ಬಪ್ಪನಾಡು: ಸ್ವರ್ಣ ಪಲ್ಲಕ್ಕಿ ಮುಹೂರ್ತದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಲ್ಕಿ: ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಅ.19 ವಿಜಯದಶಮಿಯಂದು ಸ್ವರ್ಣ ಪಲ್ಲಕ್ಕಿ ಸಮರ್ಪಣೆಯ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು,ಭಾನುವಾರ ದೇವಳದ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಮಿತಿಯ ಅಧ್ಯಕ್ಷ ಎಮ್.ನಾರಾಯಣ ಶೆಟ್ಟಿ,ಶ್ರೀ ದೇವಿಯ ಪ್ರೇರಣೆಯಂತೆ ಸ್ವರ್ಣ ಪಲ್ಲಕ್ಕಿ ಸಮರ್ಪಣೆಗೆ ಸಂಕಲ್ಪಿಸಲಾಗಿದೆ.9 ಮಾಗಣೆಯ ಭಕ್ತರ ಪ್ರತಿಯೊಬ್ಬರ ಸಹಕಾರದ ಅಗತ್ಯವಿದ್ದು,ಸರ್ವರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.

ಸುಮಾರು 15 ಕೆಜಿ ಚಿನ್ನ ಉಪಯೋಗಿಸಿ ಸ್ವರ್ಣ ಪಲ್ಲಕ್ಕಿ ನಿರ್ಮಾಣವಾಗಲಿದ್ದು,ಸುಮಾರು ರೂ.5 ಕೋಟಿ ಖರ್ಚು ಅಗಲಿದೆ ಎಂದವರು ಮಾಹಿತಿ ನೀಡಿದರು.
ವೇದಮೂರ್ತಿ ವಾದಿರಾಜ ಉಪಾಧ್ಯಾಯ ಮಾತನಾಡಿ,ಜನ್ಮಭೂಮಿಯ ಸಾಧನೆಯೇ ಜೀವನದ ಮೌಲ್ಯಗಳನ್ನು ಬಿಂಬಿಸುತ್ತದೆ.ಭಾವನಾತ್ಮಕವಾಗಿ ಶ್ರೀ ದೇವಿಗೆ ಸ್ವರ್ಣ ಪಲ್ಲಕ್ಕಿ ಸಮರ್ಪಿಸುವ ಮೂಲಕ ನಮ್ಮ ಜನ್ಮ ಸಾರ್ಥಕಗೊಳಿಸೋಣ ಎಂದರು.
ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಮಾತನಾಡಿ,ಭಕ್ತರ ಅಭೀಷ್ಟೆಯಂತೆ ಸ್ವರ್ಣ ಪಲ್ಲಕ್ಕಿ ಸಮರ್ಪಣೆಗೆ ಕಾಲ ಕೂಡಿ ಬಂದಿದೆ ಎಂದರು.
ದೇವಳದ ಅನುವಂಶಿಕ ಮೊಕ್ತೇಸರ ಮತ್ತು ಆಡಳಿತ ಸಮಿತಿಯ ಅಧ್ಯಕ್ಷ ಎನ್.ಎಸ್.ಮನೋಹರ ಶೆಟ್ಟಿ ಮಾತನಾಡಿ,ಪ್ರತಿಯೊಬ್ಬರ ಒಗ್ಗೂಡುವಿಕೆಯಿಂದ ಶುಭ ಕಾರ್ಯ ನಿರ್ವಿಘ್ನವಾಗಿ ನೆರವೇರಲಿದೆ ಎಂದು ಹೇಳಿ,ಗ್ರಾಮಸ್ಥರ ಮತ್ತು ಸ್ಥಳೀಯಾಡಳಿತದ ಸಹಕಾರದೊಂದಿಗೆ ದೇವಳದ ಸುತ್ತ ರಥಬೀದಿ ಸಂಕಲ್ಪಕ್ಕೆ ಚಾಲನೆ ನೀಡಲಾಗಿದೆ ಎಂದರು.
ಸಮಿತಿಯ ಕಾರ್ಯದರ್ಶಿ ಸುನಿಲ್ ಆಳ್ವ ಮಾತನಾಡಿ,ವಿಜಯದಶಮಿಯ ಶುಭ ದಿನದಂದು ಬೆಳಿಗ್ಗೆ 9 ಗಂಟೆಗೆ ಸ್ವರ್ಣ ಪಲ್ಲಕ್ಕಿ ಸಮರ್ಪಣೆಯ ಮುಹೂರ್ತಕ್ಕೆ ಗ್ರಾಮದ ಸರ್ವ ಸಮಾಜದ 11 ಸುಮಂಗಲಿಯರು ದೀಪ ಪ್ರಜ್ವಲನಗೊಳಿಸುವ ಮೂಲಕ ಚಾಲನೆ ನೀಡಲಿದ್ದಾರೆಂದರು.

ವಿಜಯದಶಮಿಯಂದು ಸ್ವರ್ಣ ಪಲ್ಲಕ್ಕಿಗೆ ಚಿನ್ನ ನೀಡುವವರಿಗಾಗಿ ದೇವಳದಲ್ಲಿ ಕೌಂಟರ್ ತೆರಯಲಾಗುವುದು.ಹಳೇ ಚಿನ್ನ ಮತ್ತು ಹೊಸ ಚಿನ್ನಗಳೆರಡನ್ನೂ ಸ್ವೀಕರಿಸಲಾಗುವುದು.ಇದೇ ವೇಳೆ ದೇವಳದಲ್ಲಿಯೇ ಚಿನ್ನ ಖರೀದಿಸುವವರಿಗಾಗಿ ಚಿನ್ನಾಭರಣ ಮಳಿಗೆ ಕೌಂಟರ್ ತೆರೆಯಲಾಗುವುದು.ನಗದು ಸ್ವೀಕಾರಕ್ಕೂ ಅವಕಾಶವಿದೆ ಎಂದರು.

