ಬ್ಲೂ ಫ್ಲಾಗ್ ಸರ್ಟಿಫಿಕೇಶನ್ ಬೀಚ್‍ಗೆ ಆದ್ಯತೆಯ ಮೇಲೆ ಕೆಲಸ ಕಾರ್ಯ: ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್

ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿರುವ ಕಾರಣ ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ಅನುಷ್ಟಾನವಾಗಬೇಕಿದ್ದ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಯನ್ನು ಈಗಿರುವ ನಡಿಪಟ್ಣ ಬೀಚ್ ಪ್ರದೇಶದಲ್ಲಿ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಬ್ಲೂ ಫ್ಲ್ಯಾಗ್ ಬೀಚ್ ಯೋಜನೆ ಅನುಷ್ಠಾನ ಹಿನ್ನಲೆಯಲ್ಲಿ ಕೇಂದ್ರ ತಂಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

ಪಡುಬಿದ್ರಿ ಬೀಚನ್ನು ಸ್ವಚ್ಛ ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಉದ್ದೇಶದೊಂದಿಗೆ ಕೇಂದ್ರ ಸರಕಾರದಿಂದ ಈಗಾಗಲೇ ಗುರುತಿಸಲ್ಪಟ್ಟಿರುವ ದೇಶದ 13 ಬೀಚ್‍ಗಳಲ್ಲಿ ಒಂದಾದ ಬ್ಲೂ ಫ್ಲಾಗ್ ಸರ್ಟಿಫಿಕೇಶನ್ ಬೀಚ್‍ನ ಗುಣಮಟ್ಟಕ್ಕನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಪ್ರಿಯಾಂಕ ಫ್ರಾನ್ಸಿಸ್ ಮೇರಿ ಹೇಳಿದರು.

ಗುತ್ತಿಗೆದಾರ ಕಂಪೆನಿ ಅಧಿಕಾರಿಗಳಿಗೆ ಬೀಚ್ ಪರಿಸರದಲ್ಲೇ ಮೂಲಭೂತ ಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆಯಿದ್ದು ಈಗಿನ ಬೀಚ್ ಪರಿಸರದ ಸರಕಾರಿ ಜಾಗವನ್ನೇ ಅಭಿವೃದ್ಧಿಪಡಿಸಲಾಗುವುದೆಂದು ಜಿಲ್ಲಾಧಿಕಾರಿ ಪುನರುಚ್ಚರಿಸಿದರು.

Udupi DC Priyanka Mary Francis visits Padubidri beach for Blue flag implementation olan
ಸ್ಥಳೀಯರ ಜೀವನ ಮಟ್ಟದ ಗತಿ ಏರಿಕೆ: ಈಗಿನ ಮೀನುಗಾರಿಕಾ ರಸ್ತೆಯ ಪಶ್ಚಿಮ ಬದಿಯಲ್ಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅಲ್ಲೇ ಕೇಂದ್ರದ ಯೋಜನೆಯನ್ನು ಅನುಷ್ಟಾನಿಸಲಾಗುತ್ತದೆ. ಯಾವುದೇ ಪಟ್ಟಾ ಸ್ಥಳ ಅಥವಾ ಸ್ಥಳೀಯ ನಿವಾಸಿಗಳ ಸ್ಥಳಾಂತರ ಮಾಡಲಾಗುವುದಿಲ್ಲ. ಅವರಿಗೆ ಹೋಂ ಸ್ಟೇ ಅಭಿವೃದ್ಧಿ ಅಥವಾ ಅವರ ಪಟ್ಟಾ ಜಾಗದಲ್ಲೇ ಪೇ ಆ್ಯಂಡ್ ಪಾರ್ಕ್ ಮಾಡಿ ಹಣ ಸಂಪಾದನೆಯನ್ನೂ ಮಾಡಬಹುದಾಗಿದೆ. ಒಟ್ಟಾರೆಯಾಗಿ ಮೂಲ ನಿವಾಸಿಗಳ ಜೀವನಮಟ್ಟವನ್ನು ಈಗಿನ ದಿನವಹಿ ಕನಿಷ್ಟ 600ರೂ. ಗಳಿಂದ ಏರಿಕೆಯ ಗತಿಯನ್ನು ಈ ಯೋಜನೆಯಿಂದ ಕಂಡುಕೊಳ್ಳಬಹುದಾಗಿದೆ ಎಂದೂ ಜಿಲ್ಲಾಧಿಕಾರಿ ಪ್ರಿಯಾಂಕ ವಿವರಿಸಿದರು.

ಈಗಿರುವ ಬೀಚ್‍ನ ಸುಮಾರು 600 ಮೀಟರ್ ಪ್ರದೇಶದಲ್ಲಿ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆ ಅನುಷ್ಠಾನಿಸುವ ಸಲುವಾಗಿ ಶಾಸಕರು, ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯರು ಸೇರಿ ಆಗಸ್ಟ್ 26 ರಂದು ಪಡುಬಿದ್ರಿಯಲ್ಲಿ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಅನುಷ್ಠಾನವಾಗಲಿದ್ದು, ಸ್ಥಳೀಯರಿಗೆ ಯಾವುದೇ ತೊಂದೆರೆಯಿಲ್ಲದಂತೆ ನೈಸರ್ಗಿಕವಾಗಿ ಬೀಚ್ ಅಭಿವೃದ್ಧಿ ಮಾಡಲಾಗುತ್ತದೆ ಎಂದು ವಿವರಿಸಿದರು.

ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ,ಪರಿಸರ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳುತ್ತಾ ಎಂಡ್ ಪಾಯಿಂಟ್ ಅಭಿವೃದ್ಧಿಎಂಡ್ ಪಾಯಿಂಟ್ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಯ ಅನುದಾನವನ್ನು ಬಳಸಿಕೊಂಡು ಅಲ್ಲಿನ ಪರಿಸರ ಸೂಕ್ಷ್ಮತೆಯನ್ನು ಕಾಪಾಡಿಕೊಂಡು ಆ ಪ್ರದೇಶದಲ್ಲಿ ವಾಟರ್ ಸೋಟ್ರ್ಸ್(ಜಲ ಕ್ರೀಡೆ)ಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಬಳಸಿಕೊಳ್ಳುವುದಾಗಿ ಹೇಳಿದರು.

ಸೊಸೈಟಿ ಫಾರ್ ಇಂಟರ್‍ಗ್ರೇಟಡ್‍ನ ಸಂಜಯ್ ಜಲ್ಲಾ, ಯೋಜನೆಯ ಗುತ್ತಿಗೆದಾರ ಕಂಪೆನಿ ಗುರ್‍ಗಾಂವ್‍ನ ಎ ಟು ಝಡ್ ಇನ್‍ಪ್ರಾ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಮನೋಜ್ ತಿವಾರಿ, ಅಲೋಕ್ ಕೆ.ಗುಪ್ತಾ, ರಾಬಿನ್ ಚಾವ್ಲ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಕರಾವಳಿ ಪ್ರವಾಸೋಧ್ಯಮ ಅಸೋಸಿಯೇಶನ್‍ನ ಮನೋಹರ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಸಾಲ್ಯಾನ್, ಗಣೇಶ್ ಕೋಟ್ಯಾನ್, ಸುಕುಮಾರ ಶ್ರೀಯಾನ್,ಲೀಲಾಧರ ಸಾಲ್ಯಾನ್ ಉಪಸ್ಥಿತರಿದ್ದರು.