ಬಪ್ಪನಾಡು ಶ್ರೀ ದುರ್ಗೆಯ ಶಯನ ವೈಭವ

ಎಚ್ಕೆ ಹೆಜ್ಮಾಡಿ,ಮೂಲ್ಕಿ

ಬುಧವಾರ ಮುಂಜಾನೆ ಬಪ್ಪನಾಡು ದೇವಳದ ಗರ್ಭಗುಡಿಯ ಬಾಗಿಲನ್ನು ಅರ್ಚಕರು ತೆರೆಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಹಸ್ರಾರು ಭಕ್ತರ ಮೈಮನಗಳಲ್ಲಿ ರೋಮಾಂಚನ.ಇಡೀ ದೇಗುಲದ ಪರಿಸರದಲ್ಲಿ ಮಲ್ಲಿಗೆ ಹೂವಿನ ರಾಶಿಯ ಘಮ ಘಮ ಸುವಾಸನೆ.ಭಕ್ತರು ಪ್ರೀತಿಯಿಂದ ಸಮರ್ಪಿಸಿದ ಮಲ್ಲಿಗೆಯ ಮಂಟಪದಲ್ಲಿ ಸುಖ ನಿದ್ದೆ ಅನುಭವಿಸಿದ ಶ್ರೀ ದುರ್ಗೆ ,ನಸುಕಿನ ಹೊಂಗಿರಣದ ಬೆಳಕಿನಲ್ಲಿ ಎದ್ದು ಕೂರುತ್ತಿದ್ದಂತೆ ಆ ಅಂದವನ್ನು ನೋಡಲೆಂದೇ ಕಾದಿದ್ದ ಭಕ್ತ ಸಂದೋಹಕ್ಕೆ ಮಲ್ಲಿಗೆಯ ಸುವಾಸನೆಯ ಘಮ ಘಮ ಭಕ್ತಿಯ ಸಿಂಚನದ ಸಂಪ್ರೋಕ್ಷಣೆ.ಮಂಗಳಾರತಿಯ ಬೆಳಕಲ್ಲಿ,ಮಲ್ಲಿಗೆಯ ರಾಶಿಯ ಹೊಳಪಲ್ಲಿ ಶ್ರೀ ದೇವಿಯ ಶಯನ ವೈಭವಕ್ಕೆ ಮಂಗಳ.

ಇದು ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವಾರ್ಷಿಕ ಜಾತ್ರಾ ಸಂದರ್ಭ ನಡೆಯುವ ಶಯನೋತ್ಸವದ ಒಂದು ಸಣ್ಣ ಝಲಕ್.

ಕರಾವಳಿಯ ದೇಗುಲಗಳ ಪೈಕಿ ಬಪ್ಪನಾಡು ದೇವಿಯ ಶಯನ ಮಹೋತ್ಸವಕ್ಕೆ ವಿಶೇಷ ಸ್ಥಾನವಿದೆ.ಇಲ್ಲಿಗೆ ಬರುವ ಮಲ್ಲಿಗೆ ರಾಶಿಯೇ ಇದಕ್ಕೆ ಸಾಕ್ಷಿ.ಈ ವರ್ಷ ಮಂಗಳವಾರ ರಾತ್ರಿ ಶಯನ ಶಯನ ಸೇವೆ ನಡೆದಿದ್ದು,ಇದಕ್ಕಾಗಿ ಅವಿಭಜಿತ ದಕ ಜಿಲ್ಲೆಯಲ್ಲದೆ ದೇಶವಿದೇಶಗಳಿಂದ ಸುಮಾರು ಒಂದೂವರೆ ಲಕ್ಷ ಚೆಂಡು ಮಲ್ಲಗೆ ಹೂವು ಬಂದಿದೆ.

ಜಾತ್ರಾ ಮಹೋತ್ಸವದ ಹಗಲು ರಥೋತ್ಸವದ ದಿನ ಶಯನೋತ್ಸವ ನಡೆಯುತ್ತದೆ.ಅಂದು ಮಧ್ಯಾಹ್ನ ಹಗಲು ತೇರು ವಿಜ್ರಂಭಣೆಯಿಂದ ನಡೆದಿದ್ದು,ಮುಂಜಾನೆಯಿಂದಲೇ ಭಕ್ತರು ಮಲ್ಲಗೆಗಳನ್ನು ತಂದು ಸಮರ್ಪಿಸಿದ್ದಾರೆ.ತಡ ರಾತ್ರಿವರೆಗೂ ಭಕ್ತರು ಮಲ್ಲಿಗೆಗಳನ್ನು ತಂದಪ್ಪಿಸುತ್ತಿದ್ದು,ಅವನ್ನೆಲ್ಲಾ ಸ್ವಯಂಸೇವಕರು ದೇವಳದ ಒಳಾಂಗಳದ ಪ್ರಾಂಗಣದಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುತ್ತಾರೆ.ಬಳಿಕ ರಾತ್ರಿ ಪೂಜೆಯ ಬಳಿಕ ಮಲ್ಲಿಗೆಯನ್ನು ಗರ್ಭಗುಡಿಯ ಒಳಕ್ಕೊಯ್ದು ದೇವಿಯ ಸುತ್ತಲೂ ಜೋಡಿಸಲಾಗುತ್ತದೆ.ಇಡೀ ದೇವಿಯ ಆವಾಸಸ್ಥಾನ ಮಲ್ಲಿಗೆಯಿಂದ ತುಂಬಿ ಬಿಡುತ್ತದೆ.ಈ ಮಲ್ಲಿಗೆಯ ತಲ್ಪದಲ್ಲಿ ಶ್ರೀದೇವಿ ಸುಖ ನಿದ್ದೆಗೆ ಜಾರುತ್ತಾಳೆ ಎಂಬುದು ಭಕ್ತರ ನಂಬಿಕೆ.ಶಯನ ಸೇವೆಯ ಬಳಿಕ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.

