ಪಡುಬಿದ್ರಿ 18 ಕೊರಗ ಸಮುದಾಯದವರ ಮನೆ ಲೋಕಾರ್ಪಣೆ ಕೊರಗ ಕುಟುಂಬಗಳ ಸಂತಸ

ಪಡುಬಿದ್ರಿ: ಕಳೆದ 6 ವರ್ಷಗಳಿಂದ ಸುಜ್ಲಾನ್ ಪುನರ್ವಸತಿ ಕಾಲೋನಿ ಬಳಿ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ 18 ಕೊರಗ ಕುಟುಂಬಗಳಿಗೆ ಕೊನೆಗೂ ವಸತಿ ಸೌಲಭ್ಯ ಲಭ್ಯವಾಗಿದೆ.

ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಪಾದೆಬೆಟ್ಟು ಶಾಲೆ ಬಳಿಯ ಕುಚ್ಚಿಗುಡ್ಡೆ ಬಳಿಯ ಜಿಲ್ಲಾಧಿಕಾರಿ ಮನ್ನಾ ಜಮೀನಿನ 95 ಸೆಂಟ್ಸ್ ಜಾಗದಲ್ಲಿ 18 ಕೊರಗ ಕುಟುಂಬಗಳಿಗೆ ಮನೆ ನಿರ್ಮಿಸಲಾಗಿದ್ದು, ಶುಕ್ರವಾರ ಶಾಸಕ ಲಾಲಾಜಿ ಮೆಂಡನ್ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಗೃಹಪ್ರವೇಶ ನಡೆಸಲಾಯಿತು.

19 ಕೊರಗ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಈ ಪೈಕಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಯಡಿ ಪ್ರತಿಯೊಂದು ಮನೆಗೆ ತಲಾ ರೂ. 2.10ಲಕ್ಷ, ಹಾಗೂ ಸಿಂಡಿಕೇಟ್ ಬ್ಯಾಂಕ್‍ನ ಸಿಎಸ್‍ಆರ್ ನಿಧಿಯಿಂದ ತಲಾ ರೂ.10ಸಾವಿರ ಮೊತ್ತವನ್ನು ಭರಿಸಿ 18 ಮನೆಗಳನ್ನು ನಿರ್ಮಿಸಲಾಗಿತ್ತು.

ಕೊರಗ ಸಮುದಾಯದ ಸುಮತಿ, ದಯಾನಂದ, ಮನೋಹರ, ತುಕಾರಾಮ, ಸುರೇಶ್, ಶಶಿಕಲಾ, ಗೀತಾ, ವಸಂತಿ, ಮಲ್ಲಿಕಾ, ಸುನೀತಾ, ಪುದಾ, ಸೀಗೆ, ವಿಜಯ, ಅಣ್ಣು, ಮೆನ್ಪ, ಗೋಪಾಲ, ಕೂಕ್ರ ಮತ್ತು ಶೀಲಾ ಅವರಿಗೆ ಮನೆ ನಿರ್ಮಿಸಿ ಕೊಡಲಾಗಿತ್ತು. ಜಯಂತಿ ಎಂಬವರು ಉತ್ಸಾಹ ತೋರದ ಕಾರಣ ಮನೆ ನಿರ್ಮಾಣ ಕಾರ್ಯ ನಡೆಸಿಲ್ಲ.
ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಂಡಳಿ, ರಾಜೀವ ಗಾಂಧಿ ವಸತಿ ನಿಗಮ, ಉಡುಪಿ ಜಿಲ್ಲಾಡಳಿತ, ರಾಜ್ಯ ನಿರ್ಮಾಣ ಕೇಂದ್ರ, ಕಾರ್ಮಿಕ ಇಲಾಖೆ, ಜಿಲ್ಲಾ ನಿರ್ಮಿತಿ ಕೇಂದ್ರಗಳ ಸಹಯೋಗದೊಂದಿಗೆ ಡಾ.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಫಲಾನುಭವಿಗಳ ಕುಟುಂಬದ 25 ಸದಸ್ಯರು ಸೇರಿದಂತೆ 60 ಮಂದಿ ಮನೆ ನಿರ್ಮಾಣ ಕಾರ್ಯದ ತರಬೇತಿ ಪಡೆದು, ಈ ಎಲ್ಲಾ ಮನೆಗಳನ್ನು ನಿರ್ಮಿಸಿದ್ದರು.

