ಪಾರ್ವತೀ ಪರಮೇಶ್ವರ ಮತ್ತು ಗಣಪತಿ ದೇವರನ್ನು ಜತೆ ಜತೆ ಪೂಜಿಸಿದಾಗ ಉತ್ತಮ ಫಲಿತಾಂಶ-ಅದಮಾರು ಶ್ರೀ ವಿಶ್ವ ಪ್ರಿಯ ತೀರ್ಥರು

ಪಡುಬಿದ್ರಿ: ಮನಸ್ಸು ಹಾಗೂ ಮಾತುಗಳು ಸದಾ ಜತೆ, ಜತೆಯಾಗಿರಲು ಪಾರ್ವತಿ, ಪರಮೇಶ್ವರೇ ಕಾರಣರಾಗಿರುತ್ತಾರೆ. ಪಡುಬಿದ್ರಿಯ ಮಹಾರುದ್ರ ಸನ್ನಿಧಾನದಲ್ಲಿ ಪಾರ್ವತಿ ಹಾಗೂ ರುದ್ರದೇವರನ್ನು ಜತೆಗೆ ವಿಘ್ನ ನಿವಾರಕ ಮಹಾಗಣಪತಿಯನ್ನು ಪೂಜಿಸಿದರೆ ನಮ್ಮ ಭಿನ್ನಾಭಿಪ್ರಾಯಗಳು ನಾಶವಾಗಿ ಅತ್ಯುತ್ತಮ ಫಲಿತಾಂಶ ಸನ್ನಿಹಿತವಾಗಿತ್ತದೆ ಎಂದು ಉಡುಪಿ ಶ್ರೀ ಅದಮಾರು ಪಠಾಧೀಶ ಹಾಗೂ ಅದಮಾರು ಶಿಕ್ಷಣ ಮಂಡಳಿಯ ಗೌರವಾಧ್ಯಕ್ಷ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಅವರು ಜ. 4ರ ಶನಿವಾರ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟಿರುವ ಪಡುಬಿದ್ರಿಯ ಎಸ್‍ಬಿವಿಪಿ ಹಿ.ಪ್ರಾ.ಶಾಲಾ ಶತಮಾನೋತ್ಸವ ಹಾಗೂ ಗಣಪತಿ ಪ್ರೌಢಶಾಲೆಯ ಸುವರ್ಣ ಮಹೋತ್ಸವಗಳ ಶತಮಾನ-ಶತಖಂಡ ಸಂಭ್ರಮದ ಸಂದರ್ಭದಲ್ಲಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಹಮ್ಮಿಕೊಂಡ ಮಹಾವಿಷ್ಣು ಯಾಗ ಮತ್ತು ಧನ್ವಂತರಿ ಯಾಗದ ಪೂರ್ಣಾಹುತಿಯ ಸಂದರ್ಭ ಭಾಗವಹಿಸಿ ಆಶೀರ್ವಚಿಸಿದರು.

ಸಂಭ್ರಮದ ಶೋಭಾಯಾತ್ರೆ: ಸಮಾರಂಭಕ್ಕೆ ಮುನ್ನ ಶ್ರೀಗಳನ್ನು ಪಡುಬಿದ್ರಿಯ ಸಹಕಾರಿ ಸದನದಿಂದ ಸಂಭ್ರಮದ ಶೋಭಾಯಾತ್ರೆಯಲ್ಲಿ ವಿದ್ಯಾಲಯ, ದೇವಾಲಯ ಸಮುಚ್ಚಯದತ್ತ ಕರೆತರಲಾಯಿತು. ಮೆರವಣಿಗೆಯಲ್ಲಿ ಎಳೆಯರ ಭಜನಾ ತಂಡ, ಪೂರ್ಣ ಕುಂಭಗಳನ್ನು ಹಿಡಿದ ಲಲನೆಯರು, ಸಮವಸ್ತ್ರಧಾರಿಗಳಾಗಿ ಶಾಲಾ ಹಳೆವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದಿದ್ದ ಧಾರ್ಮಿಕ ವಿಧಿಗಳ ನೇತೃತ್ವವನ್ನು ಶ್ರೀಧರ ಆಚಾರ್ಯ ವಹಿಸಿದ್ದು, ಪುರೋಹಿತರಾಗಿ ಸಮಾಜದಲ್ಲಿ ಹೆಸರು ಗಳಿಸಿರುವ ಹಳೆ ವಿದ್ಯಾರ್ಥಿ ಸಮೂಹವೇ ಮಹಾವಿಷ್ಣುಯಾಗ, ಧನ್ವಂತರೀ ಹೋಮಗಳನ್ನು ಉಚಿತವಾಗಿ ನೆರವೇರಿಸಿದೆ.

ಶ್ರೀ ದೇಗುಲದ ವತಿಯಿಂದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರನ್ನು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಮತ್ತು ಆಡಳಿತ ಮೊಕ್ತೇಸರರುಗಳಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಮತ್ತು ಪೇಟೆಮನೆ ಪಿ. ವಿಶ್ವನಾಥ ಹೆಗ್ಡೆ ಸ್ವಾಗತಿಸಿದರು. ದೇವಳದ ವತಿಯಿಂದ ಶ್ರೀಪಾದರ ಪಾದಪೂಜೆಗಳನ್ನು ನೆರವೇರಿಸಲಾಯಿತು.

ಈ ಸಂದರ್ಭ ಉಭಯ ಶಾಲಾ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್, ಶ್ರೀ ಕೃಷ್ಣಾಪುರ ಮಠ ಪಡುಬಿದ್ರಿ ಶಾಖೆಯ ವೇದಮೂರ್ತಿ ಶ್ರೀನಿವಾಸ ಉಪಾಧ್ಯಾಯ, ನಿವೃತ್ತ ಮುಖ್ಯೋಪಾಧ್ಯಾಯ ಅನಂತ ಪಟ್ಟಾಭಿ ರಾವ್, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರಾಜಮೋಹನ ಹೆಗ್ಡೆ, ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ, ಕೋಶಾಧಿಕಾರಿ ಅನಂತ ಪದ್ಮನಾಭ ರಾವ್, ಮುಂಬಯಿ ಸಮಿತಿಯ ಪೇಟೆಮನೆ ಪ್ರಕಾಶ್ ಶೆಟ್ಟಿ, ಪಿ.ಎಸ್.ನಟರಾಜ ರಾವ್, ಲಕ್ಷ್ಮೀನಾರಾಯಣ ರಾವ್ ಬೆಂಗಳೂರು, `ಭೀಮ’ ಪ್ರಬಂಧಕ ಗುರುಪ್ರಸಾದ ರಾವ್, ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಬಾಲಕೃಷ್ಣ ರಾವ್, ವಿಷ್ಣುಮೂರ್ತಿ ಆಚಾರ್ಯ, ಶ್ರೀಧರ ಆಚಾರ್ಯ, ಸದಾಶಿವ ಆಚಾರ್ಯ, ರಾಜೇಶ್ ರಾವ್, ಭಾಸ್ಕರ ಗಡಿಯಾರ್, ಗಣೇಶ್ ಕೋಟ್ಯಾನ್, ರಮಾಕಾಂತ್ ರಾವ್, ವೈ.ಸುಕುಮಾರ್, ಅನಸೂಯ ಶೆಣೈ, ರಾಮಚಂದ್ರ ಆಚಾರ್ಯ ಮತ್ತಿತರರಿದ್ದರು.