ಬುಧವಾರ ಬೆಳಿಗ್ಗೆ ಅರ್ಚಕರು ಬಂದು ಬಾಗಿಲು ತೆರೆಯುವವರೆಗೆ ಅದನ್ನು ಯಾರೂ ತೆರೆಯುವಂತಿಲ್ಲ.ಆ ಕ್ಷಣಕ್ಕಾಗಿ ಭಾವುಕ ಭಕ್ತರು ಕಾದಿರುತ್ತಾರೆ.ಇಡೀ ರಾತ್ರಿ ಮುಚ್ಚಲಾದ ಗರ್ಭಗುಡಿಯೊಳಗೆ ರಾಶಿ ರಾಶಿ ಮಲ್ಲಗೆಯು ಮುಂಜಾನೆ ಹೊತ್ತಿಗೆ ಸಂಪೂರ್ಣ ಅರಳಿ ಸುವಾಸನೆಭರಿತವಾಗಿತ್ತು.ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ ಆ ಸುವಾಸನೆ ಇಡೀ ದೇಗುಲವನ್ನು ಆವರಿಸಿ ಭಕ್ತ ಸಾಗರದ ಮೈಮನ ರೋಮಾಂಚನಗೊಳಿಸಿತು.ಬಳಿಕ ಮಲ್ಲಿಗೆ ಸಮರ್ಪಿಸಿದ ಭಕ್ತರೆಲ್ಲರಿಗೂ ಮಲ್ಲಿಗೆ ಹೂವುಗಳನ್ನು ಪ್ರಸಾದ ರೂಪದಲ್ಲಿ ವ್ಯವಸ್ಥಿತವಾಗಿ ಹಂಚಲಾಗುತ್ತದೆ.ಮೂಲ್ಕಿ ಹಾಗೂ ಆಸುಪಾಸಿನಲ್ಲಿ ಬುಧವಾರ ಹೆಂಗಳೆಯರು ಮುಡಿ ತುಂಬಾ ಮಲ್ಲಿಗೆ ಹೂವು ಧರಿಸಿ ಆನಂದಪಟ್ಟರು.

ಈ ವಿಶೇಷ ಶಯನ ಸೇವೆಗೆಂದೇ ಭಕ್ತರು ಭಕ್ತಿ ಗೌರವದಿಂದ ಮಲ್ಲಿಗೆ ಅರ್ಪಿಸಿ ಕೃತಾರ್ಥರಾಗುತ್ತಾರೆ.ಬಪ್ಪನಾಡು ದೇಗುಲದ ಜಾತ್ರೆ ಈ ಕಾರಣದಿಂದಾಗಿಯೇ ವಿಶಿಷ್ಠವಾಗಿ ನಿಲ್ಲುತ್ತದೆ.ಇಲ್ಲಿನ ಬ್ರಹ್ಮರಥವೂ ಬೃಹತ್ ಗಾತ್ರದ್ದಾಗಿದ್ದು,ಕರಾವಳಿಯ ಎರಡನೇ ಬೃಹತ್ ರಥವೆಂಬ ಹೆಗ್ಗಳಿಕೆ ಹೊಂದಿದೆ.ರಾತ್ರಿ ರಥೋತ್ಸವ,ಸಸಿಹಿತ್ಲು ಶ್ರೀ ಭಗವತಿ ಮತ್ತು ಬಪ್ಪನಾಡು ಶ್ರೀದೇವಿಯರ ಭೇಟಿ ಸಹಿತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಸಾಂಗವಾಗಿ ನೆರವೇರಿತು.ಮುಂಜಾನೆ ಹೊತ್ತಿಗೆ ಪಕ್ಕದ ಚಂದ್ರಶ್ಯಾನುಭಾಗ ಕುದ್ರುವಿಗೆ ಶ್ರೀ ದುರ್ಗೆಯು ದೋಣಿಯಲ್ಲಿ ಜಳಕಕ್ಕೆ ತೆರಳುವ ಸನ್ನಿವೇಶವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.