ಮನೆಯಲ್ಲಿ ಹಾಲ್, ಬೆಡ್‍ರೂಂ, ಅಡುಗೆ ಕೋಣೆ, ಡೈನಿಂಗ್ ಹಾಲ್, ಬಾತ್‍ರೂಂ, ಶೌಚಾಲಯ ಒಳಗೊಂಡಿದ್ದು, ಕಿಟಿಕೆಗಳ ಬಾಗಿಲ ಕಾಮಗಾರಿ ನಡೆದಿಲ್ಲ. ಕಾಲೋನಿಗೆ ಶಾಸಕ ಮೆಂಡನ್ ಪ್ರಸ್ತಾವನೆಯಲ್ಲಿ 7.32 ಲಕ್ಷ ವ್ಯಯಿಸಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಗ್ರಾಪಂ ವತಿಯಿಂದ ಎಲ್ಲಾ ಮನೆಗೂ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಕಳೆದ 6 ವರ್ಷಗಳಿಂದ ಜೋಪಡಿಪಟ್ಟಿಯಲ್ಲಿ ವಾಸವಿದ್ದ ಕುಟುಂಬಗಳಿಗೆ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮುತುವರ್ಜಿ ವಹಿಸಿ ಜಮೀನು ಮಂಜೂರುಗೊಳಿಸಿ ಮನೆ ನಿರ್ಮಾಣಕ್ಕೆ ಮುಂದಡಿಯಿಟ್ಟಿದ್ದರು.

ಡೋಲು ಕುಣಿತದೊಂದಿಗೆ ಸ್ವಾಗತ: ಶುಕ್ರವಾರ ತಮ್ಮ ಸಾಂಪ್ರದಾಯಿಕ ಡೋಲು ಮತ್ತು ಕೊಳಲ ವಾದನದೊಂದಿಗೆ ಅತಿಥಿಗಳನ್ನು ಮೆರವಣಿಗೆ ಮೂಲಕ ಕರೆತಂದರು. ಆರಂಭದಲ್ಲಿ ಕಾಲೊನಿಯನ್ನು ಉದ್ಘಾಟಿಸಿದ ಶಾಸಕರು ಬಳಿಕ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನೂ ಉದ್ಘಾಟಿಸಿದರು.

ವೇದಿಕೆಯಲ್ಲಿ ಶಾಸಕರು ದೀಪ ಬೆಳಗಿಸಿ ಗೃಹಪ್ರವೇಶಕ್ಕೆ ಚಾಲನೆ ನೀಡಿದ ಬಳಿಕ 18 ಮನೆಗಳ ಒಡತಿಯರು ಪ್ರತ್ಯೇಕ ದೀಪಗಳೊಂದಿಗೆ ತಮ್ಮ ತಮ್ಮ ಮನೆಗಳಿಗೆ ದೀಪವನ್ನು ಶೃದ್ಧೆಯಿಂದ ಕೊಂಡೊಯ್ದು ಮನೆಯೊಳಗೆ ದೀಪ ಹಚ್ಚುವ ಮೂಲಕ ಗೃಹಪ್ರವೇಶ ಸಾಂಗವಾಗಿ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಮೆಂಡನ್, ಕೊರಗ ಕಾಲೊನಿಯ ಮೂಲಭೂತ ಸೌಕರ್ಯಗಳಿಗಾಗಿ ರೂ.3 ಲಕ್ಷ ನೀಡುವುದಾಗಿ ಭರವಸೆ ನೀಡಿದರು. ಅದೇ ರೀತಿ ಕಾಲೋನಿಯಲ್ಲಿ ಮೀಸಲಿಟ್ಟ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ಜಗದೀಶ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕೊರಗ ಸಮುದಾಯದಲ್ಲಿ ಕಂಡುಬರುವ ಹಿಂಜರಿಕೆಯಿಂದ ಮುಕ್ತರಾಗಬೇಕು. ಕಾಲೊನಿಯ ಸ್ವಚ್ಛತೆಗೆ ಹೆಚ್ಚು ಗಮನವೀಯಬೇಕು. ಕಾಲೊನಿಯ ಎಲ್ಲಾ ಮನೆಗಳ ಮೂಲಭೂತ ಸೌಕರ್ಯಗಳಿಗಾಗಿ ಸರಕಾರದಿಂದ ಸೂಕ್ತ ಅನುದಾನ ಒದಗಿಸಲಾಗುವುದು. ಮುಂದಿನ ಜೂನ್‍ನಲ್ಲಿ ಮತ್ತೆ ಇಲ್ಲಿಗೆ ಭೇಟಿ ನೀಡಲಾಗುವುದು. ಆ ಸಂದರ್ಭ ಮಲ್ಲಿಗೆ ಕೃಷಿ ಸಹಿತ ಸುತ್ತ ಗಿಡಮರಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅದೇ ಸಂದರ್ಭ ಕಾಲೊನಿಗೆ ಸೂಕ್ತ ನಾಮಕರಣ ಮಾಡಲಾಗುವುದು ಎಂದ ಅವರು ಯಾವುದೇ ಕಾರಣಕ್ಕೆ ಮನೆ ಖಾಲಿ ಮಾಡಿದರೆ ಮನೆಯನ್ನು ವಾಪಾಸು ಪಡೆಯಲಾಗುವುದು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದರು.

