ಬ್ರಹ್ಮಸ್ಥಾನದ ಹಿರಿಮೆಯನ್ನು ಎತ್ತಿಹಿಡಿದಿರುವ ಪಿ.ಜಿ.ನಾರಾಯಣ ರಾಯರು: ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಬ್ರಹ್ಮಸ್ಥಾನದ ಪ್ರಥಮ ಪಾತ್ರಿಯಾಗಿ 49 ಸಂವತ್ಸರಗಳನ್ನು ಪೂರ್ತಿಗಳಿಸಿ ಇಂದು ಸಹಸ್ರ ಚಂದ್ರ ದರ್ಶನ ಶಾಂತಿಯನ್ನು ನಡೆಸಿ ಕೃತಾರ್ಥರಾದ ನಾರಾಯಣ ರಾಯರು ಬ್ರಹ್ಮಸ್ಥಾನದ ಹಿರಿಮೆಯನ್ನು ಸದಾ ಎತ್ತಿ ಹಿಡಿದವರು ಎಂದು ಉಡುಪಿ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.

ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ 49 ವರ್ಷಗಳಿಂದ ಪ್ರಥಮ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ.ಜಿ.ನಾರಾಯಣ ರಾಯರ ಸಹಸ್ರ ಚಂದ್ರ ದರ್ಶನ ಶಾಂತಿಯ ಶುಭಾವಸರದಲ್ಲಿ ಪಡುಬಿದ್ರಿ ಬೇಂಗ್ರೆಯ ಶ್ರೀ ವನದುರ್ಗಾ ಟ್ರಸ್ಟ್ ಮೂಲಕ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದರು.

ವೇದಮೂರ್ತಿ ಪಂಜ ಭಾಸ್ಕರ ಭಟ್ಟರು ಪ್ರಧಾನ ಅಭಿನಂದನಾ ಭಾಷಣಗೈದು ದೈವೀಕ ಪ್ರೇರಣೆಯ ಮೂಲಕ ಬ್ರಹ್ಮಸ್ಥಾನದ ಪಾತ್ರಿಗಳಾದ ನಾರಾಯಣ ರಾಯರ ವಾಕ್ ಸಿದ್ಧಿಯಿಂದಾಗಿ ಬ್ರಹ್ಮಸ್ಥಾನದಲ್ಲಿ ಅವರು ನುಡಿದವುಗಳೆಲ್ಲವೂ ಅಪ್ಪಣೆಗಳಾಗಿ ದೇಶ ವಿದೇಶಗಳಲ್ಲೂ ಅವರ ಪ್ರಸಾದ ಮಾತ್ರದಿಂದ ಉನ್ನತಿಯನ್ನು ಸಾಧಿಸಿದವರು, ನಷ್ಟ ದ್ರವ್ಯವನ್ನು ಪುನರಪಿ ಪಡೆದವರು ಅನೇಕ ಮಂದಿ ಇದ್ದಾರೆ. ಅವರೆಲ್ಲರೂ ಇಂದಿಗೂ ಬ್ರಹ್ಮಸ್ಥಾನವನ್ನು ಸಂದರ್ಶಿಸುತ್ತಿರುವಂತಾಗಿದೆ ಎಂದರು.

ಸಗ್ರಿ ಗೋಪಾಲಕೃಷ್ಣ ಸಾಮಗ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್‍ನ ಅಧ್ಯಕ್ಷ ಕೊರ್ನಾಯ ಶ್ರೀಪತಿ ರಾವ್, ನಿವೃತ್ತ ಪಾತ್ರಿ ಲಕ್ಷ್ಮೀನಾರಾಯಣ ರಾವ್, ಬ್ರಹ್ಮಸ್ಥಾನದ ಅರ್ಚಕ ರಾಮಕೃಷ್ಣ ಆಚಾರ್ಯ, ಪಡುಬಿದ್ರಿ ಶ್ರೀ ದೇಗುಲದ ಅರ್ಚಕ ವೈ. ಗುರುರಾಜ ಭಟ್, ಶಿಬರೂರು ವಾಸುದೇವ ಆಚಾರ್ಯ, ಪಡುಬಿದ್ರಿ ಬ್ರಹ್ಮಸ್ಥಾನದ ಎರಡನೇ ಪಾತ್ರಿ ಸುರೇಶ್ ರಾವ್,ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು ಮತ್ತಿತರರು ಉಪಸ್ಥಿತರಿದ್ದರು.

ವನದುರ್ಗಾ ಟ್ರಸ್ಟ್ ಸದಸ್ಯರಿಂದ ಸನ್ಮಾನವನ್ನು ಸ್ವೀಕರಿಸಿದ ಪಾತ್ರಿ ಪಿ. ಜಿ. ನಾರಾಯಣ ರಾವ್ ದಂಪತಿಯನ್ನು ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಬೆಳ್ಳಿಯ ಹರಿವಾಣದಲ್ಲಿ ಫಲಮಂತ್ರಾಕ್ಷತೆಗಳನ್ನಿತ್ತು ಹರಸಿದರು. ಕರ್ಣಾಟಕ ಬ್ಯಾಂಕ್ ವತಿಯಿಂದ ಚಯರ್‍ಮ್ಯಾನ್ ಜಯರಾಮ ಭಟ್ ಹಾಗೂ ಆಡಳಿತ ನಿರ್ದೇಶಕ ಮಹಾಬಲೇಶ್ವರ್ ಶ್ರೀ ನಾರಾಯಣ ರಾವ್ ದಂಪತಿಯನ್ನು ಇದೇ ವೇದಿಕೆಯಲ್ಲಿ ಸಮ್ಮಾನಿಸಿದರು.

ಶ್ರೀ ವನದುರ್ಗಾ ಟ್ರಸ್ಟ್‍ನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಸ್ವಾಗತಿಸಿದರು. ರಾಘವೇಂದ್ರ ರಾವ್ ಬೈಲ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.