ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಅರಿವು ಅತ್ಯಗತ್ಯ-ನ್ಯಾಯಾಧೀಶ ಟಿ.ವೆಂಕಟೇಶ್ ನಾಯ್ಕ್

ಪಡುಬಿದ್ರಿ: ದೇಶದ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಬಗ್ಗೆ ತಿಳಿದಿರಬೇಕು.ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೂ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ವೆಂಕಟೇಶ್ ನಾಯ್ಕ್ ಹೇಳಿದರು.

ಅವರು ಪಡುಬಿದ್ರಿ ಸುಜ್ಲಾನ್ ಕಾಲನಿಯ ಸಭಾಭವನದಲ್ಲಿ ರಾಷ್ಟ್ರೀಯ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ನಡೆದ ಯುವಜನತೆ, ಸಾಮಾಜಿಕ ಜಾಲತಾಣಗಳು ಮತ್ತು ಕಾನೂನು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರತಿಯೋರ್ವ ನಾಗರಿಕನೂ ಮೂಲಭೂತ ಅವಶ್ಯಕತೆಗಳೇನೆಂದು ತಿಳಿಯಬೇಕು. ಮಗು ಹುಟ್ಟಿದ ಕೂಡಲೇ ಕಾನೂನಿನ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಮನುಷ್ಯ ಪ್ರತಿ ಹಂತದಲ್ಲೂ ಕಾನೂನು ಜಾರಿಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು, ವ್ಯಾಪಕವಾಗಿರುವುದರಿಂದ ಸಾಕಷ್ಟು ಸಮಸ್ಯೆಗಳು ಉಲ್ಭಣಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯಲ್ಲೂ ದುರುಪಯೋಗ ಮಾಡಬಾರದು. ಒಂದು ವೇಳೆ ದುರ್ಬಳಕೆ ಮಾಡಿದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದವರು ಅಭಿಪ್ರಾಯಿಸಿದರು.

ಎನ್‍ಎಸ್‍ಸಿಡಿಎಫ್ ಅಧ್ಯಕ್ಷ ಗಂಗಾಧರ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಕೆಎಸ್‍ಎಸ್‍ಎಪಿ ಅಧ್ಯಕ್ಷ ರಾಣಿ ಪುಷ್ಪಲತಾ ದೇವಿ, ಸುಜ್ಲಾನ್ ಕಾಲೊನಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮನಾಥ್ ಕೆ.ಆರ್. ಉಪಸ್ಥಿತರಿದ್ದರು.

ಪತ್ರಕರ್ತ ಜಿತೇಂದ್ರ ಕುಂದೇಶ್ವರ್, ಪಿಟಿಐ ವರದಿಗಾರರು ಜಯರಾಮ್ ಪ್ರಧಾನ ಉಪನ್ಯಾಸ ನೀಡಿದರು. ಆಕಾಶವಾಣಿ ನಿರೂಪಕಿ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪಡುಬಿದ್ರಿ, ಹೆಜಮಾಡಿ, ಪೊಲಿಪು, ಎರ್ಮಾಳುವಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.