ಸನ್ಮಾನ: ಕೊರಗ ಕಾಲೊನಿಯ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾಗಿ ಸಹಕರಿಸಿದ ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮನೆ ನಿರ್ಮಾನದ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್, ಐಟಿಡಿಪಿ ಯೋಜನಾ ಸಮನ್ವಯಾಧಕಾರಿ ಲಲಿತಾಬಾೈ, ಹುಭಾಷಿಕ ಕೊರಗರ ಕಲಾ ವೇದಿಕೆಯ ಅಧ್ಯಕ್ಷ ಗಣೇಶ್ ಬಾರ್ಕೂರು, ಕೊರಗ ಕುಟುಂಬದ ಗುರಿಕಾರ ಪ್ರಕಾಶ್, ಕಾಲೊನಿಗೆ ಸರ್ವ ರೀತಿಯಲ್ಲಿ ಸಹಕರಿಸಿದ ಚಂದ್ರಶೇಖರ್ ರಾವ್‍ರವರನ್ನು ಸನ್ಮಾನಿಸಲಾಯಿತು. ಕೊರಗ ಕಾಲೋನಿಯ ನಿರ್ಮಾಣದಲ್ಲಿ ನಿರಂತರ ಹೋರಾಟ ನಡೆಸಿ ಯಶಸ್ವಿಯಾದ ಎಮ್‍ಎಸ್‍ಡಬ್ಲ್ಯು ಪದವೀಧರೆ ಶ್ರೀಮತಿಯವರನ್ನು ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಶ್ರೀಮತಿ, ಹೋರಾಟಕ್ಕೆ ನಾನೊಬ್ಬಳೇ ಕಾರಣವಲ್ಲ. ತಾನು ಕರೆದಲ್ಲೆಲ್ಲಾ ಸಮುದಾಯದವರು ನನ್ನನ್ನು ಹಿಂಬಾಲಿಸಿದ್ದರು. ಜಿಲ್ಲಾಡಳಿತ, ಸ್ಥಳೀಯಾಡಳಿತ ಸೂಕ್ತವಾಗಿ ಸ್ಪಂದಿಸಿದ್ದರು. ಇದೀಗ ಸ್ವಂತ ಮನೆಯಲ್ಲಿ ವಾಸ ಮಾಡುವುದು ಅತ್ಯಂತ ಖುಷಿ ತಂದಿದೆ ಎಂದರು.

ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಉಪಾಧ್ಯಕ್ಷ ವೈ.ಸುಕುಮಾರ್, ಜಿಪಂ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ ಮತ್ತು ಗೀತಾಂಜಲಿ ಸುವರ್ಣ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಗ್ರಾಪಂ ಸದಸ್ಯರಾದ ಚುಮ್ಮಿ, ಕೊರಗ ಕಾಲೊನಿಯ ಮಲ್ಲಿಕಾ, ಐಟಿಡಿಪಿಯ ತನಿಖಾ ಸಹಾಯಕ ವಿಶ್ವನಾಥ್, ಗಣೇಶ್ ಕುಂದಾಪುರ ಉಪಸ್ಥಿತರಿದ್ದರು.

ಶೇಖರ್ ಮರವಂತೆ ಕಾರ್ಯಕ್ರಮ ನಿರ್ವಹಿಸಿದರು. ಕಮಲ ಮತ್ತು ತಂಡದವರು ಪಾಡ್ದನ ಮೂಲಕ ಪ್ರಾರ್ಥಿಸಿದರು. ಕೊರಗ ಸಮುದಾಯದ ಎಮ್‍ಕಾಂ ಪದವೀಧರೆ ಹರಿಣಾಕ್ಷಿ ಸ್ವಾಗತಿಸಿದರು. ಶ್ರೀಮತಿ ವಂದಿಸಿದರು.

ಮನೆಗಳ ಒಡತಿಯರು ದೀಪ ಹಿಡಿದು ಗೃಹಪ್ರವೇಶಕ್ಕೆ ಸಿದ್ಧರಾಗಿರುವುದು.
ಮನೆ ನಿರ್ಮಾಣಕ್ಕೆ ಸಹಕರಿಸಿದವರಿಗೆ ಸನ್ಮಾನ.
ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಶಾಸಕ ಮೆಂಡನ್ ಉದ್ಘಾಟಿಸಿದರು.