ಪ್ರತಿಭೆಗಳನ್ನು ಗುರುತಿಸಬೇಕೆಂಬುದು ಎನ್‍ಪಿ ಶೆಟ್ಟಿಯವರ ಬಯಕೆಯಾಗಿತ್ತು-ಕೆಎಲ್ ಕುಂಡಂತಾಯ

ಮೂಲ್ಕಿ: ಸರಳ ಸುಂದರ ಚಿಂತನೆಯ ಎನ್.ಪಿ.ಶೆಟ್ಟಿಯವರು ನಿರಂತರವಾಗಿ ಯುವ ಪ್ರತಿಭೆಗಳನ್ನು ಗುರುತಿಸಬೇಕೆಂದು ಅಪೇಕ್ಷೆ ಹೊಂದಿದ್ದರು.ಬರಹಗಾರರೆಲ್ಲರೂ ಅವರನ್ನು ನೆನಪಿಸಿಕೊಳ್ಳಲೇಬೇಕು.ಅಕ್ಷರ ರೂಪದಲ್ಲಿ ಅವರು ಇನ್ನೂ ಜೀವಂತವಿದ್ದಾರೆ ಎಂದು ಜನಪದ ವಿದ್ವಾಂಸ ಹಾಗೂ ಪತ್ರಕರ್ತ ಕೆ.ಎಲ್.ಕುಂಡಂತಾಯ ಹೇಳಿದರು.

ಮೂಲ್ಕಿಯ ಹೋಟೆಲ್ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಮೂಲ್ಕಿ ಶಾಂಭವಿ ಸಾಹಿತ್ಯ ಕಲಾ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ಬಹುಮುಖ ಸಾಹಿತಿ,ಛಂದಸ್ಸು ಪರಿಣಿತ,ಯೋಗ ಸಾಧಕ ಎನ್.ಪಿ.ಶೆಟ್ಟಿಯವರ ವರ್ಷದ ನೆನಪು “ನಾರಾಯಣ ಸ್ಮರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭ ಎನ್.ಪಿ.ಶೆಟ್ಟಿಯವರು ರಚಿಸಿದ ಲೇಖನಗಳ ಸಂಕಲನ “ನಾರಾಯಣ ದರ್ಶನ” ಕೃತಿಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿ,ಅಹಂ ಇಲ್ಲದೆ ದುಡಿದ ವ್ಯಕ್ತಿ ಎನ್.ಪಿ.ಶೆಟ್ಟಿಯವರು ಸಾಹಿತ್ಯ ಲೋಕದ ಮಿನುಗು ತಾರೆ.ಮುಂದಿನ ಪೀಳಿಗೆಗೆ ಅವರ ನೆನಪು ಉಳಿಯುವಂತಾಗಲು ಅವರ ಹೆಸರಲ್ಲಿ ಪ್ರಶಸ್ತಿ ನೀಡಬೇಕು ಎಂದರು.

ಜನಪದ ಸಾಹಿತಿ ಹಾಗೂ ಚಿಂತಕ ಡಾ.ವೈ.ಎನ್.ಶೆಟ್ಟಿ ಮಾತನಾಡಿ ಯುವ ಸಾಹಿತಿಗಳಿಗೆ ಅವರು ಪ್ರೇರಣೆ ಎಂದರು.

ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ ಮಾತನಾಡಿ ತಿಳಿ ಹೊಯಿಗೆಯ ಮೇಲೆ ಹರಿಯುವ ತಿಳಿ ನೀರಿನಂತೆ ಅವರು ಬದುಕಿದ್ದರು ಎಂದರು.

ಕಿನ್ನಿಗೋಳಿ ಯುಗಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ,ಹೊಸ ಅಂಗಣ ಪತ್ರಿಕೆಯ ಸಂಪಾದಕ ಡಾ.ಹರಿಶ್ಚಂದ್ರ ಸಾಲ್ಯಾನ್,ಮೂಲ್ಕಿ ಮಯೂರಿ ಫೌಂಡೇಶನ್ ಸಂಸ್ಥಾಪಕ ಜಯ ಶೆಟ್ಟಿ,ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಎಮ್.ನಾರಾಯಣ,ಎನ್.ಪಿ.ಶೆಟ್ಟಿಯವರ ಪುತ್ರ ಅವಿನಾಶ್ ಎನ್.ಶೆಟ್ಟಿ,ಮುಂಬೈ ಸಾಹಿತಿ ಶಿಮಂತೂರು ಚಂದ್ರಹಾಸ ಸುವರ್ಣ,ಮಾತಾ ಅಮೃತಾನಂದಮಯಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ,ಜಯ ಮುದ್ದು ಶೆಟ್ಟಿ,ಡಾ.ಜಗದೀಶ್ ಮತ್ತಿತರರು ನುಡಿನಮನ ಸಲ್ಲಿಸಿದರು.

ರಂಗ ಕರ್ಮಿ ಹಾಗೂ ಪತ್ರಕರ್ತ ಪರಮಾನಂದ ಸಾಲ್ಯಾನ್ ಸಂಸ್ಮರಣೆಗೈದರು.ವೈ.ಎನ್.ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.ಶಾಂಭವಿ ಸಾಹಿತ್ಯ ಕಲಾ ವೇದಿಕೆಯ ಅಧ್ಯಕ್ಷ ರಾಜಾ ಪತ್ರಾವೋ ಸ್ವಾಗತಿಸಿದರು.ರವಿಚಂದ್ರ ವಂದಿಸಿದರು.

ಈ ಸಂದರ್ಭ ಎನ್.ಪಿ.ಶೆಟ್ಟಿ ಮತ್ತು ಪುಲ್ವಾಮಾ ಹುತಾತ್ಮ ಯೋಧರಿಗಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.