ಪಲಿಮಾರು: ವಾರ್ಷಿಕ ಕ್ರೀಡಾಕೂಟ

ಪಡುಬಿದ್ರಿ: ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದ್ದರೂ ಸ್ವ-ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಶಿಸ್ತುಬದ್ಧ ಜೀವನ ಕ್ರಮದಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ವಿಶಿಷ್ಟ ಸಾಧನೆ ಮಾಡಬಹುದು ಎಂದು ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ ಅವರು ಫಲಿಮಾರಿನ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಅವರು ಪಥ ಸಂಚಲನದ ಗೌರವ ಸ್ವೀಕಾರ ಮಾಡಿ, ತಾನು ಶಾಲಾ ದಿನಗಳಲ್ಲಿ ಉತ್ತಮ ಕ್ರೀಡಾ ಪಟು ಅಲ್ಲದಿದ್ದರೂ, ನಂತರದ ದಿನಗಳಲ್ಲಿ ಸ್ವಪರಿಶ್ರಮದಿಂದ ದ.ಕ ಹಾಗೂ ಉಡುಪಿ, ಉಭಯ ಜಿಲ್ಲೆಗಳಲ್ಲಿ ಅತ್ಯುತ್ತಮ ವಾಲಿಬಾಲ್ ಪಂದ್ಯಾಟವನ್ನು ರೂಪಿಸಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ ತಮ್ಮ ಅನುಭವವನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.

ಫಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೊ ಕ್ರೀಡಾ ಜ್ಯೋತಿ ಬೆಳಗಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಗಾಯತ್ರಿ ಡಿ ಪ್ರಭು ಕ್ರೀಡಾ ಧ್ವಜವನ್ನು ಅರಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಸಾದ್ ಹಾಗೂ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿ, ಪ್ರೌಢಶಾಲಾ ಹಿರಿಯ ಸಹಶಿಕ್ಷಕಿ ಆಶಾ ಕೆ ವಂದಿಸಿದರು. ವಿದ್ಯಾರ್ಥಿ ನಾಯಕ ಶಿಕ್ಷಿತ್ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ವಿಜ್ಞಾನ ಶಿಕ್ಷಕ ಮಿಲ್ಟನ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.