ಬೆಳ್ಮಣ್ಣು ಟೋಲ್ ವಿರುದ್ಧ ಪಡುಬಿದ್ರಿಯಲ್ಲಿ ಪ್ರತಿಭಟನೆ

ಪಡುಬಿದ್ರಿ: ಕಾನೂನುಬಾಹಿರವಾಗಿ ಬೆಳ್ಮಣ್ಣು ಬಳಿ ಟೋಲ್ ಸಂಗ್ರಹಕ್ಕೆ ಅಣಿಯಾಗಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ನಿರ್ಣಾಯಕ ಹೋರಾಟ ನಡೆಯಲಿದ್ದು,ಟೋಲ್ ಸ್ಥಗಿತಗೊಳ್ಳುವವರೆಗೂ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದ್ದಾರೆ.

ಪಡುಬಿದ್ರಿ ಬಿಜೆಪಿ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಭಾನುವಾರ ಸಂಜೆ ಪಡುಬಿದ್ರಿ-ಕಾರ್ಕಳ ಕೂಡು ರಸ್ತೆಯಲ್ಲಿ ಬೆಳ್ಮಣ್ಣು ಟೋಲ್ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಡಾ.ವಿಎಸ್ ಆಚಾರ್ಯರವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಅಂದಿನ ರಾಜ್ಯ ಸಚಿವ ಸಿಎಮ್ ಉದಾಸಿಯವರು 67 ಕೋಟಿ ರೂ.ಬಿಡುಗಡೆಗೊಳಿಸಿ ಪಡುಬಿದ್ರಿ-ಕಾರ್ಕಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು.ಕಾಮಗಾರಿ ಮುಗಿದು 4 ವರ್ಷ ಕಳೆದ ಬಳಿಕ ದಿವಾಳಿಯೆದ್ದಿರುವ ರಾಜ್ಯ ಸರಕಾರ ಅಸಂವಿಧಾನಿಕವಾಗಿ ಗ್ರಾಮೀಣ ಭಾಗವಾದ ಬೆಳ್ಮಣ್ಣಿನಲ್ಲಿ ಟೋಲ್ ಸಂಗ್ರಹಕ್ಕೆ ಹುನ್ನಾರ ನಡೆಸಿದೆ.ಇಲ್ಲಿ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಲಾರೆವು.ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಟೋಲ್ ನಿರ್ಧಾರ ಬದಲಿಸುವಂತೆ ಒತ್ತಡ ಹೇರುವುದಾಗಿ ಅವರು ಹೇಳಿದರು.

ಬಿಜೆಪಿ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ,ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ್ಯ ಹೆದ್ದಾರಿಗೆ ಟೋಲ್ ಸಂಗ್ರಹಕ್ಕೆ ಮುಂದಡಿಯಿಟ್ಟಿರುವುದು ರಾಜ್ಯ ಸರಕಾರದ ದಿವಾಳಿತನದ ದೋತ್ಯಕ.ಇದು ಟೋಲ್ ಗೇಟ್ ಅಲ್ಲ.ಮಾಫಿಯಾ ಗೇಟ್.ರಫೆಲ್ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸಿಗರು ಕಾನೂನುಬಾಹಿರ ಬೆಳ್ಮಣ್ಣು ಟೋಲ್ ವಿರುದ್ಧ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ,ಗ್ರಾಮೀಣ ಭಾಗವಾದ ಬೆಳ್ಮಣ್ಣಿನಲ್ಲಿ ಟೋಲ್ ಸಂಗ್ರಹ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.ಪಕ್ಷ ಬೇಧ ಮರೆತು ಹೋರಾಟದ ಅನಿವಾರ್ಯತೆ ಇದೆ.ಅಲ್ಲಿ ಯಾವುದೇ ಕಾಮಗಾರಿಗೂ ಅವಕಾಶ ನೀಡಲಾರೆವು ಎಂದು ಎಚ್ಚರಿಸಿದರು.
ಜಿಪಂ ಸದಸ್ಯೆ ರೇಷ್ಮಾ ಯು.ಶೆಟ್ಟಿ,ಉದಯ ಶೆಟ್ಟಿ ಮಾತನಾಡಿದರು.

ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಪ್ರಸ್ತಾವಿಸಿ ಸ್ವಾಗತಿಸಿದರು.
ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯರಾದ ನೀತಾ ಗುರುರಾಜ್ ಮತ್ತು ಕೇಶವ ಮೊೈಲಿ,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಬಜರಂಗದಳ ಬಿಜೆಪಿ ಪ್ರಖಂಡದ ಸಂಚಾಲಕ ರಾಜೇಶ್ ಕೋಟ್ಯಾನ್,ರಮಾನಾಥ ಪೈ,ರಮಾಕಾಂತ ದೇವಾಡಿಗ,ಶ್ರೀನಿವಾಸ ಶರ್ಮ,ರವಿ ಶೆಟ್ಟಿ,ಲೀಲಾಧರ ಸಾಲ್ಯಾನ್,ಮನೋಜ್ ದೇವಾಡಿಗ,ಬಾಲಕೃಷ್ಣ ದೇವಾಡಿಗ,ಅಜಿತ್ ಶೆಟ್ಟಿ,ಮಹೇಶ್ ಉಚ್ಚಿಲ,ಪ್ರಸಾದ್ ಪಡುಬಿದ್ರಿ,ಲೋಹಿತಾಕ್ಷ ಸುವರ್ಣ,ಸುಧಾಕರ ಕರ್ಕೇರ, ಪಾಂಡುರಂಗ ಕರ್ಕೇರ,ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.