ದೇವಳದ ಬ್ರಹ್ಮಕಲಶೋತ್ಸವ ಸಂದರ್ಭ ಸಮಿತಿಯು ಆಶಿಸಿದ 9 ಅಭಿವೃದ್ಧಿ ಕಾರ್ಯಗಳ ಪೈಕಿ 8 ಕಾರ್ಯಗಳು ಬ್ರಹ್ಮಕಲಶದ ಮುನ್ನ ನಿರ್ವಹಿಸಲಾಗಿತ್ತು.ಈ ಸಂದರ್ಭ ಸಮಿತಿಯು 1.30 ಕೋಟಿ ರೂ.ಗಳು ಉಳಿತಾಯವಾಗಿದ್ದು,ಇದೀಗ ಸಮಿತಿಯ 9ನೇ ಕಾರ್ಯವಾದ ಸ್ವರ್ಣಪಲ್ಲಕ್ಕಿ ಸಮರ್ಪಣೆಗೆ ಬಳಸಲಾಗುವುದು ಎಂದವರು ಮಾಹಿತಿ ನೀಡಿದರು.
ಸ್ವರ್ಣ ಪಲ್ಲಕ್ಕಿ ಸಮರ್ಪಣೆಗೆ ಎಲ್ಲರ ಸಹಕಾರದ ಅಗತ್ಯವಿದ್ದು,ಹಿಂದಿನ 32 ಗ್ರಾಮ ಸಮಿತಿಗಳನ್ನು ಉಳಿಸಿಕೊಳ್ಳಲಾಗಿದೆ.ಪ್ರತಿಯೊಂದು ಗ್ರಾಮ ಸಮಿತಿಗಳು ಕಾರ್ಯತತ್ಪರರಾಗಿ ಸ್ವರ್ಣ ಪಲ್ಲಕ್ಕಿ ಸಮರ್ಪಣೆಗೆ ಸಹಕಾರ ನೀಡಬೇಕಾಗಿದೆ.ಈ ಹಿನ್ನೆಲೆಯಲ್ಲಿ ಸಮಿತಿಗಳು ತಿಳಿಸಿದ ದಿನದಂದು ಆಯಾ ಗ್ರಾಮಗಳಲ್ಲಿ ಸಭೆ ನಡೆಸಲಾಗುವುದು ಎಂದು ಆಳ್ವ ತಿಳಿಸಿದರು.

ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ,ಕೃಷ್ಣ ಆರ್.ಶೆಟ್ಟಿ,ಹರಿಶ್ಚಂದ್ರ ಪಿ.ಸಾಲ್ಯಾನ್,ಶಿಮಂತೂರು ಉದಯ ಶೆಟ್ಟಿ,ಸಂದೇಶ್ ಶೆಟ್ಟಿ ಅಗ್ರಜ,ಡಾ.ಅಚ್ಯುತ ಕುಡ್ವ,ರಾಧಾ ಹರಿಕೃಷ್ಣ ಭಟ್,ಎಚ್.ವಿ.ಕೋಟ್ಯಾನ್ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಶ್ರೀ ದುರ್ಗಾ ಸೇವಾ ಯುವಕ ವೃಂದದ ವತಿಯಿಂದ 50 ಗ್ರಾಂ ಚಿನ್ನ,ಸಂದೇರ್ಶ ಶೆಟ್ಟಿ ಅಗ್ರಜರವರಿಂದ 48 ಗ್ರಾಂ ಚಿನ್ನ,ಡಾ.ಅಚ್ಯುತ ಕುಡ್ವರಿಂದ ಒಂದು ಪವನ್ ಚಿನ್ನ,ಲಲಿತಾಂಬಾ ಮಾತೃ ಮಂಡಳಿಯಿಂದ 5 ಪವನ್ ಚಿನ್ನ,ಮೂಲ್ಕಿ ಕಾರು ಚಾಲಕ ಮಾಲಕ ಸಂಘದಿಂದ ಒಂದು ಪವನ್ ಚಿನ್ನ,ಎಚ್.ವಿ.ಕೋಟ್ಯಾನ್‍ರಿಂದ ತಮ್ಮಲ್ಲಿದ್ದ ಒಂದು ಚಿನ್ನದ ಸರ ಮತ್ತು ಹಳೆಯಂಗಡಿಯ ಮಹಿಳೆಯೊಬ್ಬರಿಂದ ರೂ.40ಸಾವಿರ ನಗದಿನೊಂದಿಗೆ 5 ಪವನ್ ಚಿನ್ನ ನೀಡುವ ವಾಗ್ದಾನ ನೀಡಿದರು.
ಸಮಿತಿಯ ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ ಮತ್ತು ಹರಿಶ್ಚಂದ್ರ ವಿ.ಕೋಟ್ಯಾನ್ ವೇದಿಕೆಯಲ್ಲಿದ್ದರು.ಸುನಿಲ್ ಆಳ್ವ ಸ್ವಾಗತಿಸಿ ಕಾರ್ಯಕ್ರರಮ ನಿರ್ವಹಿಸಿದರು.ಸಮಿತಿಯ ಸಂಚಾಲಕ ಸಂತೋಷ್‍ಕುಮಾರ್ ಹೆಗ್ಡೆ ವಂದಿಸಿದರು.