ಬಪ್ಪನಾಡು ಪತಂಜಲಿ ಯೋಗ ಸಮಿತಿಯಿಂದ ಮಹಿಳಾ ದಿನಾಚರಣೆ

ಮೂಲ್ಕಿ: ಎಲ್ಲರೂ ಒಗ್ಗಟ್ಟಾಗಿ ಜೀವಿಸುವ ಪ್ರಕ್ರಿಯೆ ಅತ್ಯುತ್ತಮ ಹಾಗೂ ಅವಶ್ಯಕವಾಗಿದೆ.ಒಗ್ಗಟ್ಟಿನ ಮೂಲಕ ಅಸಾಧ್ಯವಾದುದನ್ನೂ ಸಾಧಿಸಬಹುದಾಗಿದೆ ಎಂದು ಯೋಗಗುರು ರಾಘವೇಂದ್ರ ರಾವ್ ಹೇಳಿದರು.

ಶ್ರೀ ಕ್ಷೇತ್ರ ಬಪ್ಪನಾಡುವಿನ ಶ್ರೀ ಅನ್ನಪೂರ್ಣೇಶ್ವರೀ ಸಭಾಗೃಹದಲ್ಲಿ ಭಾನುವಾರ ಮುಂಜಾನೆ ಬಪ್ಪನಾಡು ಶ್ರೀ ಪತಂಜಲಿ ಯೋಗ ಸಮಿತಿಯ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದ ಜಂಜಾಟದಲ್ಲಿ ಮುಕ್ತಿ ಪಡೆಯಲು ನಿತ್ಯ ಯೋಗ ಅವಶ್ಯಕ.ಈ ಮೂಲಕ ಅರೋಗ್ಯದೊಂದಿಗೆ ಮನಸ್ಸಿಗೆ ನೆಮ್ಮದಿ ದೊರೆಯಲು ಸಾಧ್ಯವಿದೆ ಎಂದವರು ಹೇಳಿದರು.

ಸನ್ಮಾನ: ಇತ್ತೀಚೆಗೆ ಮಂಗಳೂರು ವಿವಿಯಿಂದ ಪಿಎಚ್‍ಡಿ ಡಾಕ್ಟರೇಟ್ ಪಡೆದ ಯೋಗ ಸಮಿತಿಯ ಸದಸ್ಯೆ ಡಾ.ಸುಪ್ರಭಾ ಹರೀಶ್‍ರವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಉತ್ತರಿಸಿದ ಡಾ.ಸುಪ್ರಭಾ ಹರೀಶ್,ಸಂಶೋಧನೆ ಸಂದರ್ಭ ಹಲವರ ಸಹಕಾರದಿಂದ ಯಶಸ್ಸು ಸಾಧ್ಯವಾಗಿದೆ.ಮಹಿಳೆ ಮನಸ್ಸು ಮಾಡಿದರೆ ಯಾವುದೇ ಸಮಸ್ಯೆಯನ್ನು ಸುಲಲಿತವಾಗಿ ಬಗೆಹರಿಸಲು ಸಾಧ್ಯವಿದೆ.ಮಹಿಳೆಯರು ಹೆಚ್ಚು ಅಧ್ಯಯನಕ್ಕೆ ಒತ್ತು ನೀಡಬೇಕು ಎಂದರು.

ಪತಂಜಲಿ ಯೋಗ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ರೇಖಾ ಮೇಘರಾಜ್ ಸಮಾರಂಭದ ಅಧ್ಯಕ್ಷೆ ವಹಿಸಿ ಶುಭ ಹಾರೈಸಿದರು.ಯೋಗ ಸಮಿತಿಯ ಅಧ್ಯಕ್ಷ ಶಾಂತಾರಾಮ್,ಬಪ್ಪನಾಡು ಶ್ರೀ ದುರ್ಗಾ ಸೇವಾ ಯುವಕ ವೃಂದದ ಅಧ್ಯಕ್ಷ ಶಿವ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ಪತಂಜಲಿ ಯೋಗ ಸಮಿತಿಯ ವಿವಿಧ ಕಾರ್ಯಕ್ರಮಗಳಿಗೆ ಸಹಕರಿಸಿದ ಸದಸ್ಯರನ್ನು ಗೌರವಿಸಲಾಯಿತು.
ಶಾಂತಾರಾಮ್ ಸ್ವಾಗತಿಸಿದರು.ಕುಸುಮಾ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ರವೀಂದ್ರ ಶೆಟ್ಟಿ ವಂದಿಸಿದರು.
ಇದೇ ಸಂದರ್ಭ ಯೋಗ ಸಮಿತಿಯ ಸದಸ್ಯೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಅಕ್ಷತಾ ಸಚಿನ್ ನಡೆಸಿದರು.ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.