ಪಲಿಮಾರು ಪರಿಶಿಷ್ಟ ಜಾತಿ ಕುಟುಂಬದೊಂದಿಗೆ ದೀಪಾವಳಿ ಆಚರಣೆ

ಪಡುಬಿದ್ರಿ: ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಯುವಕರು ಸೇರಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಕೊರಗ ಕುಟುಂಬಗಳೊಂದಿಗೆ ದೀಪಾವಳಿ ಆಚರಿಸಿ ಭಾವೈಕ್ಯತೆಗೆ ಸಾಕ್ಷಿಯಾದ ಘಟನೆ ಇಲ್ಲಗೆ ಸಮೀಪದ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ಬಳಿ ಹಲವಾರು ವರ್ಷಗಳಿಂದ ಮುರುಕಲು ಮನೆಯಲ್ಲಿ ವಾಸಿಸಿ, ಇದೀಗ ಸ್ವಂತ ಮನೆಗಳನ್ನು ಹೊಂದಿದ ನಾಲ್ಕು ಪರಿಶಿಷ್ಟ ಜನಾಂಗದ ಕುಟುಂಬದವರು ಆರ್ಥಿಕವಾಗಿ ಹಿಂದುಳಿದಿದ್ದರು. ಆರ್ಥಿಕವಾಗಿ ಹಿಂದುಳಿದವರಾದ್ದರಿಂದ ಉಳಿದವರಂತೆ ತಾವು ದೀಪಾವಳಿ ಆಚರಿಸಲು ವಂಚಿರಾಗಿದ್ದರು. ಇದನ್ನರಿತ ಸ್ಥಳೀಯರಾದ ಅಬ್ದುಲ್ಲ, ಫಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೊ ಮತ್ತು ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ ತಮ್ಮ ಗೆಳೆಯರೊಂದಿಗೆ ಸೇರಿ ಕೊರಗ ಕುಟುಂಬದ ಮನೆಗಳಿಗೆ ತೆರಳಿ ಅಲ್ಲಿ ದೀಪಾವಳಿ ಆಚರಿಸಿದರು.
ಮನೆ ಮಂದಿಯೆಲ್ಲ ಸೇರಿ ದೀಪಗಳನ್ನು ಹಚ್ಚಿ ತಮ್ಮ ಸಾಂಪ್ರದಾಯಿಕ ಡೋಲು ವಾದನ ಮಾಡಿ ಉತ್ಸಾಹದಿಂದ ದೀಪಾವಳಿ ಆಚರಿಸಿದರು.

ಅಲ್ಲಿ ಸೇರಿದ ನಾಲ್ಕು ಕುಟುಂಬದ ಸದಸ್ಯರಿಗೆ ಹೊಸ ಬಟ್ಟೆ, ಅಕ್ಕಿ, ಬೆಲ್ಲ ಮತ್ತು ಸಿಹಿ ತಿಂಡಿ ವಿತರಿಸುವುದರ ಮೂಲಕ ಕೊರಗ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದರು.

ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಫುರ್ತಾಡೊ ಮಾಧ್ಯಮದೊಂದಿಗೆ ಮಾತನಾಡಿ, ದೀಪಾವಳಿ ಬೆಳಕಿನ ಹಬ್ಬ. ಇತ್ತೀಚಿನ ದಿನಗಳಲ್ಲಿ ತಮ್ಮ ಕುಟುಂಬದೊಂದಿಗೆ ಮಾತ್ರ ಆಚರಿಸುತ್ತಾರೆ ವಿನಾಃ ಪಕ್ಕದ ಮನೆಯವರ ಗೋಜಿಗೆ ಹೋಗುವುದಿಲ್ಲ. ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಇತರರೊಂದಿಗೂ ಸೇರಿ ಇಂತಹ ಹಬ್ಬಗಳನ್ನು ಆಚರಿಸಿದರೆ ಅರ್ಥಪೂರ್ಣವಾಗುವುದು ಎಂದರು.

ನವೀನ್‍ಚಂದ್ರ ಸುವರ್ಣ ಮಾತನಾಡಿ, ಕಳೆದ ವರ್ಷ ಕೂಡಾ ಈ ಕುಟುಂಬದವರೊಂದಿಗೆ ನಾವು ದೀಪಾವಳಿ ಆಚರಿಸಿದ್ದೇವೆ. ಇಂತಹ ಆಚರಣೆಗಳು ಈ ರೀತಿ ಆಚರಣೆ ಮಾಡುವುದರೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶ ಹೋಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ಲ ಮಾತನಾಡಿ, ನಾನು ಮುಸ್ಲಿಂ ಆಗಿದ್ದರೂ ಈ ಕುಟುಂಬಗಳಿಗೆ ಮನೆ ದೊರಕಿಸಿ ಕೊಡುವಲ್ಲಿ ಸಫಲನಾಗಿದ್ದೇನೆ. ನಮ್ಮ ಹಬ್ಬಗಳಲ್ಲಿ ಬಡವರಿಗೆ ದಾನ ಮಾಡಿ ಹಬ್ಬ ಆಚರಿಸುತ್ತೇವೆ. ಅದೇ ರೀತಿ ಈ ಬಡ ಕುಟುಂಬಗಳ ಹಬ್ಬಗಳಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಇವತ್ತು ಅವರಿಗೆ ದೀಪಾವಳಿ ಆಚರಿಸಲು ಅನುಕೂಲ ಮಾಡಿಕೊಡುವುದರ ಜೊತೆಗೆ ನಾವು ಹಿಂದು, ಮುಸ್ಲಿಂ, ಕ್ರೈಸ್ತರು ಸೇರಿ ಅವರೊಂದಿಗೆ ದೀಪಾವಳಿ ಆಚರಿಸಿದ್ದೇವೆ ಎಂದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್, ಡ್ಯಾನಿ ಕುಟಿನ್ನೊ ಉಪಸ್ಥಿತರಿದ್ದರು.