ಬಸ್ಸಿಗೆ ಕಾರು ಢಿಕ್ಕಿ: ಯುವತಿ ಸಾವು-ಮೂವರಿಗೆ ಗಾಯ

ಪಡುಬಿದ್ರಿ ಮೂಲ್ಕಿಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೆಲೆನೋ ಕಾರೊಂದು ಡಿವೈಡರ್ ದಾಟಿ ಮತ್ತೊಂದು ಬದಿಯ ರಸ್ತೆ ಚಲಿಸಿ ಎದುರಿನಿಂದ ಬರುತ್ತಿದ್ದ ಎಕ್ಸ್‍ಪ್ರೆಸ್ ಬಸ್ಸಿಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವತಿಯೊಬ್ಬಳು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಇಲ್ಲಿನ ಠಾಣಾ ವ್ಯಾಪ್ತಿಯ ಬೀಡಿನಕೆರೆ ಹೆದಾರಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ಮಂಗಳೂರು ಕುಪ್ಪೆಪದವು ಮೂಲದ ಯುವತಿ ನಿಕ್ಷಿತಾ(21) ತಲೆಗೆ ಮತ್ತು ಹೊಟ್ಟೆಗೆ ತೀವ್ರ ಗಾಯಗೊಂಡು ಮೃತಪಟ್ಟ ಯುವತಿ.
ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ವಾಮಂಜೂರು ನಿವಾಸಿ ಗುರುಕಿರಣ್(27) ತ್ರೀವ ಗಾಯಗಳೊಂದಿಗೆ ಜೀವನ್ಮರಣ ಸ್ಥಿತಿಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲ್ಕಿ ಕಿಲ್ಪಾಡಿ ಗೇರುಕಟ್ಟೆ ಅಮೃತಾನಂದ ನಗರದ ರಮಾನಂದ ಎಂಬವರ ಪುತ್ರ ಧನುಷ್(23), ಅಲ್ಪಸ್ವಲ್ಪ ಗಾಯಗೊಂಡು ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೂಲ್ಕಿ ಬಪ್ಪನಾಡಿನ ಆಲಿತೋಟ ನಿವಾಸಿ ಸುರೇಖಾ ಎಂಬವರ ಮಗಳು ಮೆಡಲಿನ್ ಪ. ಪೂ. ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿನಿ ಹರ್ಷಿಣಿ(17) ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಅತೀವ ವೇಗದಿಂದ ಮೂಲ್ಕಿ ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದು ಪಡುಬಿದ್ರಿ ಬೀಡು ದಾಟಿ ಎದುರು ಬಂದಾಗ ಹೆದ್ದಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲಿಂದ ಬೆಳೆದು ನಿಂತಿದ್ದ ಗಿಡಗಳ ಮಧ್ಯದಿಂದ ಹಾರಿ ಉಡುಪಿ ಕಡೆಯಿಂದ ಬರುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯಾದ ರಭಸಕ್ಕೆ ಕಾರು ಹಾಗೂ ಬಸ್ಸುಗಳ ಮುಂಭಾಗ ಜಖಂಗೊಂಡಿದೆ. ಬಸಲ್ಲಿ ಇದ್ದವರಾರಿಗೂ ಗಾಯಗಳಾಗಿಲ್ಲ. ಕಾರು ಚಂಗನೆ ಹಾರಿ ಬಂದಿದ್ದರಿಂದ ಕೊನೆಯ ಕ್ಷಣದವರೆಗೂ ಬಸ್ ಚಾಲಕನ ಅರಿವಿಗೆ ಬಂದಿರಲಿಲ್ಲ. ಈ ಅಪಘಾತದಿಂದಾಗಿ ಅರ್ಧ ಗಂಟೆಗಳ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿತ್ತು. ನಿಕ್ಷಿತಾಳ ದೇಹವನ್ನು ಹೊರತೆಗೆಯಲು ಸಾರ್ವಜನಿಕರು ಸುಮಾರು ಅರ್ಧ ತಾಸು ಶ್ರಮಿಸಿದ್ದರು. ಆಪತ್ಬಾಂಧವ ಆಸಿಫ್ ತೀವ್ರ ಗಾಯಗೊಂಡ ಗಾಯಾಳುಗಳನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಿದರು.

ಪಡುಬಿದ್ರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ತನಿಖೆ ಮುಂದುವರಿದಿದೆ.