ಬೆಳ್ಳಿಬೆಟ್ಟು: ಪುಸ್ತಕ ಬಿಡುಗಡೆ, ಗಣ್ಯರಿಗೆ ಸಮ್ಮಾನ

ಪಡುಬಿದ್ರಿ: ಯಕ್ಷಗಾನ ಕಲೆಗೆ ಉಡುಪಿಯೇ ಮೂಲ. ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಯಕ್ಷಗಾನವನ್ನು ಪರಿಚಯಿಸಿದ ಕೀರ್ತಿ ಆಚಾರ್ಯ ಮಧ್ವರಿಗೆ ಸಲ್ಲುತ್ತದೆ. ವೇಷ, ನೃತ್ಯ, ನಟನೆ, ಸಂಗೀತ, ಮಾತುಗಾರಿಕೆ-ಇವೆಲ್ಲವೂ ಇರುವ ಯಕ್ಷಗಾನ ಕಲೆಯಲ್ಲಿ ಪುರಾಣ ಕಥೆಗಳನ್ನು ನೋಡಿ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು. ಪೌರಾಣಿಕ ಕಥಾನಕ ಯಕ್ಷಗಾನ ಮೇಳಗಳ ಬೇಡಿಕೆಯ ಜನರಲ್ಲಿ ಧಾರ್ಮಿಕ ಭಾವನೆ ಇನ್ನೂ ಇದೆ ಎಂಬುದನ್ನು ತೋರಿಸುತ್ತದೆ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಅವರು ಜ.11ರಂದು ಮುದರಂಗಡಿ ಬೆಳ್ಳಿಬೆಟ್ಟುವಿನ ನ್ಯಾಯವಾದಿ ಪ್ರದೀಪ್ ಕುಮಾರ್ ವತಿಯಿಂದ ನಡೆದಿದ್ದ ಕಟೀಲು ಶ್ರೀ ದುರ್ಗಾಪರಮ್ವೇರೀ ದಶಾವತಾರ ಯಕ್ಷಗಾನ ಮಂಡಳಿ ಅವರ ದೇವಿ ಮಾಹಾತ್ಮೆಯ ವೇದಿಕೆಯಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ ಸಿದ್ಧಾಪುರ ಅವರ ಕುಂದಾಪ್ರ ಕನ್ನಡದ ನಾಟಕ ಕೃತಿ ಅಪ್ಪ ನಂಗ್ ಮದಿ ಮಾಡಿ' ಹಾಗೂ ಲೇಖನಗಳ ಸಂಗ್ರಹತೋರಣ’ವನ್ನು ಬಿಡುಗಡೆಗೊಳಿಸಿ, ಮಂಗಳೂರು, ಉಡುಪಿ ಪರಿಸರದ ಹಿರಿಯ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಹೆಸರಾಂತರಾದವರನ್ನು ಸಮ್ಮಾನಿಸಿ ಆಶೀರ್ವದಿಸಿದರು.

ಸಜ್ಜನರ ಗುರುತಿಸಿ ಸಮ್ಮಾನಿಸುವ ಸತ್ಸಂಪ್ರದಾಯವನ್ನು ನ್ಯಾಯವಾದಿ ಪ್ರದೀಪ್‍ಕುಮಾರ್ ಅನುಸರಿಸುತ್ತಿದ್ದಾರೆ. ಹಾಗೆಯೇ ಇಲ್ಲಿ ಬಂದವರೆಲ್ಲರೂ ಉಡುಪಿಯಿಂದಲೇ ಆರಂಭವಾದ ಯಕ್ಷಗಾನದ ಸವಿಯನ್ನೂ ಸವಿಯಬೇಕೆಂಬ ಇಚ್ಛೆಯೂ ಅವರದ್ದಾಗಿದೆ. ಯಕ್ಷಗಾನದ ಮೂಲಕ ಭಗವಂತನ ಚಿಂತನೆಯನ್ನು ನಾವು ನಮ್ಮ ಬದುಕಿನಲ್ಲಿ ಮಾಡೋಣ ಎಂದು ಶ್ರ್ರೀಪಾದರು ಹೇಳಿದರು.

ಗಣ್ಯರಿಗೆ ಸನ್ಮಾನ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಳ್ಳಾರಿಯ ಉದ್ಯಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವೇಮೂ ವಾಸುದೇವ ಆಸ್ರಣ್ಣ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ನಂದಿಕೂರು ಇಲ್ಲಿನ ಅರ್ಚಕ ವೇಮೂ ಮಧ್ವರಾಯ ಭಟ್, ಉಪನ್ಯಾಸಕ ಹರೀಶ್ ಬೆಳ್ಮಣ್ಣು, ದಂತವೈದ್ಯ ಡಾ.ವಿಜಯೇಂದ್ರ ವಸಂತ್, ಪಿಪಿಸಿ ಉಡುಪಿಯ ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಕಾಂತ ಸಿದ್ಧಾಪುರ, ಪಿಪಿಪಿಯು ಕಾಲೇಜು ಅದಮಾರಿನ ಉಪ ಪ್ರಾಂಶುಪಾಲೆ ಡಾ.ಒಲಿವಿಟಾ ಡಿಸೋಜ, ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ಮಂಗಳೂರಿನ ಉದ್ಯಮಿ ಅನಿಲ್ ಕುಮಾರ್ ಶೆಟ್ಟಿ, ಪಿಪಿಪಿಯು ಕಾಲೇಜು ಉಡುಪಿಯ ಸಿಬಂದಿ ಸುನೀತಾ ಅವರನ್ನು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಮ್ಮಾನಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕಟೀಲು, ನಂದಿಕೂರುಗಳ ಶೇಷ ವಸ್ತ್ರವನ್ನು ಅನುರಾಧಾ ಪ್ರದೀಪ್ ಅವರಿಗೆ ನೀಡಲಾಯಿತು. ವೇದಿಕೆಯಲ್ಲಿ ನ್ಯಾಯವಾದಿ ಪ್ರದೀಪ ಕುಮಾರ್ ಉಪಸ್ಥಿತರಿದ್ದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಫೋಟೋ: ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ಧಾಪುರ ಅವರ ಎರಡು ಕೃತಿಗಳನ್ನು ಅದಮಾರುಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.