ಪಾದೆಬೆಟ್ಟು: 19 ಕೊರಗ ಕುಟುಂಬಗಳ ಮನೆ ನಿರ್ಮಾಣಕ್ಕೆ ಶಾಸಕ ಮೆಂಡನ್‍ರಿಂದ ಶಂಕುಸ್ಥಾಪನೆ

ಪಡುಬಿದ್ರಿ: ಇಲ್ಲಿನ ಸುಜ್ಲಾನ್ ಪುನರ್ವಸತಿ ಕಾಲನಿ ಸಮೀಪ ಕಳೆದ 5 ವರ್ಷಗಳಿಂದ ಅತಂತ್ರರಾಗಿ ಜೀವನ ಸಾಗಿಸುತ್ತಿದ್ದ 19 ಕೊರಗ ಕುಟುಂಬಗಳಿಗೆ ಪಾದೆಬೆಟ್ಟು ಗ್ರಾಮದಲ್ಲಿ ಸರಕಾರದ ವತಿಯಿಂದ ಮಂಜೂರಾದ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಶಾಸಕ ಲಾಲಾಜಿ ಆರ್.ಮೆಂಡನ್ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.

ಪಡುಬಿದ್ರಿಯ ಪಾದೆಬೆಟ್ಟಿನಲ್ಲಿ ತಲಾ 5 ಸೆಂಟ್ಸ್‍ನಂತೆ 19 ಕೊರಗ ಕುಟುಂಬಗಳಿಗೆ ಜಮೀನು ಮಂಜೂರಾಗಿದ್ದು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಲಾ ರೂ 2.20ಲಕ್ಷ ವೆಚ್ಚದ ಮನೆ ನಿರ್ಮಾಣಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಐಟಿಡಿಪಿ, ನಿರ್ಮಿತಿ ಕೇಂದ್ರ ಹಾಗೂ ಪಡುಬಿದ್ರಿ ಗ್ರಾಪಂ ಸಹಯೋಗದಲ್ಲಿ ಚಾಲನೆ ನೀಡಲಾಯಿತು. ಮುಂದಿನ ಮಳೆಗಾಲ ಆರಂಭಕ್ಕೂ ಮುನ್ನ ಈ ಕಾಮಗಾರಿ ಪೂರ್ಣಗೊಳ್ಳಲಿದೆ.ಇಲ್ಲಿ ಮನೆ ನಿರ್ಮಾಣಕ್ಕಾಗಿ 2.1 ಎಕ್ರೆ ಜಮೀನು ಮೀಸರಿಸಲಾಗಿದೆ.
ಇದೇ ಸಂದರ್ಭ ಪರಿಶಿಷ್ಟ ಪಂಗಡದ ಪ್ರದೇಶಾಭಿವೃದ್ಧಿ ನಿಧಿಯಿಂದ 9ಲಕ್ಷ ರೂ. ವೆಚ್ಚದ ಪಾದೆಬೆಟ್ಟು ಕೊರಗರ ಕಾಲೊನಿ ರಸ್ತೆ ಕಾಂಕ್ರೀಟಿಕರಣ, ಶಾಸಕರ ನಿಧಿಯಿಂದ ಪಾದೆಬೆಟ್ಟು ಪಟ್ಲ ಬಳಿ ಐದು ಲಕ್ಷ ರೂ. ವೆಚ್ಚದ ಕಾಲುಸಂಕ ನಿರ್ಮಾಣಕ್ಕೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.

ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಸದಸ್ಯರಾದ ಜಗದೀಶ ಶೆಟ್ಟಿ, ರವಿ ಶೆಟ್ಟಿ, ಲತಾ, ಚುಮ್ಮಿ, ಶ್ರೀನಿವಾಸ ಶರ್ಮ, ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‍ಕುಮಾರ್, ಐಟಿಡಿಪಿ ಯೋಜನಾ ಸಮಯನ್ವಾಧಿಕಾರಿ ಲಲಿತಾದೇವಿ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ, ಅಲ್ಟ್ರಾಟೆಕ್ ಸಿಮೆಂಟ್‍ನ ನಾಗೇಶ್, ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮಾಕಾಂತ ದೇವಾಡಿಗ, ಮಿಥುನ್ ಆರ್ ಹೆಗ್ಡೆ, ಬಾಲಕೃಷ್ಣ ದೇವಾಡಿಗ,ಪಾಂಡುರಂಗ ಕರ್ಕೇರ, ಗಣೇಶ್ ಬಾರ್ಕೂರು, ಶ್ರೀಮತಿ ಉಪಸ್ಥಿತರಿದ್ದರು.

ಅರ್ಚಕರಾದ ವೇದಮೂರ್ತಿ ರಾಮಚಂದ್ರ ಆಚಾರ್ಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.