ಬದುಕನ್ನು ಸುಂದರಗೊಳಿಸುವ ಎಲ್ಲಾ ಸಂಗತಿಗಳು ಸಾಹಿತ್ಯ-ಬೆಳಗೋಡು ರಮೇಶ್ ಭಟ್

ಪಡುಬಿದ್ರಿ ಜೀವನದಲ್ಲಿ “ಸೀರಿಯಸ್” ಎಂಬುದನ್ನು ಬಿಟ್ಟುಬಿಡಿ. ಪುಸ್ತಕಗಳನ್ನು ಓದಿದರೆ ಬದುಕುವ ಛಲ ಬರುತ್ತೆ. ಬದುಕನ್ನು ಸುಂದರಗೊಳಿಸುವ ಎಲ್ಲಾ ಸಂಗತಿಗಳು ಸಾಹಿತ್ಯ ಎಂದು ಹಿರಿಯ ಸಾಹಿತಿ ಬೆಳಗೋಡು ರಮೇಶ್ ಭಟ್ ಹೇಳಿದರು.
ಪಡುಬಿದ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಕಾಪು ತಾಲೂಕು ಘಟಕ, ಮಣೂರು ಗೀತಾನಂದ ಫೌಂಡೇಶನ್, ಉಡುಪಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಸಂಪದ-2019 ತಿಂಗಳ ಸಡಗರ- ನವೆಂಬರ್ ತಿಂಗಳ ಪೂರ್ತಿ ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕøತಿ ಜನಪದಕ್ಕೆ ಸಂಬಂಧಿಸಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಪ್ರೇರಣೆಗೆ ಪೂರಕವಾಗಿ ನಡೆದ “ಶಾಲೆಯತ್ತ ಸಾಹಿತ್ಯ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯವಿದೆ. ನಿಮ್ಮೊಳಗೆ ಏನಿದೆ. ಅದೇ ನೀವು ನಾಳೆ ಎಲ್ಲಿಗೆ ಹೋಗಬೇಕೆಂಬುದನ್ನು ನಿರ್ಧರಿಸುತ್ತದೆ. ನಿಮ್ಮ ಒಳಗನ್ನು ಬದಲಿಸಲು ಪ್ರಯತ್ನಪಡಿ. ನಿಮ್ಮ ಗುರಿ ನಿರ್ಧಾರವಾಗುತ್ತದೆ ಎಂದರು. ಸೋತಾಗ ಕುಗ್ಗಬಾರದು. ಸೋಲು,ವೈಫಲ್ಯ ವಿವಿಧ ಕಾರಣಗಳಿಗಾಗಿ ಬರುತ್ತದೆ. ಜೀವನದಲ್ಲಿ ಸಾಧಿಸಲಾಗದ್ದು ಯಾವುದೂ ಇಲ್ಲ. ಇಡೀ ಜಗತ್ತು ಬದಲಾಗುತ್ತಿದೆ. ನಾವು ಸ್ವಯಂ ಬದಲಾಗಲೇ ಬೇಕು. ಹಿರಿಯರ ನಂಬಿಕೆಗಳನ್ನು ಗೌರವಿಸಿ. ಅದಕ್ಕೆ ಅವಮಾನ ಮಾಡದಿರಿ. ಅದೇ ರೀತಿ ನಿಮ್ಮ ಸ್ನೇಹಿತರ ಆಯ್ಕೆ ಅತ್ಯುತ್ತಮವಾಗಿರಲಿ. ಅದು ನಿಮ್ಮ ಮುಂದಿನ ಬದುಕನ್ನು ನಿರ್ಧರಿಸುತ್ತದೆ ಎಂದವರು ಹೇಳಿದರು.
ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪಡುಬಿದ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲಾ ದಿನಗಳಲ್ಲೇ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ನೆಲ, ಜಲ, ಭಾಷೆಯ ಉಳಿವಿಗೆ ಎಳೆಯರು ಕಾರಣೀಭೂತರಾಗಬೇಕು ಎಂದರು.

ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವಿವಿಧ ಸಾಹಿತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಭಾಷಣ, ಕನ್ನಡ ಗೀತೆ ವಾಚಿಸಿದರು. ಸಾಹಿತಿ ಪ್ರಜ್ಞಾ ಮಾರ್ಪಳ್ಳಿ ಕನ್ನಡ ಗೀತೆ ಹೇಳಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಕಾಲೇಜು ಪ್ರಿನ್ಸಿಪಾಲ್ ಯಶೋದಾ ಮುಖ್ಯ ಅತಿಥಿಗಳಾಗಿದ್ದರು.

ಕಸಾಪ ಕಾಪು ತಾಲೂಕು ಘಟಕದ ಸದಸ್ಯ ಉದಯಕುಮಾರ್ ಶೆಟ್ಟಿ ಇನ್ನ ಸ್ವಾಗತಿಸಿದರು. ಜಿಲ್ಲಾ ಸಮಿತಿಯ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಸಿದರು. ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ ವಂದಿಸಿದರು. ಸದಸ್ಯ ಹರೀಶ್ ಕಟ್ಪಾಡಿ ಪರಿಚಯಿಸಿದರು.