ಬಾಡಿಗೆ ಬಾಕಿಯ ಪಂಚಾಯಿತಿ ಅಂಗಡಿ ಕೋಣೆಗಳಿಗೆ ಬೀಗ ಜಡಿದ ಆಡಳಿತ – ಸಾರ್ವಜನಿಕ ಶ್ಲಾಘನೆಗೆ ಪಾತ್ರವಾದ ಪಂಚಾಯಿತಿ ಕ್ರಮ

ಪಡುಬಿದ್ರಿ; ಸುಮಾರು ಒಂದೂವರೆ ವರ್ಷಗಳಿಂದ ಬಾಡಿಗೆ ಬಾಕಿಯಿರಿಸಿದ ಮಾರ್ಕೆಟ್ ರಸ್ತೆಯ ಪಂಚಾಯಿತಿ ಅಂಗಡಿ ಕೋಣೆಗಳಿಗೆ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರು ಬೀಗ ಜಡಿದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

ಏಲಂಗಳಿಂದ ಪಡೆದ ನಾಲ್ಕು ಅಂಗಡಿ ಕೋಣೆಗಳ ಮಾಲೀಕರು ತಾವು ಏಲಂನಲ್ಲಿ ವಹಿಸಿಕೊಂಡಿರುವಂದಿನಿಂದಲೂ ಸರಿಯಾಗಿ ಬಾಡಿಗೆ ಮೊತ್ತವನ್ನು ಪಾವತಿಸದೇ ಬಾಕಿ ಇರಿಸಿಕೊಂಡಿದ

್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ ಸ್ವಾಮಿ ಕೆರಿಮಠರವರು ಅಧ್ಯಕ್ಷೆ ದಮಯಂತಿ ವಿ.ಅಮೀನ್ ಮತ್ತು ಗ್ರಾ.ಪಂ. ಸದಸ್ಯರ ಸಮಕ್ಷಮ ನ.25ರಂದು ಬೀಗ ಜಡಿದಿದ್ದಾರೆ.

ಪಿಡಿಒ ಅವರು ಬಾಡಿಗೆ ಬಾಕಿ ಇರಿಸಿದ ಅಂಗಡಿಗಳಿಗೆ ಹೋಗುವುದನ್ನು ಗಮನಿಸಿದ್ದ ಅಂಗಡಿ ಕೋಣೆ 47ರ ಬಾಡಿಗೆದಾರ ವ್ಯಕ್ತಿಯು ಮೊದಲೇ ಬೀಗ ಹಾಕಿ ತೆರಳಿದ್ದನ್ನು ಗಮನಿಸಿದ ಅಧಿಕಾರಿ ಆತನ ಬೀಗವನ್ನು ತುಂಡರಿಸಿ ಹೊಸ ಬೀಗವನ್ನು ಹಾಕಿ ಪಂಚಾಯಿತಿಗೆ ವಾಪಾಸಾಗಿದ್ದರು. ಆದರೆ ಆ ವ್ಯಕ್ತಿ ಮಂಗಳವಾರ ಪಂಚಾಯಿತಿಗೆ ಆಗಮಿಸಿ ಬಾಕಿ ರೂ.50000 ಗಳನ್ನು ಪಾವತಿಸಿ ಬೀಗದ ಕೀಲಿಯನ್ನು ಪಡೆದು ತಮ್ಮ ವ್ಯವಹಾರ ಮಳಿಗೆಯನ್ನು ಮರು ತೆರೆದಿದ್ದಾರೆ.

ಆದರೆ ಪಂಚಾಯಿತಿಗೆ ರೂ.2,36,400 ಬಾಕಿ ಇರಿಸಿದ ಸೀಯಾಳ ವ್ಯಾಪಾರದ ವ್ಯಕ್ತಿ, ರೂ.3,98,400 ಬಾಡಿಗೆ ಬಾಕಿ ಇರಿಸಿಕೊಂಡ ಜ್ಯೂಸ್ ವ್ಯಾಪಾರದ ಮಹಿಳೆಯೋರ್ವರು ಸೇರಿದಂತೆ ರೂ.3,07,200 ಬಾಕಿ ಇರಿಸಿರುವ ಮೊಬೈಲ್ ಅಂಗಡಿಯ ಸಹಿತ ಮೂರು ಅಂಗಡಿಗಳನ್ನು ಇದುವರೆಗೂ ತೆರೆಯಲಾಗಿಲ್ಲ. ಈ ಅಂಗಡಿಗಳನ್ನು ಸುಮಾರು ಒಂದೂವರೆ ವರ್ಷದ ಹಿಂದೆ ಮಾಸಿಕ ಬಾಡಿಗೆ ರೂ.20,100, ರೂ.26,300 ಮತ್ತು ರೂ.18,800 ಗಳ ಅತ್ಯಧಿಕ ಬಿಡ್‍ಗೆ ಬಾಡಿಗೆದಾರರು ವಹಿಸಿಕೊಂಡಿದ್ದರು.
ಪಡುಬಿದ್ರಿಯಂತಹ ಸಣ್ಣ ಪಟ್ಟಣದಲ್ಲಿ ಇಂತಹ ಬಾಡಿಗೆ ಮೌಲ್ಯಗಳಿಗೆ ಈ ಅಂಗಡಿಗಳ ಏಲಂ ಪ್ರಕ್ರಿಯೆ ನಡೆದಿರುವುದೂ ಅಂದು ಸುದ್ದಿಯಾಗಿತ್ತು. ಇಂದು ಅದೇ ಅಂಗಡಿಗಳು ಬಾಡಿಗೆ ಪಾವತಿಸದೆಯೂ ಸುದ್ದಿಯಾಗಿದ್ದು ಪಂಚಾಯಿತಿ ಈ ಕ್ರಮವು ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿದೆ.

ಈಗಲೂ ಇದನ್ನು ಮುಂದುವರಿಸಿದ್ದರೆ ಫೆಬ್ರವರಿಗೆ ಪಂಚಾಯಿತಿ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳುವ ನಿರೀಕ್ಷೆಯಿದ್ದು ಮುಂದಿನ ಮೇ ತಿಂಗಳಾಂತ್ಯದವರೆಗೂ ನಿಂತ ನೀರಾಗುತ್ತಿತ್ತು. ಪಂಚಾಯಿತಿ ವರಮಾನವೂ ಕುಂಠಿತಗೊಳ್ಳುತ್ತಿತ್ತು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಸಾರ್ವಜನಿಕರೊಬ್ಬರು ಉದ್ಗರಿಸಿದ್ದರು.