ಬೊಲೆಂಜಿರ್ ಟ್ರೆಂಡ್ ಮುಕ್ತಾಯ ಹಂತದಲ್ಲಿ?

ಕಳೆದ 3 ದಿನಗಳಿಂದ ಹೆಜಮಾಡಿಯಿಂದ ಎರ್ಮಾಳು ಬಡಾವರೆಗೆ ಬೃಹತ್ ಮಟ್ಟದಲ್ಲಿ ಕ್ಯರಂಪಣಿ ಮೀನುಗಾರರಿಗೆ ದೊರೆತ ಬೊಲೆಂಜಿರ್ ಮೀನು ಶುಕ್ರವಾರ ಬಲು ಕಡಿಮೆ ಪ್ರಮಾಣದಲ್ಲಿ ದೊರಕಿದೆ.

ಹೆಜಮಾಡಿಯಲ್ಲಿ ಮಾತ್ರ ಬೆಳಿಗ್ಗೆ ಒಂದು ಕೈರಂಪಣಿಗೆ 3 ಟನ್‍ನಷ್ಟು ಬೊಲೆಂಜಿರ್(ಸಿಲ್ವರ್ ಫಿಶ್ ಅಥವಾ ವೈಟ್ ಸಾರ್ಡಿನ್) ಮೀನು ದೊರಕಿದ್ದು ,ಪಡುಬಿದ್ರಿ ಎರ್ಮಾಳಿನಲ್ಲಿ ಯಾವುದೇ ಬೊಲೆಂಜಿರ್ ದೊರಕಲಿಲ್ಲ.ಬಡಾ ಎರ್ಮಾಳಿನಲ್ಲಿ ಒಂದು ರಂಪಣಿಗೆ ಕೊಡ್ಡಾಯಿ ಮೀನು ಒಂದು ಟನ್‍ನಷ್ಟು ದೊರಕಿದೆ.

ಬುಧವಾರ ಹೆಜಮಾಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಕೈರಂಪಣಿಗೆ ಮಾತ್ರವಲ್ಲ ಮಾಟುಬಲೆಯರವರಿಗೂ ಸಾಕಷ್ಟು ಬೊಲೆಂಜಿರ್ ಸಿಕ್ಕಿದೆ.ಬಲೆಗೆ ಬಿದ್ದು ದೋಣಿಗೆ ತುಂಬಿಸಿ ಹೆಚ್ಚಾದ ಬೊಲೆಂಜಿರ್‍ಗಳನ್ನು ನೀರಿಗೆ ಬಿಸಾಡಿದ ಪರಿಣಾಮ ಅವೆಲ್ಲವೂ ಮರುದಿನ ಸತ್ತು ಕಡಲ ತೀರಕ್ಕೆ ಬಂದಿದ್ದು,ಮತ್ತೊಂದು ಗಾಳಿ ಸುದ್ದಿಗೆ ಗ್ರಾಸವಾಗಿತ್ತು.ಇದೇ ವೇಳೆ ಮಂಗಳೂರಿನ ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳೂ ಆಗಮಿಸಿ ಪರಿಶೀಲನೆ ನಡೆಸಿದ್ದರು.

