ಬಪ್ಪನಾಡು ಜಾತ್ರೆಗೆ ಪೂರಕ ಸಾರ್ವಜನಿಕ ಮತ್ಸ್ಯ ಬೇಟೆ

– ಎಚ್ಕೆ ಹೆಜ್ಮಾಡಿ,ಮೂಲ್ಕಿ

ಇತಿಹಾಸ ಪ್ರಸಿದ್ದ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಬ ಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಜಾತ್ರಾ ಮಹೋತ್ಸವವು ಕ್ಷೇತ್ರದಲ್ಲಿ ಆಗಮ ವೈದಿಕ ಸಂಪ್ರದಾಯಗಳಿಂದ ಆಚರಿಸಲ್ಪಟ್ಟರೆ ಮಾಗಣೆಯ ಗ್ರಾಮೀಣ ಭಾಗಗಳಲ್ಲಿ ವಿವಿಧ ರೀತಿಗಳಲ್ಲಿ ಜನರು ಆಚರಿಸಿಕೊಂಡುಬಂದಿರುವ ಸಂಪ್ರದಾಯಗಳಲ್ಲಿ ಮತ್ಸ್ಯ ಬೇಟೆಯೂ ಒಂದು.
ಮೂಲ್ಕಿ ನಪಂ ವ್ಯಾಪ್ತಿಯ ಚಿತ್ರಾಪುವಿನ ಮರ್ಕುಂಜ ಕಲ್ಸಂಕ ಎಂಬಲ್ಲಿ ಶಾಂಭವಿ ಹೊಳೆಗುಂಟ ಇರುವ ಶಂಕರ ನಾಯ್ಕನ ಕೊಳದಲ್ಲಿ ಪುರಾತನ ಕಾಲದಿಂದ ಮತ್ಸ್ಯ ಬೇಟೆ ಸಂಪ್ರದಾಯ ಅನಾದಿಯಿಂದಲೂ ನಡೆಯುತ್ತಾ ಬಂದಿದೆ. ಶಾಂಭವಿ ನದಿಯ ಹಿನ್ನೀರು ಪ್ರದೇಶದಲ್ಲಿರುವ ಈ ಕೊಳ ನದಿಗೆ ಸಂಪರ್ಕ ಹೊಂದಿದೆ. ಮಳೆಗಾಲ ಮುಗಿಯುವ ಸಂದರ್ಭ ಈ ಕೊಳಕ್ಕೆ ಹಲಗೆ ಹಾಕಿ ನೀರು ತಡೆ ಮಾಡಲಾಗುತ್ತದೆ. ಮಳೆಗಾಲದಲ್ಲಿ ನೀರಿನೊಂದಿಗೆ ಬಂದ ಮೀನು ಮರಿಗಳು ದೊಡ್ಡದಾಗಿ ಬೆಳೆದು ಜಾತ್ರೆಯ ಸಮಯ ಮೀನು ಹಿಡಿಯುವಾಗ ಸಿಗುತ್ತದೆ.

ಜಾತ್ರೆಯಂದು ನದಿ ಅಥವಾ ಸಮುದ್ರದ ಮೀನಿಗೆ ಬಹಳ ಡಿಮ್ಯಾಂಡ್. ಕೆಲವರು ಮನೆಯಲ್ಲಿ ಬಲೆ ಇರಿಸಿ ಈ ದಿನ ಮೀನು ಹಿಡಿದು ಮನೆಗೆ ಕೊಂಡುಹೋಗುತ್ತಾರೆ. ಕೆಲವರು ಹಿಡಿದು ಮಾರುವುದೂ ಇದೆ.

ಮಹಿಳೆಯರು ಅಧಿಕ: ಈ ಬಾರಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಮುಂಜಾನೆ ಆಗಮಿಸಿದ್ದಾರೆ. ಸಣ್ಣ ಬಲೆ ಅಥವಾ ಗೊರ್ತಲೆ ಬಳಸಿ ಮೀನು ಹಿಡಿಯುತ್ತಿರುವುದು ಕಂಡುಬಂದಿತ್ತು.ಬಪ್ಪನಾಡು ಜಾತ್ರೆಗೆಂದು ಪರವೂರುಗಳಲ್ಲಿದ್ದವರು ಊರಿಗೆ ಬಂದು ಮತ್ಸ್ಯ ಬೇಟೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಪುರುಷ ಮಹಿಳೆ ಬೇಧವಿಲ್ಲದೆ ವಿವಿಧ ರೀತಿಯ ಬಲೆ,ಗಾಳ ಬಳಸಿ ಮೀನು ಹಿಡಿದರು.

ಮೀನುಗಳು: ಹೆಚ್ಚಾಗಿ ಸಿಗಡಿ, ಮಾಲ,ಪೈಯೆ,ಇರ್ಪೆ ಸಣ್ಣ ಮೀನುಗಳು ಅಧಿಕ ಸಂಖ್ಯೆಯಲ್ಲಿ ಲಭ್ಯವಿದೆ.

ಕೆರೆ ಕಲುಷಿತ: ಹಿಂದೆ ಕೆರೆಗೆ ಯಾವುದೇ ಕೊಳಕು ನೀರು ಸೇರದಂತೆ ಎಚ್ಚರ ವಹಿಸುತ್ತಿದ್ದರು. ಇದೀಗ ಕೆರೆಯ ಬಗ್ಗೆ ಗಮನ ಹರಿಸುವವರಿಲ್ಲ. ಹೆಚ್ಚಿನ ವಸತಿ ಸಂಕೀರ್ಣಗಳು ಹಾಗೂ ಮನೆಯವರು ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡುವ ಕಾರಣ ಕಲುಷಿತ ನೀರು ಕೆರೆಗೆ ಸೇರಿ ತುರಿಕೆಗೆ ಕಾರಣವಾಗುತ್ತದೆ.ಈ ಬಾರಿ ನೀರಿಗಿಳಿದ ಅನೇಕರು ತುರಿಕೆಯ ಬಗ್ಗೆ ಗಮನ ಸೆಳೆದರು.

ವಿರಳ ಮೀನು: ಹಿಂದೆ ಜಾತ್ರೆಯ ಸಂದರ್ಭ ಮಾತ್ರ ಮೀನು ಹಿಡಿಯಲು ಬಳಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬೇರೆ ಸಮಯವೂ ಬಂದು ಬಲೆ ಬೀಸುವ ಕಾರಣ ಹೆಚ್ಚು ಮೀನು ಲಭ್ಯವಿಲ್ಲ ಎಂದು ಮೀನುಗಾರರ ಅಭಿಪ್ರಾಯ.ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ತೀರಾ ಕಡಿಮೆ ಮೀನುಗಳು ದೊರಕಿವೆ.

ಹೊಳೆ ಮೀನು ಬಲು ರುಚಿ: ಜಾತ್ರೆ ಸಮಯದಲ್ಲಿ ಮಾತ್ರ ಈ ಕೊಳದಲ್ಲಿ ಮೀನು ಹಿಡಿಯುತ್ತಾರೆ.ಜಾತ್ರೆ ಸಂದರ್ಭ ಇಲ್ಲಿ ದೊರಕುವ ಮೀನುಗಳು ಬಲು ರುಚಿ ಎಂದು ಸ್ಥಳೀಯರು ಹೇಳುತ್ತಾರೆ.ಹಿರಿಯರು ಇಂದಿಗೂ ಇದು ದೇವರ ಪ್ರಸಾದವೆಂದೇ ತಿಳಿಯುತ್ತಾರೆ.