜಿ.ಪುತ್ರನ್, ಮಹಿಳಾ ಸಭಾದ ಉಪಾಧ್ಯಕ್ಷೆ ಕಮಲಾಕ್ಷಿ ಬಾಲಕೃಷ್ಣ ಪುತ್ರನ್, ಗೀತಾ ಮಂದಿರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೇಮಾನಂದ ಕೆ.ಪುತ್ರನ್, ಸಣ್ಣಗುಂಡಿ ಮೊಗವೀರ ಮಹಾಸಭಾದ ಮುಂಬಯಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಧವ ಎಮ್.ಪುತ್ರನ್ ಮುಖ್ಯ ಅತಿಥಿಗಳಾಗಿದ್ದರು.

ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷೆ ಗಾಯತ್ರಿ ಏಕನಾಥ ಕರ್ಕೇರ ಸ್ವಾಗತಿಸಿದರು.ವಿಠಲ ಜಿ.ಪುತ್ರನ್ ಪ್ರಸ್ತಾವಿಕ ಮಾತನಾಡಿದರು.ಗೋವರ್ಧನ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.ಬಬಿತಾ ಪುರುಷೋತ್ತಮ ವಂದಿಸಿದರು.

ಮುಂಜಾನೆ ಹೆಜಮಾಡಿ ರಂಗಣ್ಣ ಭಟ್‍ರವರ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ಬಳಿಕ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಗೀತಾ ಮಂದಿರದಲ್ಲಿ ಶ್ರೀ ಕೃಷ್ಣ ದೇವರ ವಿಗ್ರಹ ಅನಾವರಣಗೊಳಿಸಿದರು.ಬಳಿಕ ಅವರು ಆಶೀರ್ವಚಿಸಿ, ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಸಿಹಿತ್ಲು ರಂಗ ಸುದರ್ಶನ ತಂಡದಿಂದ “ಲೀಲೆ ತೋಜಾಯೆ ಶ್ರೀ ಕೃಷ್ಣೆ” ಪೌರಾಣಿಕ ನಾಟಕ ಮತ್ತು “ಅಮರ್ ಸಿರಿಕುಲು” ಜಾನಪದ ನಾಟಕ ಪ್ರದರ್ಶನಗೊಂಡಿತು.