ಆಮ್ಲಜನಕದ ಕೊರತೆಯೂ ಕಾರಣ?: ಈವರೆಗೆ ಕಂಡರಿಯದ ರೀತಿಯಲ್ಲಿ ಬೊಲೆಂಜಿರ್ ಮೀನ್ ಬಲೆಗೆ ಬೀಳಲು ಸಮುದ್ರ ನೀರಿನಲ್ಲಿ ಉಂಟಾದ ವ್ಯತ್ಯಯವೂ ಕಾರಣವಿರಬಹುದೆಂದು ಮೀನುಗಾರಿಕಾ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಮಳೆಗಾಲ ಮುಗಿದ ಬಳಿಕ ನೀರಿನ ಅಡಿಭಾಗದಲ್ಲಿ ಆಮ್ಲಜನಕದ ಕೊರತೆಯ ನೀರು(ಅಪ್‍ವೆಲ್ಲಿಂಗ್ ಸಿಸ್ಟಮ್) ಇರುತ್ತದೆ.ನೀರು ಬಿಸಿಯೇರುತ್ತಿದ್ದಂತೆ ಆಮ್ಲಜನಕ ರಹಿತ ನೀರು ನೀರಿನ ಮೇಲ್ಭಾಗಕ್ಕೆ ಬರುತ್ತದೆ.ಆ ಸಂದರ್ಭ ನೀರಿನಲ್ಲಿರುವ ಮತ್ಸ್ಯ ಸಂಕುಲ ಆಮ್ಲಜನಕ ಅರಸಿ ಸ್ಥಿತ್ಯಂತರಗೊಳ್ಳುತ್ತದೆ.ಅದೇ ಕಾರಣದಿಂದ ತೀರ ಸಮುದ್ರಕ್ಕೆ ಬೊಲೆಂಜಿರ್ ಮೀನು ಬಂದಿರಬಹುದು ಎಂದವರು ಹೇಳಿದ್ದಾರೆ.
ಬಂಗುಡೆಗಿಂತ ಬೂತಾಯಿ ದುಬಾರಿ:ಸೆಪ್ಟಂಬರ್ ಆರಂಭದೊಂದಿಗೆ ಮೀನುಗಾರಿಕೆ ಆರಂಭಗೊಂಡಿದ್ದು ಈ ಬಾರಿ ಸಾಕಷ್ಟು ವಿವಿಧ ಜಾತಿಯ ಮೀನುಗಳು ಸಿಕ್ಕಿವೆ.ಶುಕ್ರವಾರ ಮಲ್ಪೆಯಲ್ಲಿ ಸಾಕಷ್ಟು ಮೀನುಗಳು ಬಂದಿದ್ದು,ಅಪರೂಪಕ್ಕೆ ಉತ್ತಮ ಗಾತ್ರದ ಬೂತಾಯಿ ಮೀನು ಸಿಕ್ಕಿವೆ.ಅಲ್ಲಿ ಬಂಗುಡೆ ಮೀನಿಗೆ ಕೆಜಿಯೊಂದಕ್ಕೆ ರೂ.30 ಇದ್ದರೆ ಬೂತಾಯಿ ಮೀನಿಗೆ ಕೆಜಿಯೊಂದಕ್ಕೆ ರೂ.150 ಇತ್ತು.
ಈಗಲೂ ದೂರದೂರುಗಳಿಂದ ಬೊಲೆಂಜಿರ್ ಮೀನು ಕೊಂಡೊಯ್ಯಲು ಮತ್ಸ್ಯಪ್ರಿಯರು ಆಗಮಿಸುತ್ತಲೇ ಇದ್ದಾರೆ.ಆದರೆ ಸಾಕಷ್ಟು ಬೊಲೆಂಜಿರ್ ಲಭ್ಯವಿಲ್ಲದ ಕಾರಣ ಅವರೆಲ್ಲಾ ನಿರಾಶರಾಗಬೇಕಾಯಿತು.
ಫೋಟೋ:07ಎಚ್‍ಕೆ1
ಕ್ಯಾ: ಪಡುಬಿದ್ರಿ ಬೇಂಗ್ರೆ ಬಳಿ ಶುಕ್ರವಾರ ಕೈರಂಪಣಿಗೆ ತೀರಾ ಕಡಿಮೆ ಪ್ರಮಾಣದಲ್ಲಿ ಮೀನು ದೊರಕಿದ್ದು,ಕೇವಲ ಬೊಂಡಾಸ್ ಅಲ್ಪ ಪ್ರಮಾಣದಲ್ಲಿ ಸಿಕ್ಕಿವೆ.